ನೂರಕ್ಕೆ ನೂರು ಅಂಕ: ಯಾಕೆ ಆತಂಕ?

Update: 2019-05-18 18:30 GMT

ಕರ್ನಾಟಕ ಎಸೆಸ್ಸೆಲ್ಸಿಸಿ ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು 625ರಲ್ಲಿ 625 ಅಂಕಗಳನ್ನು ಪಡೆದಿದ್ದು ದೊಡ್ಡ ಸುದ್ದಿಯಾಯಿತು. ಭಾಷಾವಿಷಯಗಳೂ ಸೇರಿ (ಕನ್ನಡ, ಇಂಗ್ಲಿಷ್) ಮಾನವಿಕ ವಿಷಯಗಳಲ್ಲಿ ಹಲವಾರು ವಿದ್ಯಾರ್ಥಿಗಳು ಶೇ. 100 ಅಂಕಗಳಿಸಿದ್ದಾರೆ. ವರದಿಯೊಂದರ ಪ್ರಕಾರ ಭೂಗೋಳಶಾಸ್ತ್ರದಲ್ಲಿ ಸುಮಾರು 700 ವಿದ್ಯಾರ್ಥಿಗಳು ನೂರರಲ್ಲಿ ನೂರು ಅಂಕಗಳಿಸಿದ್ದಾರೆ. ಈ ಅಂಕಗಳ ಹಬ್ಬವನ್ನು ಪೋಷಕರು ಮತ್ತು ವಿದ್ಯಾರ್ಥಿ ಹಾಗೂ ಪೋಷಕರಿಗಿಂತ ಹೆಚ್ಚಾಗಿ, ಸಂಬಂಧಿತ ಶಿಕ್ಷಣ ಸಂಸ್ಥೆಗಳು ಸಂಭ್ರಮಿಸಿವೆ. ಪತ್ರಿಕೆಗಳಲ್ಲಿ ಪೂರ್ಣ ಪುಟದ ಜಾಹೀರಾತುಗಳನ್ನು ನೀಡಿ ಫಲಿತಾಂಶಗಳ ಪ್ರತಿಶತಕ್ಕೂ ಶಾಲೆಗಳ ಪ್ರತಿಷ್ಠೆಗೂ ತಾಳೆಹಾಕಿ ‘‘ನಿಮ್ಮ ಮಕ್ಕಳನ್ನು ನಮ್ಮಲ್ಲಿಗೇ ಕಳುಹಿಸಿ. ನಾವು ವಿಧಿಸುವ ಬೃಹತ್ ಮೊತ್ತದ ಶುಲ್ಕವನ್ನು ನಮಗೇ ಕೊಡಿ’’ ಎಂದು ದುಂಬಾಲು ಬೀಳುತ್ತವೆ. ಇದನ್ನೆಲ್ಲ ಗಮನಿಸುವಾಗ ಈ ರಾಜ್ಯದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಾಳಜಿ ಹೊಂದಿರುವವರನ್ನು ಆತಂಕಗಳು, ಹತ್ತಾರು ಪ್ರಶ್ನೆಗಳು ಕಾಡದಿರುವುದಿಲ್ಲ.

