ಭಾರತದ ಜಿಡಿಪಿ ಸರಣಿಯ ಬಗ್ಗೆ ಹುಟ್ಟುತ್ತಲೇ ಇರುವ ಹೊಸ ಪ್ರಶ್ನೆಗಳು

Update: 2019-05-20 18:35 GMT

ಭಾರತದ ಕೇಂದ್ರ ಅಂಕಿಅಂಶ ಕಚೇರಿ (ಸೆಂಟಲ್ ಸ್ಟಾಟಿಸ್ಟಿಕ್ಸ್ ಆಫೀಸ್- ಸಿಎಸ್‌ಒ)ಯು ಭಾರತದ ಒಟ್ಟಾರೆ ರಾಷ್ಟ್ರೀಯ ಆದಾಯ (ಗ್ರಾಸ್ ಡೊಮೆಸ್ಟಿಕ್ ಪ್ರಾಡ್ಯೂಸ್- ಜಿಡಿಪಿ)ದ ಅಂದಾಜನ್ನು ಮಾಡಲು 2015ರಿಂದಾಚೆಗೆ ಹಲವು ಹೊಸ ಮಾಪನಗಳನ್ನು ಮೊತ್ತಮೊದಲ ಬಾರಿಗೆ ಬಳಸುತ್ತಿದೆ. ಅದರಲ್ಲಿ ವಿಶ್ವಸಂಸ್ಥೆಯ ರಾಷ್ಟ್ರೀಯ ಅಕೌಂಟಿಗ್ ಪದ್ಧತಿಯ ಬಗ್ಗೆ 2008ರಲ್ಲಿ ನೀಡಿದ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುತ್ತಿರುವುದೂ ಸಹ ಒಂದಾಗಿದೆ. ಈ ಹೊಸ ಪ್ರಕ್ರಿಯೆಯನುಸಾರವಾಗಿ ರಾಷ್ಟ್ರೀಯ ಉತ್ಪನ್ನಕ್ಕೆ ಖಾಸಗಿ ಕಾರ್ಪೊರೇಟ್ ಸಂಸ್ಥೆಗಳ ಕೊಡುಗೆಯನ್ನು ಲೆಕ್ಕಾಚಾರ ಮಾಡಲು ಅವುಗಳು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕಿರುವ ವಾರ್ಷಿಕ ಹಣಕಾಸು ವರದಿಯನ್ನು ಆಧರಿಸಲಾಗಿದೆ. ಇದು ಕೆಲವು ಅಭೂತಪೂರ್ವವಾದ ಫಲಿತಾಂಶಗಳನ್ನು ತೋರಹತ್ತಿದೆ. ಇದು ಜಿಡಿಪಿಯಲ್ಲಿ ಖಾಸಗಿ ಕಾರ್ಪೊರೇಟ್‌ಗಳ ಪಾಲನ್ನು ಮೊದಲಿಗಿಂತ ಅಧಿಕವಾಗಿ ತೋರಿಸುತ್ತದಲ್ಲದೆ ಜಿಡಿಪಿಯ ದರವನ್ನೂ ಸಹ ಈ ಹಿಂದೆ ವರದಿಯಾದ ಪ್ರಮಾಣಕ್ಕಿಂತ ಅಧಿಕವಾಗಿ ತೋರಿಸುತ್ತಿದೆ. ಆದರೆ ಸರಕಾರವು ತೋರಿಸುತ್ತಿರುವ ಈ ಜಿಡಿಪಿ ಹೆಚ್ಚಳವು ಸಾರ್ವಜನಿಕರಲ್ಲಿ ನಂಬಿಕೆಯನ್ನು ಹುಟ್ಟಿಸುತ್ತಿಲ್ಲ. ಏಕೆಂದರೆ ಈ ಜಿಡಿಪಿ ಹೆಚ್ಚಳವು ಭಾರತದ ಆರ್ಥಿಕತೆಯ ಇತರ ಸ್ಥೂಲ ಸಂಗತಿಗಳೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ ಮತ್ತು ಈ ಹೆಚ್ಚಳಕ್ಕೆ ಖಾಸಗಿ ಕಾರ್ಪೊರೇಟ್ ಕಂಪೆನಿಗಳು ಸಲ್ಲಿಸುವ ಹಣಕಾಸು ವರದಿಗಳನ್ನು ಮಾತ್ರ ನೆಚ್ಚಿಕೊಳ್ಳುತ್ತಿರುವುದೂ ಸಹ ವಿಸ್ತೃತವಾದ ಅನುಮಾನಗಳನ್ನು ಹುಟ್ಟುಹಾಕಿದೆ.

