ಪ್ರತಿಷ್ಠಿತ ಶಾಲೆಗಳ ಮೋಹ ಬೇಕೇ?

Update: 2019-05-20 18:32 GMT

 ಮಾನ್ಯರೇ
 
ಮೇ ತಿಂಗಳು ಇನ್ನೇನು ಮುಗಿಯುವ ಹೊತ್ತಿಗೆ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಲ್ಲಿ ದಾಖಲಿಸಲು ಸಂಬಂಧಿಸಿದ ಅಗತ್ಯ ದಾಖಲೆಗಳೊಂದಿಗೆ ವಿವಿಧ ಶಾಲೆಗಳಿಗೆ ಭೇಟಿ ನೀಡುತ್ತಿರುವುದು ಕಾಣಲು ಸಿಗುತ್ತಿದೆ. ಈ ವೇಳೆ ಹೆತ್ತವರು ತಮ್ಮ ಮಗು ತಾವು ವಾಸಿಸುವ ನಗರದಲ್ಲಿನ ಅತ್ಯುತ್ತಮ ಶಾಲೆಯಲ್ಲಿಯೇ ದಾಖಲಾತಿ ಪಡೆಯಬೇಕೆಂಬ ಕನಸು ಮತ್ತು ಆಸೆಯೊಂದಿಗೆ ಎಲ್ಲಿಲ್ಲದ ಕಸರತ್ತು ಮಾಡುತ್ತಾರೆ. ಇಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬ ನಿಯಮ ಕಾಣುತ್ತಿಲ್ಲ. ಬದಲಾಗಿ ಸಾಲ ಮಾಡಿಯಾದರೂ ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸುವ ಪ್ರಯತ್ನದಿಂದ ಅಂತಿಮವಾಗಿ ತಾವು ಪಡೆದ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುವುದು ದುರಂತವೇ ಸರಿ. ನೆರೆಯವರು ತಮ್ಮ ಮಕ್ಕಳಿಗೆ ಪ್ರತಿಷ್ಠಿತ ಶಾಲೆಯಲ್ಲಿ ದಾಖಲಿಸಿದ್ದಾರೆ ಅಥವಾ ನಮ್ಮ ಸಂಬಂಧಿಕರು ತಮ್ಮ ಮಕ್ಕಳನ್ನು ದೊಡ್ಡದೊಡ್ಡ ವಿದ್ಯಾಕೇಂದ್ರಗಳಲ್ಲಿ ಸೇರಿಸಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಕೈಯಲ್ಲಾಗದಿದ್ದರೂ ತಮ್ಮ ಆದಾಯದ ಮಿತಿಮೀರಿ ಇವರೊಂದಿಗೆ ಸ್ಟರ್ಧೆಗೆ ಇಳಿಯುವುದು ಎಷ್ಟು ಸರಿ? ಇಂದು ಸರಕಾರಿ ಶಾಲೆಯಾಗಿರಲಿ ಅಥವಾ ಭಾರೀ ಶುಲ್ಕ ಪಡೆಯುವ ಖಾಸಗಿ ಶಾಲೆಯಾಗಿರಲಿ, ಮಕ್ಕಳಿಗೆ ಕಲಿಸುವುದು ಅ ಅನ್ನು ಅ ಎಂದೇ. ಇಲ್ಲಿ ನಮಗೆ ಮುಖ್ಯವಾಗಬೇಕಾದುದು ಮಕ್ಕಳಿಗೆ ಕಲಿಕೆಯನ್ನು ಅವರಿಗೆ ಅರ್ಥವಾಗುವ ರೀತಿಯಲ್ಲಿ ಯಾರು ಸುಗಮಗೊಳಿಸಿ ಕಲಿಸುತ್ತಾರೆ ಎಂಬುವುದನ್ನು ನೋಡುವುದು. ಇದನ್ನು ಅವಲೋಕಿಸಿದಾಗ ನಮ್ಮಲ್ಲಿಯ ಹೆಚ್ಚಿನ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳೇ ಪ್ರಾಮಾಣಿಕವಾಗಿ ವಿದ್ಯಾರ್ಥಿಗಳನ್ನು