ಯಾಕೆಂದರೆ ಐತಿಹಾಸಿಕವಾದ ಈ ‘ನೂರಕ್ಕೆ ನೂರು’ಅಂಕಗಳಿಕೆಯ ‘ಸಾಧನೆ’ಗಳು ನಮ್ಮ ಶಿಕ್ಷಣವ್ಯವಸ್ಥೆಯಲ್ಲಿರುವ ಪ್ರಶ್ನೆ ಪತ್ರಿಕೆ ರಚನಾ ಪಕ್ರಿಯೆ ಮತ್ತು ವಿದ್ಯಾರ್ಥಿಗಳ ಉತ್ತರಪತ್ರಿಕೆಗಳ ವೌಲ್ಯಮಾಪನ ವಿಧಿ-ವಿಧಾನಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡುತ್ತವೆ. ಇದಕ್ಕೆ ಕಾರಣಗಳು ಇಲ್ಲದೆ ಇಲ್ಲ. ಗಣಿತ, ಭೌತಶಾಸ್ತ್ರದಂತಹ ಖಚಿತ ಹಾಗೂ ವಸ್ತುನಿಷ್ಠ ಮತ್ತು ವಿವರಣೆಗಳು ಮುಖ್ಯವಲ್ಲದ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ನೀಡುವುದು ಸಾಧ್ಯ. ಆದರೆ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ಕನ್ನಡ, ಇಂಗ್ಲಿಷ್‌ನಂತಹ ವ್ಯಕ್ತಿನಿಷ್ಠ (ಸಬ್ಜೆಕ್ಟಿವ್)ವಾದ, ವಿವರಣೆಗಳನ್ನು ಬೇಡುವ ಮತ್ತು ಬರವಣಿಗೆಯ ಶೈಲಿ ಕೂಡ ಮುಖ್ಯವಾಗಿರುವ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ನೀಡಿಕೆ ಹೇಗೆ ಸಾಧ್ಯ?

 ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳು ಗಳಿಸುವ ‘ಹೈಮಾರ್ಕ್ಸ್’ಗಳಿಗೆ ಸಮಾನವಾಗಿ ಮಾನವಿಕ ವಿಷಯಗಳಲ್ಲಿಯೂ ವಿದ್ಯಾರ್ಥಿಗಳು ಗರಿಷ್ಠ ಅಂಕಗಳನ್ನು ಗಳಿಸಬೇಕೆಂಬ ಉದ್ದೇಶದಿಂದ ‘ಆಬ್ಜೆಕ್ಟಿವ್’ ಪ್ರಶ್ನೆಗಳನ್ನು ‘ಮಲ್ಟಿಪಲ್ ಚಾಯ್ಸಿ ’ ಮಾದರಿಯಲ್ಲಿ ನೀಡಿ ‘ನೂರಕ್ಕೆ ನೂರು’ಎಂಬ ಸಾಧನೆಗೆ ಈಗ ಹಾದಿ ಮಾಡಿಕೊಡಲಾಗುತ್ತಿದೆ. ಆದರೆ ಇದು ವಿದ್ಯಾರ್ಥಿಗಳಲ್ಲಿ ‘ನಾನು ಇನ್ನು ಸಾಧಿಸಲಿಕ್ಕೆ ಏನು ಉಳಿದಿದೆ?’ ಎಂಬ ಸ್ವಸಂತೃಪ್ತ, ತಪ್ಪು ಮನೋಭಾವವನ್ನು ಸೃಷ್ಟಿಸುವ ಸಾಧ್ಯತೆಯಿದೆ. ಸೃಜನಶೀಲತೆ ಮತ್ತು ಸ್ವಂತಿಕೆಯನ್ನು ಅಮುಖ್ಯಗೊಳಿಸುವ ಅಪಾಯವಿದೆ.

