ಸಂದಿಗ್ಧ ಸ್ಥಿತಿಯಲ್ಲಿ ಭಾರತವೂ, 2019ರ ಚುನಾವಣಾ ಫಲಿತಾಂಶವೂ

Update: 2019-05-20 18:37 GMT

ಇದೀಗ ಮೋದಿ ಸರಕಾರದ 5 ವರ್ಷಗಳ ಅವಧಿ ಮುಗಿದಿದೆ. ಮನಮೋಹನ್ ಸಿಂಗ್ ಸರಕಾರ ಮಾಡದೇ ಬಿಟ್ಟು ಹೋಗಿದ್ದ ಭಾರೀ ಕಾರ್ಪೊರೇಟು ಪರ ಕೆಲಸಗಳನ್ನೆಲ್ಲಾ ಜನರನ್ನು ಅದ್ಭುತವಾಗಿ ಯಾಮಾರಿಸಿ ಮೋದಿ ಮುಗಿಸಿಕೊಟ್ಟಿದ್ದಾರೆ. ಹತ್ತಾರು ಸಾವಿರ ಕೋಟಿಗಳ ಮೇಕ್ ಇಂಡಿಯಾ, ಸ್ಕಿಲ್ ಇಂಡಿಯಾ, ಗಂಗಾ ಶುದ್ಧೀಕರಣ ಯೋಜನೆ, ರಫೇಲ್ ಹಗರಣ, ಫಸಲ್ ಬಿಮಾ ಹಗರಣಗಳಂತಹ ಹಲವಾರು ಹಗರಣಗಳ ಪರಂಪರೆಯನ್ನು ಮುಂದುವರಿಸಿದ್ದಾರೆ.


ಭಾರತ ದೇಶ ಸಂದಿಗ್ಧ ಘಟ್ಟದಲ್ಲಿ ಹಾದು ಹೋಗಲು ತೊಡಗಿ ದಶಕಗಳೇ ಕಳೆದಿವೆ. ಜಾಗತೀಕರಣದ ದಾಳಿ ಆರಂಭವಾದಾಗಿನಿಂದಲೇ ಭಾರತದ ಅದುವರೆಗೂ ಇದ್ದ ಒಂದು ಮೇಲು ಮಟ್ಟದ ಸ್ವಾಯತ್ತತೆ ಹಾಗೂ ಸ್ಥಳೀಯ ಆರ್ಥಿಕ ವ್ಯವಹಾರಗಳೆಲ್ಲಾ ಭಾರೀ ಬಹುರಾಷ್ಟ್ರೀಯ ಕಂಪೆನಿಗಳ ಕಡೆಗೆ ಸರಿಸುವ ಪ್ರಕ್ರಿಯೆ ವೇಗ ಪಡೆಯಿತು. ಜಾಗತೀಕರಣದ ನಂತರದ ಮೂರು ದಶಕಗಳಲ್ಲಿ ಆರಂಭದ ಸುಮಾರು ಹತ್ತು ವರ್ಷಗಳು ಅಂತರ್ಜಾಲ, ಮಾಹಿತಿ ತಂತ್ರಜ್ಞಾನ ನಂತರ ಜೈವಿಕ ತಂತ್ರಜ್ಞಾನ ಅಗಾಧ ಅಭಿವೃದ್ಧಿಯ ಅವಕಾಶಗಳನ್ನು ಬಿಂಬಿಸಿತ್ತು. ಆದರೆ ನಂತರ ಮಾಹಿತಿ ತಂತ್ರಜ್ಞಾನದ ಗುಳ್ಳೆ ಒಡೆದು ಹೋಗಿ ಅದರಲ್ಲಿದ್ದ ಉದ್ಯೋಗಾವಕಾಶಗಳು ತೀವ್ರ ಕುಸಿತಕ್ಕೆ ಒಳಗಾಯಿತು. ಸಾವಿರಾರು ಉದ್ಯೋಗಿಗಳು ನಿರುದ್ಯೋಗಿಗಳಾದರು. ಹಲವಾರು ಕಳ್ಳತನ ದರೋಡೆಗಳಲ್ಲಿ ತೊಡಗಿದವರಲ್ಲಿ ಹಲವರು ಐಟಿ ಉದ್ಯೋಗಿಗಳೂ ಇದ್ದರು ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಜಾಗತೀಕರಣದ ಮೊದಲು