ಪ್ರತಿ ಕಾರ್ಪೊರೇಟ್ ಜಿಡಿಪಿಯನ್ನು ಆಯಾ ಕಾರ್ಪೊರೇಟ್ ಕಂಪೆನಿಗಳೇ ಘಟಕ ಮಟ್ಟದಲ್ಲಿ ಮಾಡಿರುವ ಕೊಡುಗೆಗಳ ಬಗ್ಗೆ ಸ್ವ ಆಡಿಟ್ ಮಾಡಿಕೊಂಡು ಕೊಟ್ಟ್ಟ ಹಣಕಾಸು ವರದಿಗಳನ್ನು ಕ್ರೋಡೀಕರಿಸುವ ಮೂಲಕ ಅಂತಿಮ ಲೆಕ್ಕಾಚಾರವನ್ನು ಮಾಡುವುದು ಸಂಕೀರ್ಣ ಪ್ರಕ್ರಿಯೆಯೊಂದರ ಸರಳೀಕರಣ ಮಾತ್ರವಲ್ಲ ಸರಕಾರದ ಬೇಜವಾಬ್ದಾರಿ ಮತ್ತು ಅಜ್ಞಾನ ಕೂಡಾ ಆಗಿದೆ. ಇತ್ತೀಚೆಗೆ ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ (ಎನ್‌ಎಸ್‌ಎಸ್‌ಒ) ಹಣಕಾಸೇತರ ಸೇವಾ ವಲಯಕ್ಕೆ ಸಂಬಂಧಪಟ್ಟ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಆದರೆ ಅದು ಈ ಅಂದಾಜುಗಳ ಬಗೆಗೆ ಇರುವ ಸಿನಿಕತನವನ್ನು ಮತ್ತಷ್ಟು ಹೆಚ್ಚಿಸಿದೆ. ಏಕೆಂದರೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಾಯಿತವಾದ ಎಲ್ಲಾ ಕಂಪೆನಿಗಳಿಗೆ ಎನ್‌ಎಸ್‌ಎಸ್‌ಒ 2008ರ ಅಂಕಿಅಂಶಗಳ ಕಾಯ್ದೆಯ ಪ್ರಕಾರ ತಮ್ಮ ಕಂಪೆನಿಗಳ ದತ್ತಾಂಶಗಳನ್ನು ಒದಗಿಸಲು ಕೋರಿಕೊಂಡಿತ್ತು. ಆದರೆ ಅದರಲ್ಲಿ ಶೇ.45ರಷ್ಟು ಕಂಪೆನಿಗಳು ಒಂದೋ ದತ್ತಾಂಶಗಳನ್ನು ಸರಬರಾಜು ಮಾಡಲಿಲ್ಲ. ಅಥವಾ ಆ ಕಂಪೆನಿಗಳನ್ನೇ ಪತ್ತೆಹಚ್ಚಲು ಆಗಲಿಲ್ಲ. ಹೀಗಾಗಿ ಎನ್‌ಎಸ್‌ಎಸ್‌ಒ ಮಾಡಿದ ಸರ್ವೇಗಳ ಫಲಿತಾಂಶಗಳು ಎಷ್ಟು ಕೆಳಮಟ್ಟದ್ದಾಗಿತ್ತೆಂದರೆ ಎರಡು ಸಂಪುಟಗಳಲ್ಲಿ ಫಲಿತಾಂಶಗಳನ್ನು ಪ್ರಕಟಿಸಬೇಕೆಂದಿದ್ದ ಯೋಜನೆಯನ್ನೇ ಎನ್‌ಎಸ್‌ಎಸ್‌ಒ ಕೈಬಿಟ್ಟಿತು. ಅದರ ಬದಲಿಗೆ ಈ ಸರ್ವೇ ನಡೆಸುವಲ್ಲಿ ಆದ ಅನುಭವಗಳನ್ನು ದಾಖಲಿಸಿದ ತಾಂತ್ರಿಕ ವರದಿಗೆ ಮಾತ್ರ ಆ ಅವರದಿ ಸೀಮಿತಗೊಂಡಿತು.