ಉದಾಹರಣೆಗೆ,ಇಂಗ್ಲಿಷ್ ಭಾಷೆಯ ವಿಷಯಕ್ಕೆ ಬರೋಣ, ಸುಮಾರು ನಲ್ವತ್ತು ವರ್ಷಗಳ ಕಾಲ ಹಲವು ದೇಶಗಳ ವಿವಿಧ ಹಂತಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯನ್ನು ಬೋಧಿಸಿದವನಾಗಿ ಮತ್ತು ಇಂಗ್ಲೆಂಡಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯವೊಂದರಲ್ಲಿ ಇಂಗ್ಲಿಷ್ ಮಾತೃಭಾಷೆಯ (ನೇಟಿವ್ ಸ್ಪೀಕರ್ಸ್‌ ಆಫ್ ಇಂಗ್ಲಿಷ್)ಬ್ರಿಟಿಷ್ ವಿದ್ಯಾರ್ಥಿಗಳ ಜೊತೆ ಕುಳಿತು ಇಂಗ್ಲಿಷ್ ಕಲಿತ ಹಾಗೂ ಇಂಗ್ಲಿಷ್ ಶಿಕ್ಷಕರಿಗೆ ಇಂಗ್ಲಿಷ್ ಕಲಿಸುವುದನ್ನು ಕಲಿತ ಓರ್ವ ಇಂಗ್ಲಿಷ್ ಭಾಷಾ ತಜ್ಞನಾಗಿ ನನ್ನನ್ನು ಕಾಡುವ ಕೆಲವು ಅನುಮಾನಗಳನ್ನು ಮತ್ತು ಪ್ರಶ್ನೆಗಳನ್ನು ಇಲ್ಲಿ ದಾಖಲಿಸಬಯಸುತ್ತೇನೆ. ಇಂಗ್ಲಿಷ್ ಮಾತೃ ಭಾಷೆಯಲ್ಲದವರಿಗೆ ಇಂಗ್ಲಿಷ್‌ನ ಮೇಲೆ ‘ನೂರಕ್ಕೆ ನೂರರಷ್ಟು’ಪ್ರಭುತ್ವ,ಮಾಸ್ಟರಿ ಯಾಕೆ ಅಷ್ಟೊಂದು ಸುಲಭ ಸಾಧ್ಯವಲ್ಲ? ಎಂಬುದಕ್ಕೆ ನಾನು ಇಂಗ್ಲೆಂಡಿನಲ್ಲಿ ವಿದ್ಯಾರ್ಥಿಯಾಗಿದ್ದ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಒಂದು ಅಧ್ಯಯನವನ್ನು ಉದಾಹರಿಸುತ್ತೇನೆ : ಇಂಗ್ಲಿಷ್ ಭಾಷೆಯನ್ನು ಒಂದು ದ್ವಿತೀಯ ಭಾಷೆಯಾಗಿ ಅಥವಾ ವಿದೇಶೀ ಭಾಷೆಯಾಗಿ ಕಲಿಯುವವರಿಗೆ ಅತ್ಯಂತ ಹೆಚ್ಚು ಸಮಸ್ಯಾತ್ಮಕವಾದ ಒಂದು ಶಬ್ದವೆಂದರೆ ಕೇವಲ ಮೂರು ಲೆಟರ್‌ಗಳಿರುವ ‘ದಿ’ ಅಥವಾ ‘ದ’ (the) ಎಂಬ ಒಂದುಶಬ್ದ. ಇಂಗ್ಲಿಷ್‌ನಲ್ಲಿರುವ ಆರ್ಟಿಕಲ್ಸ್ articles) ಗಳಲ್ಲಿ (ಅಂದರೆ a, an, ಮತ್ತು the) ಬಳಸಲು ಅತ್ಯಂತ ಕಷ್ಟಕರವಾದ ಶಬ್ದ ಇದು. ಮ್ಯಾಂಚೆಸ್ಟರ್‌ನಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಇಂಗ್ಲಿಷ್ ಮಾತೃಭಾಷೆಯಾಗಿ ಇರುವ ಮತ್ತು ‘ಶಿಕ್ಷಕ’ನಾದ ಓರ್ವ ಇಂಗ್ಲಿಷ್‌ಮನ್‌ಗೇ ಈ ಶಬ್ದವನ್ನು ತಪ್ಪಿಲ್ಲದಂತೆ ಬಳಸಲು ಸುಮಾರು ಹತ್ತು ವರ್ಷಗಳ ‘ಕಲಿಕೆ’ಬೇಕಾಗುತ್ತದೆ!.