ಒಂದು ಸ್ವತಂತ್ರ ವಾತಾವರಣದಲ್ಲಿ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿವೆ. ಖಾಸಗಿ ಶಾಲೆಗಳಲ್ಲಿ ಕಲಿಕೆಗಿಂತ ಕಾನೂನು ಹಾಗೂ ನಿಬಂರ್ಧಗಳೇ ಜಾಸ್ತಿ. ಒಂದೊಮ್ಮೆ ಅಲ್ಲಿ ನೀವು ನಿಮ್ಮ ಮಗುವಿನೊಂದಿಗೆ ಶಾಲೆಯ ಅವಧಿಯಲ್ಲಿ ಯಾವುದೋ ಕೆಲಸದ ನಿಮಿತ್ತ ಮಾತಾಡಿಸಲು ಶಾಲೆಗೆ ಭೇಟಿ ನೀಡಲು ಬಯಸಿದರೆ ಅಲ್ಲಿ ನಿಮ್ಮದೇ ಮಗುವನ್ನು ನೋಡಲು ಎಲ್ಲಿಲ್ಲದ ಅಡೆತಡೆಗಳನ್ನು ಎದುರಿಸಬೇಕಾದೀತು. ಇನ್ನು ಕೆಲವು ಖಾಸಗಿ ಶಾಲೆಗಳಲ್ಲಿ ಮಕ್ಕಳು ಅನಾರೋಗ್ಯದಿಂದ ನರಳುತ್ತಿದ್ದರೂ ಶಿಕ್ಷಕರ ಭಯದಿಂದಾಗಿ ತಮ್ಮ ಅನಾರೋಗ್ಯ, ನೋವನ್ನೇ ನುಂಗಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಆದರೆ ಸರಕಾರಿ ಶಾಲೆಗಳಲ್ಲಿ ಒಂದೊಮ್ಮೆ ಶಾಲೆಯ ಅವಧಿಯಲ್ಲಿ ಮಗುವಿನ ಆರೋಗ್ಯ ಅಪ್ಪಿತಪ್ಪಿಕೆಟ್ಟುಹೋದರೆ ನೇರವಾಗಿ ಶಿಕ್ಷಕರೇ ವಿದ್ಯಾರ್ಥಿಗಳನ್ನು ಮನೆಗೆ ಬಂದು ಬಿಟ್ಟು ಹೋಗುವಷ್ಟು ಮಾನವೀಯತೆ ಶಿಕ್ಷಕರಲ್ಲಿ ಮನೆಮಾಡಿರುತ್ತದೆ. ಅಲ್ಲದೆ ಪಾಲಕರು ಶಾಲಾ ಅವಧಿಯಲ್ಲಿ ತಮ್ಮ ಮಕ್ಕಳನ್ನು ಸಂದರ್ಶಿಸಲು ಬಯಸಿದರೆ ಯಾವುದೇ ಅಡೆತಡೆ ಇಲ್ಲದೆ ಕ್ಲಾಸ್‌ರೂಂನಲ್ಲಿಯೇ ಹೋಗಿ ಮಕ್ಕಳನ್ನು ಮಾತನಾಡಿಸುವಷ್ಟು ಮುಕ್ತ ವಾತಾವರಣ ಅಲ್ಲಿರುತ್ತದೆ. ಆದ್ದರಿಂದ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ದಾಖಲಾತಿಗೊಳಿಸುವ ಪೂರ್ವದಲ್ಲಿ ಪ್ರತಿಷ್ಠಿತ ಶಾಲೆಯ ಗುಂಗನ್ನು ಬಿಟ್ಟು, ನೆಮ್ಮದಿಯಿಂದ ಮನೆಯಲ್ಲಿ ಒಮ್ಮೆ ಕುಳಿತುಕೊಂಡು ಚರ್ಚಿಸಿ ಅಥವಾ ತಾವು ಯಾರನ್ನು ತಮ್ಮ ಹಿತೈಷಿಗಳೆಂದು ಭಾವಿಸುತ್ತಿರೋ ಅಂತಹವರೊಟ್ಟಿಗೆ ಚರ್ಚಿಸಿ, ಮಾತನಾಡಿ ಮಕ್ಕಳ ಭವಿಷ್ಯದ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಬೇಕು.

Writer - -ರಿಯಾಝ್ ಅಹ್ಮದ್, ರೋಣ

contributor

Editor - -ರಿಯಾಝ್ ಅಹ್ಮದ್, ರೋಣ

contributor

Similar News