ಕಾರು, ರೆಫ್ರಿಜರೇಟರುಗಳು, ಬೈಕು, ಸ್ಕೂಟರುಗಳು, ವಾಷಿಂಗ್ ಮೆಷಿನ್, ಟಿವಿ ಇತ್ಯಾದಿಗಳಲ್ಲಿ ಗ್ರಾಹಕರಿಗೆ ಹೆಚ್ಚು ಆಯ್ಕೆಗಳಿರಲಿಲ್ಲ. ಜಾಗತೀಕರಣದ ನಂತರ ಈ ರೀತಿಯ ಉಪಭೋಗಿ ವಸ್ತುಗಳು ಸ್ಪರ್ಧಾತ್ಮಕ ದರಗಳಲ್ಲಿ ಗ್ರಾಹಕರಿಗೆ ದೊರೆಯತೊಡಗಿದವು. ಕೃಷಿ ಇತ್ಯಾದಿ ಉತ್ಪಾದನಾ ಚಟುವಟಿಕೆ ಗಳಿಗಿಂತಲೂ ಹೆಚ್ಚು ಸಾಲಗಳು ಈ ರೀತಿಯ ಉಪಭೋಗಿ ವಸ್ತುಗಳ ಖರೀದಿಗೆ ಸಿಗತೊಡಗಿದವು. ಅಂದರೆ ಮಧ್ಯಮವರ್ಗಗಳ ಉಪಭೋಗಿ ಆಸೆಗಳಿಗೆ ಜಾಗತೀಕರಣ ಗೊಬ್ಬರ ಎರೆದು ಪೋಷಿಸುತ್ತಾ ಕೃತಕ ಅಭಿವೃದ್ಧಿಯ ಮಂಪರಿನಲ್ಲಿ ಬೀಳಿಸಿಟ್ಟರು. ನಂತರ ಪೇಜರ್, ಮೊಬೈಲ್, ಸ್ಮಾರ್ಟ್ ಫೋನ್ ಹೀಗೆ ಬೆಳೆದು ಅದೇ ಹುಸಿ ಮಂಪರಿನಲ್ಲಿಯೇ ಮಧ್ಯಮ ವರ್ಗ ಹಾಗೂ ಯುವ ಸಮೂಹವನ್ನು ಮುಳುಗಿಸಿಡಲಾಯಿತು. ಜೈವಿಕ ತಂತ್ರಜ್ಞಾನದಡಿ ನಮ್ಮ ದೇಶದ ಬೀಜ ಸಂಪತ್ತು, ತಳಿ ಸಂಪತ್ತು ಬಹುತೇಕವಾಗಿ ಭಾರೀ ಜಾಗತಿಕ ಕಾರ್ಪೊರೇಟುಗಳ ಪಾಲಾಯಿತು. ಮಾನ್ಸಾಂಟೋ, ಅಡ್ವಂಟಾ, ಮಹಿಕೋದಂತಹ ಭಾರೀ ಜಾಗತಿಕ ಕೃಷಿ ಕಂಪೆನಿಗಳೇ ಸ್ಥಳೀಯ ಬೀಜಗಳು, ತಳಿಗಳ ಮೇಲೆ ಬಹುತೇಕವಾಗಿ ಏಕಸ್ವಾಮ್ಯ ಸಾಧಿಸಿದವು. ತಳಿ ತಂತ್ರಜ್ಞಾನದ ಮೂಲಕ ಮೊಳಕೆಯೊಡೆಯುವ ಬೀಜಗಳ ಸಹಜ ಗುಣಗಳ ಮೇಲೆ ಕೂಡ ಹಿಡಿತ ಸಾಧಿಸಿದವು. ರೈತರು ಅನಿವಾರ್ಯವಾಗಿ ಬಿತ್ತನೆ ಬೀಜಗಳಿಗಾಗಿ ಇಂತಹ ಕಂಪೆನಿಗಳನ್ನೇ ಆಶ್ರಯಿಸಬೇಕಾದ ಪರಿಸ್ಥಿತಿಯನ್ನು ಹೇರಲಾಯಿತು. ಸ್ಥಳೀಯ ಬೀಜೋತ್ಪತ್ತಿ ಇನ್ನಿಲ್ಲದಂತೆ ನೆಲಕಚ್ಚಿ ಕುಳಿತವು. ಗೊಬ್ಬರ ಹಾಗೂ ಇನ್ನಿತರ ಕೃಷಿ ಸಂಬಂಧಿತ ವಸ್ತುಗಳ ಮೇಲಿನ ಸಹಾಯ ಧನಗಳು ಇನ್ನಿತರ ರಿಯಾಯಿತಿಗಳು ಕಡಿಮೆ ಮಾಡುತ್ತಾ ಬರಲಾಯಿತು. ಈಗ ಅದು ಕನಿಷ್ಠ ಮಟ್ಟಕ್ಕೆ ತಂದಿಟ್ಟಿದ್ದಾರೆ. ಕೃಷಿ ಬಿಕ್ಕಟ್ಟು