ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ದಾಖಲೆ ನಿರ್ಮಿಸಿದರೂ ಗೆಲುವು ದಕ್ಕಲಿಲ್ಲ!

Update: 2019-05-18 09:37 GMT
ಬೆನ್ ಸ್ಟೋಕ್ಸ್ (ಔಟಾಗದೆ 71)

ನಾಟಿಂಗ್‌ಹ್ಯಾಮ್, ಮೇ 18: ಪಾಕಿಸ್ತಾನ ತಂಡ ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಶುಕ್ರವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಸತತ ಮೂರನೇ ಬಾರಿ 340ಕ್ಕೂ ಅಧಿಕ ರನ್ ಗಳಿಸಿದ ಮೊದಲ ತಂಡ ಎನಿಸಿಕೊಳ್ಳುವುದರೊಂದಿಗೆ ದಾಖಲೆ ನಿರ್ಮಿಸಿತು. ಆದರೆ, ಕೆಲವೇ ಗಂಟೆಗಳಲ್ಲಿ ಇಂಗ್ಲೆಂಡ್ ತಂಡ ಸತತ ಮೂರು ಬಾರಿ 340ಕ್ಕೂ ಅಧಿಕ ರನ್ ಗಳಿಸಿದ ಎರಡನೇ ತಂಡ ಎನಿಸಿಕೊಂಡಿತು. 4ನೇ ಪಂದ್ಯವನ್ನು 3 ವಿಕೆಟ್‌ಗಳಿಂದ ಗೆದ್ದುಕೊಂಡಿತು.

 ಉಭಯ ತಂಡಗಳ ಮೊದಲ ಪಂದ್ಯ ಮಳೆಗಾಹುತಿಯಾಗಿತ್ತು. ಆ ಬಳಿಕ ನಡೆದ ಸತತ 3 ಪಂದ್ಯಗಳಲ್ಲಿ ಪಾಕ್ 7ಕ್ಕೆ 361, 9 ವಿಕೆಟ್‌ಗೆ 358 ಹಾಗೂ 7 ವಿಕೆಟ್‌ಗೆ 340 ರನ್ ಗಳಿಸಿತ್ತು. ದುರದೃಷ್ಟವಶಾತ್ ಮೂರೂ ಪಂದ್ಯಗಳಲ್ಲಿ ಸೋಲುಂಡಿತು. ಶುಕ್ರವಾರದ ಪಂದ್ಯವನ್ನು ಜಯಿಸುವುದರೊಂದಿಗೆ ಆತಿಥೇಯ ಇಂಗ್ಲೆಂಡ್ 5 ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ಕ್ರಮವಾಗಿ 2ನೇ, 3ನೇ ಹಾಗೂ 4ನೇ ಪಂದ್ಯದಲ್ಲಿ 3ಕ್ಕೆ373, 4ಕ್ಕೆ 359 ಹಾಗೂ 7ಕ್ಕೆ341 ರನ್ ಕಲೆ ಹಾಕಿದೆ.

ಸೌತಾಂಪ್ಟನ್‌ನಲ್ಲಿ ನಡೆದ 2ನೇ ಪಂದ್ಯವನ್ನು ಇಂಗ್ಲೆಂಡ್ 12 ರನ್‌ಗಳಿಂದ ಗೆದ್ದುಕೊಂಡಿದ್ದರೆ, ಬ್ರಿಸ್ಟೋಲ್‌ನಲ್ಲಿ ನಡೆದ 3ನೇ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಇದೀಗ 4ನೇ ಪಂದ್ಯವನ್ನು 3 ವಿಕೆಟ್‌ಗಳಿಂದ ಜಯಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡ ಬಾಬರ್ ಆಝಂ(115) ಶತಕದ ಬೆಂಬಲದಿಂದ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 340ರ ನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ ಜೇಸನ್ ರಾಯ್(114) ಶತಕ ಹಾಗೂ ಬೆನ್ ಸ್ಟೋಕ್ಸ್ (ಔಟಾಗದೆ 71) ಅರ್ಧಶತಕದ ಕೊಡುಗೆ ನೆರವಿನಿಂದ ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ರಾಯ್ ಅವರು ಜೇಮ್ಸ್ ವಿನ್ಸಿ(43) ಹಾಗೂ ಜೋ ರೂಟ್(36)ಅವರೊಂದಿಗೆ ಜೊತೆಯಾಟ ನಡೆಸಿ ರನ್ ಚೇಸಿಂಗ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News