ಮತ್ತೊಂದು ಕಡೆ ಅದೇ ವರದಿ ಹೇಳುವ ಪ್ರಕಾರ ಕೆಲವು ಕಂಪೆನಿಗಳು ತಮ್ಮ ವರದಿಯನ್ನು ಸಲ್ಲಿಸಲೇ ಇಲ್ಲ. ಮಾತ್ರವಲ್ಲ. ಕೆಲವು ಕಂಪೆನಿಗಳು ವರದಿಯನ್ನೇ ಸಿದ್ಧಪಡಿಸಿರಲಿಲ್ಲ. ಆದರೆ ದೇಶದಲ್ಲಿ ಅಧಿಕೃತವಾಗಿ ಸರಿಸುಮಾರು ಹತ್ತು ಲಕ್ಷದಷ್ಟು ಸಕ್ರಿಯವಾದ ಖಾಸಗಿ ಕಾರ್ಪೊರೇಟ್ ಕಂಪೆನಿಗಳಿವೆ. ಹಿಂದಿನ ಮೂರು ವರ್ಷಗಳಲ್ಲಿ ಒಮ್ಮೆಯಾದರೂ ತನ್ನ ಹಣಕಾಸು ವರದಿಯನ್ನು ಸಲ್ಲಿಸಿರುವ ಕಂಪೆನಿಯನ್ನು ಅಧಿಕೃತವಾಗಿ ಸಕ್ರಿಯ ಕಂಪೆನಿಯೆಂದು ಕರೆಯಲಾಗುತ್ತದೆ. ಮತ್ತೊಂದು ಕಡೆ ಕಂಪೆನಿಗಳ ದಾಖಲಾತಿಗಳನ್ನು ಸಲ್ಲಿಸುವ ವಿಧಾನಗಳು ಸಾಕಷ್ಟು ಏರುಪೇರುಗಳಿಂದ ಕೂಡಿವೆ. ಒಟ್ಟಾರೆ ಕಂಪೆನಿಗಳಲ್ಲಿ 60,000 ಕಂಪೆನಿಗಳು ದೊಡ್ಡ ಕಂಪೆನಿಗಳಾಗಿದ್ದು ಅವುಗಳು ವಿವರವಾದ ಹಣಕಾಸು ವರದಿಗಳನ್ನು ನೀಡುವ ಎಕ್ಸ್‌ಟೆನ್ಸೀವ್ ಬಿಸಿನೆಸ್ ರಿಪೋರ್ಟಿಂಗ್ ಲಾಂಗ್ವೇಜ್ (ಎಕ್ಸ್‌ಬಿಆರ್‌ಎಲ್) ವಿಧಾನದಲ್ಲಿ ವರದಿ ಮಾಡುತ್ತವೆ. ಆದರೆ ಉಳಿದ ಸಣ್ಣ ಕಂಪೆನಿಗಳು ಒಂದು ನಿರ್ದಿಷ್ಟ ಹಾಗೂ ಸಾರ್ವತ್ರಿಕ ವಿಧಾನವನ್ನನುಸರಿಸದೆ ಕೆಲವೇ ಮಾಹಿತಿಗಳನ್ನು ನೀಡುವ 23-ಎಸಿಎ ಪದ್ಧತಿಯನ್ನು ಅನುಸರಿಸುತ್ತವೆ. ಅವು ಶಾಸನಬದ್ಧವಾಗಿ ಕೊಡಲೇಬೇಕಾದ ಮಾಹಿತಿಗಳನ್ನು ಕೊಡುತ್ತವಾದರೂ ಮಾಹಿತಿಯ ಗುಣಮಟ್ಟ ಕಳಪೆಯಾಗಿರುತ್ತದೆ. ಇದಕ್ಕೊಂದು ಜೀವಂತ ನಿದರ್ಶನ ಕಂಪೆನಿ ವ್ಯವಹಾರಗಳ ಸಚಿವಾಲಯದ ಮಾಹಿತಿಗಳನ್ನು ಆಧರಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡುವ ಮಾಸಿಕ ವರದಿ.