ತೀವ್ರಗೊಂಡ ಪರಿಣಾಮ ಲಕ್ಷಾಂತರ ರೈತರು ಆತ್ಮಹತ್ಯೆಗಳ ದಾರಿ ಹಿಡಿದರು. ತೀರಾ ಹಿಂದುಳಿದ ಪ್ರದೇಶಗಳಾದ ಕರ್ನಾಟಕದ ಹೈದರಾಬಾದ್ ಕರ್ನಾಟಕ, ಮಹಾರಾಷ್ಟ್ರದ ವಿದರ್ಭ, ಆಂಧ್ರದ ತೆಲಂಗಾಣ, ಮಾತ್ರವಲ್ಲದೆ ನೀರಾವರಿ ಸೌಲಭ್ಯಗಳಿರುವ ಮುಂದುವರಿದ ಪ್ರದೇಶವೆನಿಸಿಕೊಂಡಿರುವ ಪಂಜಾಬ್, ಹರ್ಯಾಣದಂತಹ ರಾಜ್ಯಗಳು, ಕರ್ನಾಟಕದ ಮುಂದುವರಿದ ಭಾಗಗಳೆಂದುಕೊಂಡಿರುವ ಮಂಡ್ಯ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರುಗಳಲ್ಲೂ ರೈತರ ಆತ್ಮಹತ್ಯೆಗಳು ಆಗಿವೆ. ಅದು ಈಗಲೂ ಮುಂದುವರಿಯುತ್ತಿದೆ. ಒಂದು ಅಂದಾಜಿನ ಪ್ರಕಾರ ದೇಶಾದ್ಯಂತ 6 ರಿಂದ 7ಲಕ್ಷ ರೈತರು ಆರ್ಥಿಕ ಸಂಕಷ್ಟಗಳಿಂದಾಗಿ ತಮ್ಮ ಜೀವಗಳನ್ನು ಕೊನೆಗೊಳಿಸಿದರು. ಅವರ ಕುಟುಂಬಗಳು ಅನಾಥವಾದವು. ವಾಸ್ತವದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆಗಳೇ ಹೆಚ್ಚಿವೆ. ಈ ರೀತಿಯ ವ್ಯವಸ್ಥೆ ಮಾಡುತ್ತಿರುವ ಕಗ್ಗೊಲೆಗಳ ಸರಿಯಾದ ಅಂಕಿ ಅಂಶಗಳನ್ನು ಕೂಡ ಸಂಗ್ರಹಿಸಿ ಇಡುವ ಕಾರ್ಯ ಈಗ ನಿಂತು ಹೋಗಿದೆ. ಜಾಗತೀಕರಣದ ನಂತರ ಕೃಷಿಕರ ಮೇಲಾದ ಕೆಲವು ಕ್ರೂರ ಪರಿಣಾಮಗಳಿವು. ಇನ್ನು ಕೃಷಿ ಹಿಡುವಳಿಗಳು ಹಿಂದಿಗಿಂತಲೂ ಕಡಿಮೆಯಾಗಿದೆ. ಹಳೆಯ ಭಾರೀ ಭೂ ಮಾಲಿಕರ ಜೊತೆಗೆ ಭಾರೀ ಕಾರ್ಪೊರೇಟುಗಳು ಲಕ್ಷಾಂತರ ಹೆಕ್ಟೇರುಗಳ ಭೂಮಿಯ ಮೇಲೆ ವಿವಿಧ ನೆಪಗಳಲ್ಲಿ ಹಿಡಿತ ಸಾಧಿಸಿರುವುದೂ ನಡೆದಿದೆ. ಈಗ ಕೆಲವೇ ಕಾರ್ಪೊರೇಟುಗಳು ದೇಶದ ಆಸ್ತಿ ಸಂಪತ್ತಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ಮಟ್ಟ ತಲುಪಿದೆ. ಮೊದಲಿದ್ದ ಸಾರ್ವಜನಿಕ ರಂಗ ಈಗ ನಿರ್ನಾಮವಾಗುವ ಹಂತದಲ್ಲಿದೆ.

