400 ವಿದ್ಯಾರ್ಥಿಗಳ 278 ಕೋ.ರೂ ಶಿಕ್ಷಣ ಸಾಲ ಭರಿಸುತ್ತೇನೆಂದ ಬಿಲಿಯಾಧೀಶ

Update: 2019-05-20 18:41 GMT

ವಾಶಿಂಗ್ಟನ್, ಮೇ 20: ಅಮೆರಿಕದ ಅಟ್ಲಾಂಟ ನಗರದ ಕಾಲೇಜೊಂದರಲ್ಲಿ ಪದವಿ ಪ್ರದಾನ ಸಮಾರಂಭ ನಡೆಯುತ್ತಿದ್ದಾಗ ಬಿಲಿಯಾಧೀಶ ತಂತ್ರಜ್ಞಾನ ಉದ್ಯಮಿಯೊಬ್ಬರು ಬಾಂಬೊಂದನ್ನು ಹಾಕಿದರು! ಆದರೆ, ಅದು ನಿಜ ಅರ್ಥದ ಬಾಂಬ್ ಅಲ್ಲ. ಪದವಿ ಪ್ರದಾನ ನಡೆಯುತ್ತಿರುವ ತರಗತಿಯ ಎಲ್ಲ ವಿದ್ಯಾರ್ಥಿಗಳ ಶಿಕ್ಷಣ ಸಾಲವನ್ನು ನಾನು ಪಾವತಿಸುವುದಾಗಿ ಅವರು ಘೋಷಿಸಿದರು!

ವಿದ್ಯಾರ್ಥಿಗಳ ಸಾಲಗಳ ಒಟ್ಟು ಮೊತ್ತ ಸುಮಾರು 40 ಮಿಲಿಯ ಡಾಲರ್ (ಸುಮಾರು 278 ಕೋಟಿ ರೂಪಾಯಿ) ಎಂಬುದಾಗಿ ಅಂದಾಜಿಸಲಾಗಿದೆ.

ಈ ಘೋಷಣೆಯನ್ನು ಮಾಡಿದ್ದು ಉದ್ಯಮಿ ರಾಬರ್ಟ್ ಎಫ್. ಸ್ಮಿತ್. ರವಿವಾರ ಮೋರ್‌ಹೌಸ್ ಕಾಲೇಜ್‌ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಸುಮಾರು 400 ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅವರು ಈ ಘೋಷಣೆ ಮಾಡಿದರು ಎಂದು ‘ಟೈಮ್’ ಮ್ಯಾಗಝಿನ್ ವರದಿ ಮಾಡಿದೆ.

ಈ ಕಾಲೇಜು ಐತಿಹಾಸಿಕವಾಗಿ ಪುರುಷ ಕರಿಯ ವರ್ಣೀಯ ಕಾಲೇಜು ಎಂದೇ ಹೆಸರಾಗಿದೆ.

ಕರಿಯ ವರ್ಣೀಯರಾಗಿರುವ ಸ್ಮಿತ್, ಖಾಸಗಿ ಈಕ್ವಿಟಿ ಸಂಸ್ಥೆ ‘ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್‌’ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಈ ಸಂಸ್ಥೆಯು ಸಾಫ್ಟ್‌ವೇರ್, ಡೇಟಾ ಮತ್ತು ತಂತ್ರಜ್ಞಾನ ಆಧಾರಿತ ಕಂಪೆನಿಗಳಲ್ಲಿ ಹೂಡಿಕೆ ಮಾಡುತ್ತದೆ.

ಅಮೆರಿಕದ ಅತ್ಯಂತ ಶ್ರೀಮಂತ ಕರಿಯ ವ್ಯಕ್ತಿ

ರಾಬರ್ಟ್ ಸ್ಮಿತ್ ಅಮೆರಿಕದ ಅತ್ಯಂತ ಶ್ರೀಮಂತ ಕರಿಯ ವ್ಯಕ್ತಿಯಾಗಿದ್ದಾರೆ. ಅವರು 5 ಬಿಲಿಯ ಡಾಲರ್ (ಸುಮಾರು 34,836 ಕೋಟಿ ರೂಪಾಯಿ) ಸಂಪತ್ತು ಹೊಂದಿದ್ದಾರೆ ಎಂಬುದಾಗಿ ‘ಫೋರ್ಬ್ಸ್’ ಮ್ಯಾಗಝಿನ್ ಅಂದಾಜಿಸಿದೆ.

ಅವರ ಹಣಕಾಸು ಸಂಸ್ಥೆ ವಿಸ್ಟಾ 46 ಬಿಲಿಯ ಡಾಲರ್ (ಸುಮಾರು 3.20 ಲಕ್ಷ ಕೋಟಿ ರೂಪಾಯಿ) ಸೊತ್ತುಗಳನ್ನು ಹೊಂದಿದೆ.

ಸ್ಮಿತ್ ಡೆನ್ವರ್‌ನಲ್ಲಿರುವ ಕರಿಯ ಮಧ್ಯಮ ವರ್ಗದ ಉಪನಗರವೊಂದರಲ್ಲಿ ಬೆಳೆದರು. ಅವರ ಇಬ್ಬರೂ ಹೆತ್ತವರು ಶಿಕ್ಷಣದಲ್ಲಿ ಪಿಎಚ್‌ಡಿ ಪಡೆದಿದ್ದರು.

ಅವರು ಕಾನೇಲ್‌ನಲ್ಲಿ ಕಾಲೇಜ್‌ಗೆ ಹೋಗಿ ಕೆಮಿಕಲ್ ಇಂಜಿನಿಯರಿಂಗ್ ಅಧ್ಯಯನ ಮಾಡಿದರು. ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಬಿಝ್ನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಸಾನ್‌ಫ್ರಾನ್ಸಿಸ್ಕೊದ ಗೋಲ್ಡ್‌ಮನ್ ಸ್ಯಾಕ್ಸ್ ಕಂಪೆನಿಯಲ್ಲಿ ಕೆಲಸ ಮಾಡಿದರು. ಅಲ್ಲಿ ಅವರು ಆ್ಯಪಲ್, ಹ್ಯೂಲೆಟ್ ಪ್ಯಾಕರ್ಡ್ ಮತ್ತು ಮೈಕ್ರೋಸಾಫ್ಟ್ ಮುಂತಾದ ಕಂಪೆನಿಗಳಿಗೆ ಸಲಹೆ ನೀಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News