ಇಲ್ಲಿ ಇನ್ನೂ ಒಂದು ವಿಷಯವನ್ನು ಪ್ರಸ್ತಾಪಿಸ ಬಯಸುತ್ತೇನೆ. ಕಳೆದ ಕೆಲವು ವರ್ಷಗಳಲ್ಲಿ ನಾನು ಇಂಗ್ಲಿಷ್‌ನಲ್ಲಿ ಬರೆಯಲಾಗಿರುವ ಸುಮಾರು ಇಪ್ಪತ್ತು ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಪಿಎಚ್. ಡಿ. ಮಹಾ ಪ್ರಂಬಂಧಗಳನ್ನು ಪರಿಶೀಲಿಸಿ, ಅವುಗಳ ಇಂಗ್ಲಿಷ್ ಭಾಷಾ ವೌಲ್ಯಮಾಪನ ಮಾಡಿದ್ದೇನೆ. ಆ ಮಹಾಪ್ರಬಂಧಗಳನ್ನು ಬರೆದವರು ಇಂಗ್ಲಿಷ್ ಮಾಧ್ಯಮದಲ್ಲೇ ಕಲಿತು ಪಿಯುಸಿಯಲ್ಲಿ ವಿಜ್ಞಾನ ವಿಷಯಗಳನ್ನು ಆಯ್ಕೆ ಮಾಡಿ,ಪಿಯುಸಿಯಲ್ಲಿ ಗಳಿಸಿದ ಪ್ರತಿಶತ ಅಂಕಗಳ ಆಧಾರದಲ್ಲಿ ‘ಹೈ ಮಾರ್ಕ್ಸ್ ’ ಪಡೆದು ಇಂಜಿನಿಯರಿಂಗ್ ವಿಷಯಗಳಲ್ಲಿ ಪದವಿ,ಬಳಿಕ ಸ್ನಾತಕೋತ್ತರ ಪದವಿ ಪಡೆದು ಈ ದೇಶದ ‘ರಾಷ್ಟ್ರೀಯ ಮಹತ್ವದ’ಒಂದು ತಾಂತ್ರಿಕ ಸಂಸ್ಥೆಯಲ್ಲಿ 3 ರಿಂದ 5 ವರ್ಷಗಳ ಕಾಲ ಸಂಶೋಧನೆ ನಡೆಸಿದ ಸಂಶೋಧನಾ ವಿದ್ವಾಂಸರು. ಆ ವೇಳೆಗೆ ಅವರು ಪ್ರಾಥಮಿಕ ಹಂತದಿಂದ ಆರಂಭಿಸಿ ಸಂಶೋಧನಾ ಅವಧಿಯ ಅಂತ್ಯದವರೆಗೆ ಸುಮಾರು ಹದಿನಾಲ್ಕು ಅಥವಾ ಹದಿನೈದು ಸಾವಿರ ಗಂಟೆಗಳಷ್ಟು ಅವಧಿಯ ಇಂಗ್ಲಿಷ್ ಕಲಿತಿರುತ್ತಾರೆ.

ಅಥವಾ ಒಟ್ಟಾರೆಯಾಗಿ ಇಂಗ್ಲಿಷ್‌ಗೆ ‘ಎಕ್ಸ್ ಪೋಸ್’ಆಗಿರುತ್ತಾರೆ. ಇಷ್ಟೊಂದು ಸಾವಿರ ಗಂಟೆಗಳ ಕಾಲ ಇಂಗ್ಲಿಷ್ ಭಾಷೆಗೆ ತೆರೆದುಕೊಂಡು, ಇಂಗ್ಲಿಷ್ ಕೇಳಿಸಿಕೊಂಡವರು ಇಂಗ್ಲಿಷ್‌ನಲ್ಲಿ ಬರೆಯುವ ಮಹಾಪ್ರಬಂಧಗಳ ಸುಮಾರು 120 