ಇಂದು ಚುನಾವಣೆಗಳನ್ನು ಹಾಗೂ ಸರಕಾರಗಳನ್ನು ಕೆಲವೇ ಕಾರ್ಪೊರೇಟು ಕೂಟವೇ ನೇರವಾಗಿ ತೀರ್ಮಾನಿಸುತ್ತಿದೆ. ಇದು ಹಿಂದಿನ ಮನಮೋಹನ್ ಸಿಂಗ್ ಸರಕಾರ ಸ್ಥಾಪನೆಯ ಕಾಲದಲ್ಲೂ ನಂತರದ ಮೋದಿ ಸರಕಾರದ ಕಾಲದಲ್ಲೂ ಹೆಚ್ಚು ನಿಚ್ಚಳವಾಗಿ ಕಂಡು ಬಂದಿದೆ. ಮನಮೋಹನ್ ಸಿಂಗ್ ಯಾವುದೇ ರಾಜಕೀಯ ಹಿನ್ನೆಲೆಯ ವ್ಯಕ್ತಿಯಾಗಿರಲಿಲ್ಲ. ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರಾಗಿದ್ದ ಅವರು ವಿಶ್ವ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ನಂತರ ಭಾರತ ಸರಕಾರದ ಆರ್ಥಿಕ ಸಲಹೆಗಾರರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಕಾರ್ಯ ನಿರ್ವಹಿಸಿದ್ದ ಒಬ್ಬ ಅಧಿಕಾರಿಯಾಗಿದ್ದರು. ಜಾಗತೀಕರಣ ಆರಂಭವಾದಾಗಿನಿಂದಲೂ ಮನಮೋಹನ್ ಸಿಂಗ್ ಭಾರತದ ನೀತಿ ನಿರೂಪಣೆಯ ಆಯಕಟ್ಟಿನ ಜಾಗಗಳಲ್ಲಿಯೇ ಕಾರ್ಯ ನಿರ್ವಹಿಸುತ್ತಾ ಬಂದವರು. ನಂತರ 1991ರಲ್ಲಿ ಕಾಂಗ್ರೆಸ್‌ನ ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದ ಸರಕಾರದಲ್ಲಿ ದಿಢೀರೆಂದು ಇವರನ್ನು ಕೇಂದ್ರ ಹಣಕಾಸು ಮಂತ್ರಿಯನ್ನಾಗಿ ಕುಳ್ಳಿರಿಸಲಾಯಿತು. ಅದು ಜಾಗತಿಕ ಆರ್ಥಿಕತೆಯ ಬಿಕ್ಕಟ್ಟು ತೀವ್ರವಾಗುತ್ತಿದ್ದ ಕಾಲ. ಸಾಕಷ್ಟು ವಿರೋಧದ ನಡುವೆಯೂ ಮನಮೋಹನ್ ಸಿಂಗ್ ಜಾಗತೀಕರಣವನ್ನು ಭಾರತಕ್ಕೆ ಅಳವಡಿಸುವುದಕ್ಕೆ ಆದ್ಯತೆಯ ಮೇಲೆ ಕಾರ್ಯ ನಿರ್ವಹಿಸಿದರು. ಅಭಿವೃದ್ಧಿಗೆ ಜಾಗತೀಕರಣ; ಜಾಗತೀಕರಣಕ್ಕೆ ಉದಾರೀಕರಣ, ಖಾಸಗೀಕರಣಗಳು ಅತ್ಯಗತ್ಯವೆಂದೇ ಪ್ರತಿಪಾದಿಸುತ್ತಾ ಬರಲಾಗಿತ್ತು. ಮನಮೋಹನ್ ಸಿಂಗ್ ಅದಕ್ಕಾಗಿಯೇ ಪ್ರತ್ಯೇಕ ನೀತಿ ನಿರೂಪಣೆಗಳನ್ನು ಮಾಡುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 2004ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದೆ ನೇರವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ಪ್ರಧಾನಿಯಾದರು. ನಂತರ ಅವರು ಹತ್ತು ವರ್ಷಗಳ ಕಾಲ ಪ್ರಧಾನಿ ಪಟ್ಟದಿಂದ ಕದಲಲಿಲ್ಲ. ಆಶ್ಚರ್ಯವೆನಿಸಿದರೂ ನಮ್ಮ ಪ್ರಜಾಪ್ರಭುತ್ವದ ವ್ಯಂಗ್ಯವೋ ಎಂಬಂತೆ ಆಗಲೂ ಅವರು ಚುನಾವಣೆಗೆ ಸ್ಪರ್ಧಿಸಿ ಜನರಿಂದ ಆಯ್ಕೆಯಾಗಿರಲಿಲ್ಲ. ಪ್ರಧಾನಿ ಪಟ್ಟಕ್ಕಾಗಿ ಮಾತ್ರ ರಾಜ್ಯಸಭಾ ಸದಸ್ಯರಾಗಿದ್ದರು.