ಆ ಮಾಸಿಕ ವರದಿಯು ಕೇವಲ ಮೂರು ಲಕ್ಷ ಕಂಪೆನಿಗಳ ಮಾಹಿತಿಯನ್ನು ಮಾತ್ರ ಅಧರಿಸಿರುತ್ತದೆ. ಆದರೆ ಅವುಗಳ ವ್ಯವಹಾರ ಎಲ್ಲಾ ಸಕ್ರಿಯ ಕಂಪೆನಿಗಳ ಒಟ್ಟಾರೆ ವ್ಯವಹಾರದ ಮೂರನೇ ಒಂದು ಭಾಗದಷ್ಟೂ ಸಹ ಆಗುವುದಿಲ್ಲ. ಎನ್‌ಎಸ್‌ಎಸ್‌ಒ ಬಯಲಿಗೆಳೆದಿರುವ ಈ ಸಂಗತಿಗಳು ಆಘಾತಕಾರಿ ಯಾಗಿವೆ ಮತ್ತು ಅವು ಸಾರ್ವಜನಿಕ ಮಾಹಿತಿ ವಲಯದಲ್ಲಿರುವ ಖಾಸಗಿ ಕಂಪೆನಿಗಳ ಬಗ್ಗೆ ಹೊರಬಂದಿರುವ ಹಲವಾರು ತನಿಖೆ ಮತ್ತು ಅಧ್ಯಯನಗಳು ಮಾಡಿರು ಟೀಕೆಗಳನ್ನು ದೃಢಪಡಿಸುತ್ತದೆ. ನೋಂದಾಯಿತವಾಗಿರುವ ಬಹುಪಾಲು ಕಂಪೆನಿಗಳ ಉದ್ದೇಶ ಕಾರ್ಪೊರೇಟ್ ವಂಚನೆಯ ಮಾರ್ಗಗಳಾಗಿವೆಯೇ ವಿನಃ ಆರ್ಥಿಕತೆಯು ಆಗ್ರಹಿಸುವ ಸೇವೆ ಅಥವಾ ಸರಕುಗಳನ್ನು ಒದಗಿಸುವುದಲ್ಲ. ಹೀಗಾಗಿ ಅಂಕಿಅಂಶ ಕಚೇರಿಯು ಸರಿಯಾದ ಮಾಹಿತಿಯನ್ನು ಕೊಡುವ ಮೂರು ಲಕ್ಷ ಕಂಪೆನಿಗಳ ವಿಶ್ಲೇಷಣೆಯು ಕೊಡುವ ದತ್ತಾಂಶಗಳನ್ನೇ ಒಟ್ಟಾರೆಯಾಗಿ ಹತ್ತು ಲಕ್ಷ ಕಂಪೆನಿಗಳಿಗೂ ಅನ್ವಯಿಸಿ ಗುಣಿಸುವ ಲೆಕ್ಕವನ್ನು ಮಾಡುತ್ತದೆ. ಈ ಮೂಲಕ ತಾನು ಸರಿಯಾಗಿ ವರದಿಯನ್ನು ಮಾಡದ ಎಲ್ಲಾ ಕಂಪೆನಿಗಳ ಕೊಡುಗೆಯನ್ನೂ ಲೆಕ್ಕಾಚಾರದೊಳಗೆ ತೆಗೆದುಕೊಳ್ಳುತ್ತಿದ್ದೇನೆಂದು ಅಂಕಿಅಂಶ ಕಚೇರಿಯು ವಾದಿಸಿದರೆ ಇತರ ಆರ್ಥಿಕ ವಿಶ್ಲೇಷಕರ ಈ ಪ್ರಕ್ರಿಯೆಯು ಸರಿಯಾಗಿ ಕಾರ್ಯನಿರ್ವಹಣೆಯನ್ನೇ ಮಾಡದ ಕಂಪೆನಿಗಳನ್ನೇ ಗಣನೆಗೆ ತೆಗೆದುಕೊಳ್ಳುವುದರಿಂದ ಉತ್ಪ್ರೇಕ್ಷಿತ ಫಲಿತಾಂಶವನ್ನು ಮಾತ್ರ ಕೊಡುತ್ತದೆ ಎಂದು ತೀವ್ರವಾಗಿ ಟೀಕಿಸುತ್ತಾರೆ. ಕಂಪೆನಿಗಳ ಹಣಕಾಸು ಅವ್ಯವಹಾರಗಳ ಬಗ್ಗೆ ಇತ್ತೀಚೆಗೆ ಬಂದ ವರದಿಗಳು ಹೇಳುವಂತೆ ಅಂಥಾ ನೋಂದಾಯಿತ ಆದರೆ ಕಾರ್ಯಾಚರಣೆ ಮಾಡದ ಸಕ್ರಿಯ ಕಂಪೆನಿಗಳು ಕಾರ್ಪೊರೇಟ್ ವಂಚನೆ ಮಾಡಲೆಂದೇ ಕಂಪೆನಿಗಳು ಹುಟ್ಟುಹಾಕಿರುವ ಬೇನಾಮಿ/ಶೆಲ್ ಕಂಪೆನಿಗಳಾಗಿರಬಹುದಾದ ಸಾಧ್ಯತೆಗಳು ಹೆಚ್ಚು.