ರಿಂದ 130 ಲಿಖಿತ ಪುಟಗಳಲ್ಲಿ ಸರಾಸರಿ ಕನಿಷ್ಠ 350 ರಿಂದ 700ರಷ್ಟು ವಿವಿಧ ರೀತಿಯ ಭಾಷಾ ತಪ್ಪುಗಳಿರುತ್ತವೆ. ಇವರಿಗೆ ಪಿಎಚ್‌ಡಿ ಪದವಿ ದೊರಕಬೇಕಾದರೆ ಒಂದು ನಿರ್ದಿಷ್ಟ ಮಟ್ಟದ ಅಂತರ್‌ರಾಷ್ಟ್ರೀಯ ಮಟ್ಟದ ಜರ್ನಲ್‌ಗಳಲ್ಲಿ ಇವರ ಕನಿಷ್ಠ ಎರಡು ಸಂಶೋಧನಾ ಲೇಖನಗಳಾದರೂ ಪ್ರಕಟವಾಗಿರಲೇ ಬೇಕು ಎಂಬ ನಿಯಮವಿರುವುದರಿಂದ ಇವರು ಅಂತಹ ಪತ್ರಿಕೆಗಳಿಗೆ ಲೇಖನ ಕಳುಹಿಸುತ್ತಾರೆ. ಇವರಲ್ಲಿ ಹಲವರ ಲೇಖನಗಳನ್ನೋದಿದ ಸಂಪಾದಕ/ಮಂಡಳಿಯವರು‘ನಿಮ್ಮ ಲೇಖನವನ್ನು ಚೆನ್ನಾಗಿ ಇಂಗ್ಲಿಷ್ ತಿಳಿದ ತಜ್ಞರೊಬ್ಬರಿಗೆ ಕೊಟ್ಟು ಅವರಿಂದ ತಪ್ಪುಗಳನ್ನು ಸರಿಪಡಿಸಿ ಕಳುಹಿಸಿ ’ಎಂದು ಷರಾ ಬರೆದು ಲೇಖನವನ್ನು ಮರಳಿಸುತ್ತಾರೆ. ಅಂತಹ ಹಲವು ಸಂಶೋಧನಾ ಲೇಖನಗಳ ಇಂಗ್ಲಿಷ್ ಬರವಣಿಗೆಯನ್ನು ಪರಿಶೀಲಿಸಿದಾಗ ನನಗೆ ಪ್ರತಿ ಪುಟದಲ್ಲಿ ತಲಾ 8 ರಿಂದ 10 ಭಾಷಾ ದೋಷಗಳು ಕಂಡುಬಂದಿವೆ. ಇಂಗ್ಲಿಷ್ ಭಾಷೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದು ಎಷ್ಟು ಕಷ್ಟ ಎಂಬುದಕ್ಕೆ ಇನ್ನೊಂದು ಉದಾಹರಣೆ ಕೊಡಬಹುದು. ಇಂಗ್ಲಿಷ್‌ನಲ್ಲಿ ‘ಪಂಕ್ಚು ವೇಶನ್’ ‘ಮಾರ್ಕ್ಸ್(ಚಿಹ್ನೆಗಳು) ಬಳಕೆ ಎಷ್ಟೊಂದು ತೊಡಕಿನದು ಎಂದರೆ ಲಿನ್ ಟ್ರಸ್ ಎಂಬಾಕೆ ಈ ಚಿಹ್ನೆಗಳ ಬಳಕೆಯ ಕುರಿತಾಗಿಯೇ ‘ ಈಟ್ಸ್, ಶೂಟ್ಸ್ - ಲೀವ್ಸ್’ ಎಂಬ ಒಂದು ಪುಸ್ತಕವನ್ನೆ ಬರೆದಿದ್ದಾಳೆ.