 ಸಮ್ಮಿಶ್ರ ಸರಕಾರವಾಗಿದ್ದರೂ ಆ ಹತ್ತು ವರ್ಷಗಳಲ್ಲಿ ಮನಮೋಹನ್ ಸಿಂಗ್ ಸರಕಾರ ಇಡೀ ದೇಶವನ್ನು ಭಾರೀ ಜಾಗತಿಕ ಕಾರ್ಪೊರೇಟುಗಳ ಅನುಕೂಲಕ್ಕೆ ತಕ್ಕಂತೆ ಆಳ್ವಿಕೆ ನಡೆಸಿತು. ಅದಕ್ಕೆ ತೊಡಕುಗಳೆನಿಸಿದ್ದ ಹಿಂದಿನ ನೀತಿಗಳನ್ನೆಲ್ಲಾ ಬದಲಾಯಿಸಿದರು. ಅದಕ್ಕೆ ಬೇಕಾದ ಹೊಸ ನೀತಿ ಸೂತ್ರಗಳನ್ನು ರೂಪಿಸಿದರು. ಯುಐಡಿಎಐ (ಆಧಾರ್), ವ್ಯಾಟ್, ಹೊಸ ಕೈಗಾರಿಕಾ ನೀತಿ, ಹೊಸ ಶಿಕ್ಷಣ ನೀತಿ, ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಮಾನ್ಯತೆ ನೀಡುವ ನೀತಿ, ಕಾರ್ಮಿಕರ ಭದ್ರತೆ ನಿರಾಕರಿಸುವ ಹೊಸ ಕಾರ್ಮಿಕ ನೀತಿ ಇತ್ಯಾದಿಗಳನ್ನು ರೂಪಿಸುವುದೂ, ಜಾರಿ ಮಾಡುವುದೂ ನಡೆಯಿತು. ಸರಕಾರಿ ನೌಕರರಿಗೆ ಹಾಗೂ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಭದ್ರತೆಯಾಗಿದ್ದ ಪಿಂಚಣಿ ವ್ಯವಸ್ಥೆಯನ್ನು ಮೊಟಕುಗೊಳಿಸಲಾಯಿತು. ಹತ್ತು ಹಲವು ದಮನಕಾರಿ ಕರಾಳ ಶಾಸನಗಳನ್ನು ರೂಪಿಸಿ ಜನರ ಮೇಲೆ ಹೇರಲಾಯಿತು. ಜಾಗತಿಕ ಬಂಡವಾಳಶಾಹಿ ದೇಶಗಳಾದ ಅಮೆರಿಕ, ಜರ್ಮನಿ, ಯು.ಕೆ., ಇಸ್ರೇಲ್ ಮೊದಲಾದ ರಾಷ್ಟ್ರಗಳೊಂದಿಗೆ ದೇಶಕ್ಕೆ ಮಾರಕವಾಗುವ ಹತ್ತು ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಈ ಎಲ್ಲಾ ಮಾರಕಗಳನ್ನು ಮರೆಮಾಚಲು ಮಾಹಿತಿ ಹಕ್ಕು ಕಾಯ್ದೆ, ಉದ್ಯೋಗ ಖಾತರಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ಗಳಂತಹ ಕೆಲವು ಜನಪ್ರಿಯವೆನಿಸುವ ಯೋಜನೆಗಳನ್ನೂ ಘೋಷಿಸಲಾಗಿತ್ತು. ಅದರಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಹತ್ತು ಹಲವು ಭ್ರಷ್ಟಾಚಾರಗಳು ಹೊರಬರಲು ಕಾರಣವಾಯಿತು. ಹಾಗೆಯೇ ಅದನ್ನಿಟ್ಟುಕೊಂಡು ಬ್ಲಾಕ್‌ಮೇಲ್ ಭ್ರಷ್ಟಾಚಾರಗಳೂ ಶುರುವಾದವು.
