ಪ್ರಜ್ಞಾ ಸಿಂಗ್ ರನ್ನು ಪಕ್ಷದಿಂದ ಕೈಬಿಟ್ಟು ಬಿಜೆಪಿ ರಾಜಧರ್ಮ ಪಾಲಿಸಲಿ: ಕೈಲಾಶ್ ಸತ್ಯಾರ್ಥಿ

Update: 2019-05-18 17:41 GMT

ಹೊಸದಿಲ್ಲಿ, ಮೇ 18: ಮಹಾತ್ಮಾ ಗಾಂಧಿ ಅಧಿಕಾರ ಹಾಗೂ ರಾಜಕೀಯದಿಂದ ಅತೀತರು ಎಂದು ಶನಿವಾರ ಹೇಳಿರುವ ನೋಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ, ನಾಥುರಾಮ್ ಗೋಡ್ಸೆ ಮಹಾತ್ಮಾ ಗಾಂಧಿ ಅವರ ದೇಹವನ್ನು ಕೊಂದ. ಆದರೆ, ಪ್ರಜ್ಞಾ ಸಿಂಗ್ ಠಾಕೂರ್ ಅವರ ಆತ್ಮವನ್ನೇ ಕೊಂದರು. ಆದುದರಿಂದ ಬಿಜೆಪಿ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದರು.

ಮಧ್ಯಪ್ರದೇಶದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾಲೇಗಾಂವ್ ಸ್ಫೋಟದ ಆರೋಪಿ ಹಾಗೂ ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್, ಮಹಾತ್ಮಾಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದು ಹೇಳಿಕೆ ನೀಡಿದ ಒಂದು ದಿನದ ಬಳಿಕ ಸತ್ಯಾರ್ಥಿ ಈ ಹೇಳಿಕೆ ನೀಡಿದ್ದಾರೆ. ಪ್ರಜ್ಞಾ ಸಿಂಗ್ ಠಾಕೂರ್, ನನಗೆ ಗಾಂಧೀಜಿ ಅವರ ಮೇಲೆ ಅಪಾರ ಗೌರವವಿದೆ. ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಅನಂತರ ಹೇಳಿದ್ದರು.

  ‘‘ಗೋಡ್ಸೆ ಗಾಂಧೀಜಿ ಅವರ ದೇಹವನ್ನು ಕೊಂದ. ಆದರೆ, ಪ್ರಜ್ಞಾ ಸಿಂಗ್ ಠಾಕೂರ್‌ನಂತವರು ಅಹಿಂಸೆ, ಸಹಿಷ್ಣುತೆ, ಶಾಂತಿ ಹಾಗೂ ಭಾರತದ ಆತ್ಮವನ್ನು ಕೊಂದರು. ಗಾಂಧೀಜಿ ಅವರು ಅಧಿಕಾರ ಹಾಗೂ ರಾಜಕೀಯದಿಂದ ಅತೀತರು. ಬಿಜೆಪಿ ಸಣ್ಣ ಲಾಭದ ಆಕಾಂಕ್ಷೆ ಬಿಟ್ಟುಬಿಡಬೇಕು ಹಾಗೂ ರಾಜಧರ್ಮ ಅನುಸರಿಸದೇ ಇರುವ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕು.’’ ಎಂದು ಕೈಲಾಸ್ ಸತ್ಯಾರ್ಥಿ ಟ್ವೀಟ್ ಮಾಡಿದ್ದಾರೆ.

ಪ್ರಜ್ಞಾ ಸಿಂಗ್ ಠಾಕೂರ್ ಅವರು ಗುರುವಾರ, ‘‘ಗೋಡ್ಸೆ ದೇಶಭಕ್ತರಾಗಿದ್ದರು. ಅವರು ಈಗಲೂ ದೇಶಭಕ್ತ. ಇನ್ನು ಮುಂದೆ ಕೂಡ ದೇಶಭಕ್ತ. ಯಾರು ಅವರನ್ನು ಉಗ್ರ ಎಂದು ಕರೆಯುತ್ತಾರೊ ಅವರು ತನ್ನ ಒಳಗನ್ನು ನೋಡಿಕೊಳ್ಳಬೇಕು. ಅಂತವರಿಗೆ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಾಗುವುದು’’ ಎಂದಿದ್ದರು.

ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಸ್ವತಂತ್ರ ಭಾರತದ ಮೊದಲ ಹಿಂದೂ ಉಗ್ರ ಗೋಡ್ಸೆ ಎಂಬ ಹೇಳಿಕೆಗೆ ಪ್ರತಿಯಾಗಿ ಪ್ರಜ್ಞಾ ಸಿಂಗ್ ಠಾಕೂರ್ ಈ ಹೇಳಿಕೆ ನೀಡಿದ್ದರು. ಪ್ರಜ್ಞಾ ಸಿಂಗ್ ಠಾಕೂರ್ ಅನಂತರ ತನ್ನ ಹೇಳಿಕೆಗೆ ಕ್ಷಮೆ ಕೋರಿದ್ದರು.

 ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿರುವ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ನಾನು ಎಂದಿಗೂ ಕ್ಷಮಿಸಲಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News