30 ಲಕ್ಷಕ್ಕಿಂತಲೂ ಹೆಚ್ಚು ಪ್ರತಿಗಳು ಮಾರಾಟವಾಗಿರುವ 209 ಪುಟಗಳ ಆ ಪುಸ್ತಕ ಕೇವಲ ಪಂಕ್ಚುವೇಶನ್ ಮಾರ್ಕ್‌ಗಳ ಬಳಕೆಯ ವಿವಿಧ ರೀತಿಯ ಸಮಸ್ಯೆ ಸಂಕಷ್ಟಗಳನ್ನು ನವಿರಾದ ಹಾಸ್ಯದ ಮೂಲಕ ವಿಶ್ಲೇಷಿಸುತ್ತದೆ. ಇಂಗ್ಲಿಷ್ ‘ಸುಲಭ’ ಎನ್ನುವವ ಈ ಪುಸ್ತಕ ಓದುಬೇಕು. ಒಟ್ಟಿನಲ್ಲಿ ದಿನವೊಂದರ ಸರಾಸರಿ ಸುಮಾರು 200 ಹೊಸ ಶಬ್ದಗಳು, ಅಂದರೆ ವರ್ಷವೊಂದರೆ ಸುಮಾರು 72,000 ಹೊಸ ಶಬ್ದಗಳನ್ನು ತನ್ನ ತೆಕ್ಕೆಯೊಳಗೆ ಸೇರಿಸಿಕೊಳ್ಳುತ್ತ, ಈಗಾಗಲೇ ಒಟ್ಟು ಸುಮಾರು 30,00,000 (ಮೂವತ್ತು ಲಕ್ಷ) ಶಬ್ದಗಳ ಅಗಾಧ ಭಂಡಾರವನ್ನು ಹೊಂದಿರುವ, ವಿಶ್ವದಾದ್ಯಂತ ಹತ್ತಾರು ಪ್ರಭೇದಗಳಾಗಿ ಬೆಳೆದಿರುವ, ಬೆಳೆಯುತ್ತಿರುವ ಇಂಗ್ಲಿಷ್ ಭಾಷೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ನೂರರಲ್ಲಿ ನೂರು ಅಂಕಗಳನ್ನು ನೀಡುವ ಮೊದಲು ವೌಲ್ಯಮಾಪಕರೆನಿಸಿಕೊಂಡವರು ನೂರು ಬಾರಿ ಯೋಚಿಸಬೇಕಾಗುತ್ತದೆ. ಇಲ್ಲವಾದಲ್ಲಿ ಮಾನವಿಕ ವಿಷಯಗಳಲ್ಲಿ, ಭಾಷಾ ವಿಷಯಗಳಲ್ಲಿ 100 ಅಂಕಗಳನ್ನು ನೀಡುವ ಪರೀಕ್ಷಾ ಪ್ರಕ್ರಿಯೆ ಮತ್ತು, ವೌಲ್ಯ ಮಾಪಕರ ಇಂಗ್ಲಿಷ್ ಭಾಷಾ ಸಾಮರ್ಥ್ಯ ಹಾಗೂ ಶೈಕ್ಷಣಿಕ ಅರ್ಹತೆಯ ಬಗ್ಗೆಯೇ ನೂರೊಂದು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಒಂದು ಸಲಹೆ ನೀಡಲು ಬಯಸುತ್ತೇನೆ: ವಿದ್ಯಾರ್ಥಿಗಳಿಗೆ ನೂರರಲ್ಲಿ ನೂರು ಅಂಕಗಳನ್ನು ನೀಡಲಾದ ಉತ್ತರಪತ್ರಿಕೆಗಳ ಸ್ಕಾನ್ ಮಾಡಲಾದ ಪ್ರತಿಗಳನ್ನು ಆ ಉತ್ತರ ಪತ್ರಿಕೆಗಳಿಗೆ ಕಾರಣವಾದ ಪ್ರಶ್ನೆಪತ್ರಿಕೆಗಳ ಸಹಿತ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ವೆಬ್ ಸೈಟ್‌ಗೆ ಅಪ್ ಲೋಡ್ ಮಾಡಿ ಅವುಗಳು ಆಸಕ್ತ ಶಿಕ್ಷಣ ತಜ್ಞರಿಗೆ ಮತ್ತು ಶಿಕ್ಷಕರಿಗೆ ದೊರಕುವಂತೆ ಮಾಡಬೇಕು. ಭವಿಷ್ಯದಲ್ಲಿ ‘ನೂರರಲ್ಲಿ ನೂರು’ ಅಂಕಗಳ ಮೇಲೆ ಕಣ್ಣಿಡುವ ವಿದ್ಯಾರ್ಥಿಗಳಿಗೂ, ಇಂತಹ ‘ಸಾಧನೆ’ಗಳು ಸಾಧ್ಯವಾಗಬೇಕಾದರೆ ವಿದ್ಯಾರ್ಥಿಗಳನ್ನು ಹೇಗೆ ತರಬೇತುಗೊಳಿಸಬೇಕೆಂದು ತಿಳಿಯಬಯಸುವ ಶಿಕ್ಷಕರಿಗೂ ದೊಡ್ಡ ಉಪಕಾರ ಮಾಡಿದಂತಾಗುತ್ತದೆ.

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News