ಉದ್ಯೋಗ ಖಾತ್ರಿ, ಆರೋಗ್ಯ ಮಿಷನ್‌ನಂತಹವುಗಳು ಬಹುತೇಕವಾಗಿ ಭ್ರಷ್ಟಾಚಾರಕ್ಕೆ ಮತ್ತೊಂದು ಯೋಜನೆಗಳ ತರಹವೇ ವರ್ತಿಸಿದೆ.
  ಅವರ ಕಾಲದಲ್ಲಿಯೇ ಅದುವರೆಗೂ ಇಲ್ಲದ ಭಾರೀ ಭ್ರಷ್ಟಾಚಾರ ಪ್ರಕರಣಗಳು ದಾಖಲಾದವು, ಏಶ್ಯನ್ ಗೇಮ್ಸ್ ಹಗರಣ, 2ಜಿ ತರಂಗಾಂತರ ಹಗರಣ, ಕಲ್ಲದ್ದಲು ಹಗರಣ ಮೊದಲಾದ ಹತ್ತಾರು ಸಾವಿರ ಕೋಟಿಗಳ ಬಹು ದೊಡ್ಡ ಹಗರಣಗಳು ಬೆಳಕಿಗೆ ಬಂದವು. ವಿವಾದಿತ ನಾಗರಿಕ ಅಣು ಒಪ್ಪಂದಕ್ಕೆ ಭಾರೀ ವಿರೋಧದ ನಡುವೆಯೂ ಸಹಿ ಹಾಕಲಾಯಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲವೇ ಕಾರ್ಪೊರೇಟುಗಳ ಏಕಸ್ವಾಮ್ಯ ಸ್ಥಾಪಿತವಾಗಿ ನೂರಾರು ಕಂಪೆನಿಗಳು ಬಾಗಿಲು ಹಾಕಿಕೊಂಡವು.
ಮನಮೋಹನ್ ಸಿಂಗ್ ಸಾರ್ವಜನಿಕವಾಗಿ ಮಾತಾಡುತ್ತಿದ್ದುದು ಬಹಳ ಕಡಿಮೆಯಾಗಿತ್ತು. ಅವರು ಪತ್ರಿಕಾಗೋಷ್ಠಿ ನಡೆಸಿದ್ದು ಕೂಡ ವಿರಳ. ಆದರೆ ಅವರು ಜಾಗತಿಕ ಕಾರ್ಪೊರೇಟು ಪರವಾಗಿ ಭಾರತದ ಎಲ್ಲಾ ರಂಗಗಳನ್ನು ತೆರೆದಿಡುವ ಕೆಲಸಗಳಲ್ಲಿ ಮುಂಚೂಣಿ ಪ್ರಧಾನಿಯಾಗಿದ್ದರು. ಅಂದರೆ ಕಾಂಗ್ರೆಸ್ಸಿನ ಮನಮೋಹನ್ ಸಿಂಗ್ ಸರಕಾರ ದೇಶದ ಸಕಲ ರಂಗಗಳನ್ನೂ ಜಾಗತಿಕ ಕಾರ್ಪೊರೇಟುಗಳಿಗೆ ತೆರೆದಿಡುವ ಕಾರ್ಯವನ್ನು ಬಹಳ ಚಾಕಚಕ್ಯತೆಗಳಿಂದ ಮಾಡಿದವರು. ಅದಕ್ಕೆ ಬೇಕಾದ ಎಲ್ಲಾ ನೀತಿಗಳನ್ನೂ ರೂಪಿಸಿ ಇಟ್ಟವರಲ್ಲಿ ಪ್ರಮುಖರಾಗಿದ್ದಾರೆ.
