ಅಬುಧಾಬಿ: ಭಾರತೀಯರನ್ನು ಒಂದುಗೂಡಿಸಿದ ‘ಸೌಹಾರ್ದ ಇಫ್ತಾರ್’

Update: 2019-05-18 15:30 GMT

ಅಬುಧಾಬಿ, ಮೇ 18: ಅಬುಧಾಬಿಯ ಇಂಡಿಯನ್ ಸೋಶಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್ ನಲ್ಲಿ ಇತ್ತೀಚೆಗೆ ವಾರ್ಷಿಕ ಇಫ್ತಾರ್ ನಡೆಯಿತು. ಕೂಟದಲ್ಲಿ ಪೇಟಧಾರಿ ಸಿಖ್ಖರು ಸೇರಿದಂತೆ ಎಲ್ಲಾ ಧರ್ಮಗಳ ಜನರು ಭಾಗವಹಿಸಿದ್ದರು.

“ಪರಸ್ಪರರ ನಂಬಿಕೆ ಮತ್ತು ಸಂಸ್ಕೃತಿಯನ್ನು ಗೌರವಿಸಿ ಆಚರಿಸುವ ಪದ್ಧತಿ ಭಾರತೀಯರಲ್ಲಿ ಹಿಂದಿನಿಂದಲೂ ಬೆಳೆದು ಬಂದಿದೆ'' ಎಂದು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹಾಜರಿದ್ದ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಭಾರತದ ರಾಯಭಾರಿ ನವದೀಪ್ ಸಿಂಗ್ ಸೂರಿ ಹೇಳಿದರು.

“ದೀಪಾವಳಿ, ನವರಾತ್ರಿ, ಈದ್ ಮತ್ತು ಕ್ರಿಸ್ಮಸ್ ಹೀಗೆ ಎಲ್ಲಾ ಹಬ್ಬಗಳನ್ನೂ ಆಚರಿಸುವ ಸಂಪ್ರದಾಯವಿದ್ದ ವಾತಾವರಣದಲ್ಲಿ ನಾನು ಬೆಳೆದವನು. ಪುಟ್ಟ ಬಾಲಕನಾಗಿದ್ದಾಗ ಈ ಎಲ್ಲಾ ಹಬ್ಬಗಳನ್ನೂ ನಾನು ಕಾತುರದಿಂದ ಎದುರು ನೋಡುತ್ತಿದ್ದೆ. ಇದು ನಮ್ಮ ಸಂಪ್ರದಾಯದ ಭಾಗವಾಗಿದೆ. ಇಲ್ಲಿ ಸೇರಿದವರಲ್ಲಿ ಉಪವಾಸ ನಿರತರು ಹಾಗೂ ಉಪವಾಸ ಆಚರಿಸದ ಹಲವಾರು ಮಂದಿಯಿರುವುದರಿಂದ ಇದು ರಮಝಾನ್ ನ ಆಶಯ ಹಾಗೂ ಭಾರತದ ಸಂಸ್ಕೃತಿಯ ಆಶಯದ ದ್ಯೋತಕವಾಗಿದೆ'' ಎಂದು ಅವರು  ಹೇಳಿದರು.

ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಸಹಿಷ್ಣುತೆಯ ವರ್ಷವಾದ ಈ ಸಂದರ್ಭ ನಡೆಯುತ್ತಿರುವ ಈ ಸಮಾರಂಭದ ಬಗ್ಗೆ ಮಾತನಾಡಿದ ಅವರು, “ಭಾರತೀಯರಷ್ಟು  ಸಹಿಷ್ಣುತೆಯ ಮೌಲ್ಯವನ್ನು ಎತ್ತಿ ಹಿಡಿಯುವವರು ಜಗತ್ತಿನಲ್ಲಿ ಬೇರ್ಯಾರೂ ಇಲ್ಲ'' ಎಂದೂ ಹೇಳಿದರು.

ಅಬುಧಾಬಿಯ ಮೊದಲ ಹಿಂದು ದೇವಸ್ಥಾನದ ನಿರ್ಮಾಣಕ್ಕೆ ಸಹಕರಿಸಿದ  ಸಂಯುಕ್ತ ಅರಬ್ ಸಂಸ್ಥಾನದ ನಾಯಕತ್ವವನ್ನೂ ಭಾರತೀಯ ರಾಯಭಾರಿ ಈ ಸಂದರ್ಭ ಹಾಡಿ ಹೊಗಳಿದರು. “ಸಹಿಷ್ಣುತೆ ಹಾಗೂ ಸೌಹಾರ್ದತೆಯ ಮೌಲ್ಯಗಳಿಗೆ ಸದಾ ಈ ದೇಶ ಬದ್ಧವಾಗಿದೆ ಎಂಬುದು ಈ ದೇವಳದ ಶೀಘ್ರ ನಿರ್ಮಾಣದಲ್ಲಿ ಸಾಬೀತುಗೊಂಡಿದೆ'' ಎಂದು ಅವರು ವಿವರಿಸಿದರು.

ಇಂಡಿಯನ್ ಸೋಶಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್ ನ ಅಧ್ಯಕ್ಷ ಡಿ. ನಟರಾಜನ್ ಮಾತನಾಡಿ, ಇಸ್ಲಾಂ ಧರ್ಮದಲ್ಲಿ ಸಮಾನತೆ, ಸಹಿಷ್ಣುತೆ ಹಾಗೂ ಭ್ರಾತೃತ್ವದ ಮೌಲ್ಯಗಳನ್ನು ಮಹತ್ವವನ್ನು ವಿವರಿಸಿದರು. “ಇಸ್ಲಾಂ ಧರ್ಮದ ಐದು ಆಧಾರ ಸ್ಥಂಭಗಳಾದ-ಶಹಾದತ್, ಸಲಾಹ್, ಉಪವಾಸ, ಝಕಾತ್ ಹಾಗೂ ಹಜ್ ಇವುಗಳನ್ನು ಮುಸ್ಲಿಮರಲ್ಲಿ ಸಮಾನತೆ ಹಾಗೂ ಭ್ರಾತೃತ್ವ ಭಾವನೆಗಳನ್ನು ಬೆಳೆಸುವ ಉದ್ದೇಶದಿಂದಲೇ  ದೇವರು ಅವುಗಳನ್ನು ಪಾಲಿಸಲು ಸೂಚಿಸಿದ್ದಾನೆ. ನಮಾಝ್ ಸಂದರ್ಭ ಯಾರಿಗೂ ವಿಶೇಷ  ಆದ್ಯತೆ ನೀಡಲಾಗುವುದಿಲ್ಲ,  ಯಾರಾದರೂ ತಡವಾಗಿ ಆಗಮಿಸಿದರೆ ಆತ ದೇಶದ ಅರಸನಾಗಿದ್ದರೂ ಮಸೀದಿಯ ಕೊನೆಯ ಸಾಲಿನಲ್ಲಿ ನಿಲ್ಲಬೇಕು'' ಎಂದು ಅವರು ಹೇಳಿದರು.

ಆರನೇ ಕುರ್ ಆನ್ ಪಠಣ ಸ್ಪರ್ಧೆಯನ್ನು ಈ ಸಂದರ್ಭ ರಾಯಭಾರಿಗಳು ಉದ್ಘಾಟಿಸಿದರು. ಮೇ 24ರಂದು ಪ್ರಶಸ್ತಿ ವಿತರಣೆ ಸಮಾರಂಭದೊಂದಿಗೆ ಈ ಸ್ಪರ್ಧೆ ಕೊನೆಗೊಳ್ಳಲಿದೆ.

Writer - ತುಫೈಲ್ ಮುಹಮ್ಮದ್, thenational.ae

contributor

Editor - ತುಫೈಲ್ ಮುಹಮ್ಮದ್, thenational.ae

contributor

Similar News