ಎನ್‌ಎಸ್‌ಎಸ್‌ಒ ಬಯಲು ಮಾಡಿರುವ ಈ ಅಕ್ರಮಗಳು ಜಿಡಿಪಿ ಅಂದಾಜಿನ ವಿಶ್ವಾಸಾರ್ಹತೆಯ ಮೇಲೆ ಯಾವ ಬಗೆಯ ಪ್ರಭಾವ ಬೀರಬಲ್ಲದು? ಬಹುಪಾಲು ಕಂಪೆನಿಗಳು ತಮ್ಮ ಹಣಕಾಸು ವರದಿಯನ್ನೇ ಸಲ್ಲಿಸುತ್ತಿಲ್ಲವಾದ್ದರಿಂದ ದೇಶದಲ್ಲಿ ಒಟ್ಟಾರೆ ಎಷ್ಟು ಕಂಪೆನಿಗಳು ನಿಜಕ್ಕೂ ಸಕ್ರಿಯವಾಗಿವೆ ಎಂಬ ನೈಜ ಸಂಖ್ಯೆಯೇ ದೊರೆಯುವುದು ಕಷ್ಟ. ಸೇವಾ ಕ್ಷೇತ್ರಗಳಲ್ಲಿರುವ ಕಂಪೆನಿಗಳ ಬಗ್ಗೆ ಎನ್‌ಎಸ್‌ಎಸ್‌ಒ ಬಯಲು ಮಾಡಿರುವ ಸಂಗತಿಗಳೇ ಒಟ್ಟಾರೆ ಕಾರ್ಪೊರೇಟ್ ಕ್ಷೇತ್ರದ ವಿದ್ಯಮಾನವೂ ಆಗಿದ್ದಲ್ಲಿ ಕಾರ್ಯ ನಿರ್ವಹಿಸದ, ನಕಲಿ ಮತ್ತು ಶೆಲ್ ಕಂಪೆನಿಗಳ ಸಂಖ್ಯೆ ಸಾಕಷ್ಟಿರುವ ಸಾಧ್ಯತೆ ಇದೆ ಮತ್ತು ಅವನ್ನು ಸರ್ವೇಗಳಲ್ಲಿ ಹಣಕಾಸು ವರದಿಯನ್ನು ಸಲ್ಲಿಸುವ ಸಕ್ರಿಯ ಕಂಪೆನಿಗಳೆಂದೇ ಲೆಕ್ಕ ಹಾಕಲಾಗಿರುತ್ತದೆ. ಹೀಗಾಗಿ ಸ್ಯಾಂಪಲ್ ಕಂಪೆನಿಗಳ ಫಲಿತಾಂಶವನ್ನು ಊಹಾತ್ಮಕವಾದ ಇಡೀ ಕಂಪೆನಿಗಳ ಲೋಕಕ್ಕೆ ಸಾರ್ವತ್ರಿಕವಾಗಿ ವಿಸ್ತರಿಸಿ ಅನ್ವಯಿಸುವುದು ಅನುಮಾನಕ್ಕೆಡೆಗೊಡುವ ಪ್ರಕ್ರಿಯೆಯಾಗಿದೆ. ಆದರೆ ಎನ್‌ಎಸ್‌ಎಸ್‌ಒ ಸರ್ವೇಯಲ್ಲಿ ಲೆಕ್ಕಕ್ಕೆ ಸಿಗದೇ ಹೋದ ಹಾಗೂ ಪತ್ತೆಯಾಗದ ಕಂಪೆನಿಗಳು ಹಣಕಾಸು ವರದಿಯನ್ನು ಸಲ್ಲಿಸದ ಮತ್ತು ಕಂಪೆನಿಯೆಂದು ತಪ್ಪಾಗಿ ದಾಖಲಾದ ಸಂಸ್ಥೆಗಳಾಗಿದ್ದು ಒಟ್ಟಾರೆ ಕಂಪೆನಿಗಳ ವ್ಯವಹಾರದಲ್ಲಿ ಅವುಗಳ ಪಾಲು ತುಂಬಾ ಚಿಕ್ಕದು ಎಂದು ಹೇಳುತ್ತಾ ಹಣಕಾಸು ಸಚಿವಾಲಯವು ಎನ್‌ಎಸ್‌ಎಸ್‌ಒ ಸರ್ವೇಯ ಫಲಿತಾಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ತಳ್ಳಿಹಾಕಿದೆ. ಅಲ್ಲದೆ ಸಕ್ರಿಯವಾಗಿರುವ ಕಂಪೆನಿಗಳ ಪಾವತಿಯಾದ ಬಂಡವಾಳವು ಒಟ್ಟಾರೆ ಕಂಪೆನಿ ವಲಯದ ಪಾವತಿಯಾದ ಬಂಡವಾಳದ ಶೇ.85ರಷ್ಟಾಗುವುದರಿಂದ ಪತ್ತೆಯಾಗದ ಕಂಪೆನಿಗಳ ವಿದ್ಯಮಾನವು ಒಟ್ಟಾರೆ ಜಿಡಿಪಿ ಲೆಕ್ಕಾಚಾರದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲವೆಂದೂ ಸಹ ಅಧಿಕಾರಿಗಳು ವಾದಿಸುತ್ತಾರೆ.

ಆದರೆ ಎನ್‌ಎಸ್‌ಎಸ್‌ಒ ಸರ್ವೇಗಳು ಹಣಕಾಸು ವರದಿಯನ್ನು ಸಲ್ಲಿಸಬೇಕಿದ್ದ ಸಕ್ರಿಯ ಕಂಪೆನಿಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡಿದ್ದವು ಎಂಬ ಸತ್ಯ ಸಂಗತಿಯನ್ನು ಈ ಮೇಲಿನ ವಿವರಣೆಯು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಸಚಿವಾಲಯದ ಈ ವಿವರಣೆಗಳು ಸಾರ್ವಜನಿಕರ ಮನಸ್ಸಿನಲ್ಲಿರುವ ಅನುಮಾನಗಳನ್ನು ಯಾವ ರೀತಿಯಲ್ಲೂ ನಿವಾರಿಸುವುದಿಲ್ಲ. ಎನ್‌ಎಸ್‌ಎಸ್‌ಒ ಸರ್ವೇಗಳು ಕಂಪೆನಿ ಸಚಿವಾಲಯದ ಎಮ್‌ಸಿಎ-21 ದತ್ತಾಂಶಗಳಲ್ಲಿ ಇರುವ ಈ ಹೊಸ ಲೋಪಗಳನ್ನು ಬಯಲಿಗೆ ತಂದಿರುವುದರಿಂದ ಇಡೀ ದತ್ತಾಂಶಗಳನ್ನು ಮತ್ತು ದೊಡ್ಡ ಕಂಪೆನಿಗಳ ಫಲಿತಾಂಶಗಳು ಕೊಡುವ ದೆಸೆಯನ್ನು ಆಧರಿಸಿ ಅದನ್ನು ಇಡೀ ಕಂಪೆನಿ ಲೋಕಕ್ಕೆ ವಿಸ್ತರಿಸಿ ಲೆಕ್ಕ ಮಾಡುವ ಬ್ಲೋಯಿಂಗ್ ಅಪ್ ವಿಧಾನಗಳನ್ನು ಕೂಡಾ ಇಡಿಯಾಗಿ ಸಾರ್ವಜನಿಕ ಪರಿಶೀಲನೆಗೆ ತೆರೆದಿಡಬೇಕಾದ ಹೊಣೆಗಾರಿಕೆ ಹಣಕಾಸು ಸಚಿವಾಲಯದ ಮೇಲಿದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News