2014ರ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಸರಕಾರ ಜನಸಾಮಾನ್ಯರ ತೀವ್ರ ಆಕ್ರೋಶಕ್ಕೆ ಒಳಗಾಗಿತ್ತು. ನಿರುದ್ಯೋಗ ಸಮಸ್ಯೆಯ ಹೆಚ್ಚಳ ಅಲ್ಲದೇ ದೇಶದ ಆರ್ಥಿಕತೆ ತೀವ್ರ ಬಿಕ್ಕಟ್ಟಿನಿಂದ ಕುಸಿತದೆಡೆಗೆ ಸರಿಯುತ್ತಿತ್ತು. ಮನಮೋಹನ್ ಸಿಂಗ್ ಅವಧಿಯಲ್ಲೂ ಅಂಬಾನಿ ಕೂಟದಂತಹ ಭಾರೀ ಕಾರ್ಪೊರೇಟು ಕೂಟಗಳು ಗರಿಷ್ಠ ಲಾಭಗಳನ್ನು ಕೊಳ್ಳೆ ಹೊಡೆದಿದ್ದವು. ಹಲವು ಹಗರಣಗಳಲ್ಲಿ ಅಂಬಾನಿ, ಟಾಟಾಗಳಂತಹ, ಭಾರೀ ಕಾರ್ಪೊರೇಟು ಕೂಟಗಳ ಹೆಸರು ಕೂಡ ಕೇಳಿ ಬಂದಿತ್ತು. ವಿಶ್ವಾಸ ಹಾಗೂ ಜನಪ್ರಿಯತೆ ಕಳೆದುಕೊಂಡ ಕಾಂಗ್ರೆಸ್ ನೇತೃತ್ವದ ಸರಕಾರದ ಬದಲಿಗೆ ಅದುವರೆಗೂ ನೇರವಾಗಿ ಕಂಡಿರದಿದ್ದ ರೀತಿಯಲ್ಲಿ ನರೇಂದ್ರ ಮೋದಿ ಸರಕಾರವನ್ನು ಭಾರೀ ಬಹುಮತ ಮೂಡಿಸಿ ದೇಶದ ಮೇಲೆ ಹೇರಲಾಯಿತು. ಅದಕ್ಕೆ ಕೋಮುವಿಷ, ಜಾತಿಯ ವಿಷಗಳ ಜೊತೆಗೆ ಹುಸಿ ಅಭಿವೃದ್ಧಿಯ ಕಲ್ಪನೆಗಳನ್ನು ವ್ಯಾಪಕವಾಗಿ ಬಳಸಲಾಯಿತು. ಇವೆಲ್ಲದರ ಹಿಂದೆ ಅಮೆರಿಕ ಸೇರಿದಂತೆ ಹಲವು ಜಾಗತಿಕ ಹಾಗೂ ದೇಶದ ಒಳಗಿನ ಶಕ್ತಿಗಳು ಕೆಲಸ ಮಾಡಿದ್ದವು.
 


ಇದೀಗ ಮೋದಿ ಸರಕಾರದ 5 ವರ್ಷಗಳ ಅವಧಿ ಮುಗಿದಿದೆ. ಮನಮೋಹನ್ ಸಿಂಗ್ ಸರಕಾರ ಮಾಡದೇ ಬಿಟ್ಟು ಹೋಗಿದ್ದ ಭಾರೀ ಕಾರ್ಪೊರೇಟು ಪರ ಕೆಲಸಗಳನ್ನೆಲ್ಲಾ ಜನರನ್ನು ಅದ್ಭುತವಾಗಿ ಯಾಮಾರಿಸಿ ಮೋದಿ ಮುಗಿಸಿಕೊಟ್ಟಿದ್ದಾರೆ. ಹತ್ತಾರು ಸಾವಿರ ಕೋಟಿಗಳ ಮೇಕ್ ಇಂಡಿಯಾ, ಸ್ಕಿಲ್ ಇಂಡಿಯಾ, ಗಂಗಾ ಶುದ್ಧೀಕರಣ ಯೋಜನೆ, ರಫೇಲ್ ಹಗರಣ, ಫಸಲ್ ಬಿಮಾ ಹಗರಣಗಳಂತಹ ಹಲವಾರು ಹಗರಣಗಳ ಪರಂಪರೆಯನ್ನು ಮುಂದುವರಿಸಿದ್ದಾರೆ. ಈಗ ಜನಸಾಮಾನ್ಯರ ಮುಂದೆ ಮೋದಿ ಸರಕಾರ ಬೆತ್ತಲಾಗಿ ನಿಂತಿದೆ. ಆದರೂ ಮೋದಿ ಭಕ್ತರು ತಮ್ಮ ಭಜನೆಗಳನ್ನು ನಿಲ್ಲಿಸಿಲ್ಲ. ಭಜನೆಗೆ ಕಾಸು ಸಿಕ್ಕುವವರೆಗೂ ಅದು ಹೇಗೂ ನಿಲ್ಲುವುದಿಲ್ಲ ಬಿಡಿ. ಮೋದಿ ಈ ಬಾರಿಯ ಚುನಾವಣೆಯಲ್ಲಿ ಸ್ವಲ್ಪಮಸುಕಾದಂತೆ ಕಂಡಿದ್ದಾರೆ. ರಾಹುಲ್ ಗಾಂಧಿ ಸ್ವಲ್ಪಹೆಚ್ಚು ಪ್ರಚಲಿತಕ್ಕೆ ಬಂದಂತೆ ಕಾಣಿಸುತ್ತಿದೆ. ಅದಕ್ಕೆ ತಕ್ಕಂತೆ ನರೇಂದ್ರ ಮೋದಿಯ ಪೆದ್ದು ಹಾಗೂ ಮೂರ್ಖತನದ ಹೇಳಿಕೆಗಳು ಜನರ ಮಧ್ಯೆ ನಗೆಪಾಟಲಿಗೀಡಾಗಿವೆ. ಮತ್ತೊಮ್ಮೆ ಅಧಿಕಾರದ ಕುರ್ಚಿಯಲ್ಲಿ ಕೂರಲು ಮೋದಿ ತಮ್ಮ ಬತ್ತಳಿಕೆಯಲ್ಲಿ ಉಳಿದಿರುವ ಅಸ್ತ್ರಗಳನ್ನು ಕೂಡ ಖಾಲಿ ಮಾಡಿದ್ದಾರೆ. ಕೊನೆ ಅಸ್ತ್ರವಾಗಿ ಕೇದಾರನಾಥದಲ್ಲಿ ಧ್ಯಾನವನ್ನು ಮಾಡಿದ್ದಾರೆ. ಮೋದಿ ಈಗ ಹಿಂದಿನಂತೆ ಜನರನ್ನು ಮೋಡಿ ಮಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಮೊದಲಿನಂತೆ ಮೋದಿಯನ್ನು ಮಾತ್ರ ಭಾರೀ ಕಾರ್ಪೊರೇಟು ಸೇರಿದಂತೆ ಆಳುವ ಶಕ್ತಿಗಳು ನೆಚ್ಚಿಕೊಂಡು ಕೂಡ ಕುಳಿತಿಲ್ಲ. ಹಲವು ಪಕ್ಷಗಳ ಸಮ್ಮಿಶ್ರ ಸರಕಾರವೂ ಸೇರಿದಂತೆ ಅವರದೇ ಪರ್ಯಾಯ ಯೋಜನೆಗಳೊಂದಿಗೆ ಕಾದು ನಿಂತಿದ್ದಾರೆ. 23/05/2019ರಂದು ಹೊರಬೀಳುವ ಚುನಾವಣಾ ಪಲಿತಾಂಶವನ್ನು ಆಧರಿಸಿ ಅವರ ಎಲ್ಲಾ ನಡೆಗಳು ನಿಂತಿವೆ.


ಮಿಂಚಂಚೆ: nandakumarnandana67@gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News