ದ.ಆಫ್ರಿಕದ ವಿಶ್ವಕಪ್ ಕನಸಿಗೆ ಬೌಲರ್‌ಗಳೇ ಆಸರೆ

Update: 2019-05-21 05:40 GMT

ಹೊಸದಿಲ್ಲಿ, ಮೇ.20: ಕ್ರಿಕೆಟ್ ಜಗತ್ತಿನ ಚೋಕರ್ಸ್‌ಗಳೆಂದೇ ಪರಿಗಣಿಸಲ್ಪಟ್ಟಿರುವ ದಕ್ಷಿಣ ಆಫ್ರಿಕ ಈ ಬಾರಿ ವಿಶ್ವಕಪ್ ಗೆಲ್ಲುವ ತನ್ನ ಕನಸು ನನಸಾಗಿಸಲು ಬೌಲರ್‌ಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಡೇಲ್ ಸ್ಟೇಯ್ನಿ ಅನುಭವ, ಕಾಗಿಸೊ ರಬಾಡನ ಮಾರಕ ದಾಳಿ ಮತ್ತು ಇಮ್ರಾನ್ ತಾಹಿರ್‌ನ ಸ್ಪಿನ್ ದಾಳಿಯಿಂದ ಎದುರಾಳಿಗಳನ್ನು ಕಟ್ಟಿ ಹಾಕಲು ದಕ್ಷಿಣ ಆಫ್ರಿಕ ರಣತಂತ್ರ ಹೆಣೆಯುತ್ತಿದೆ. 1999ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಆಘಾತಕಾರಿ ಸೋಲನುಭವಿಸಿದ ನಂತರ ದಕ್ಷಿಣ ಆಫ್ರಿಕ ತಂಡಕ್ಕೆ ಚೋಕರ್ಸ್‌ಗಳೆಂಬ ಅಡ್ಡ ಹೆಸರು ಬಂದಿತ್ತು. ವಿಶ್ವಕಪ್‌ನಲ್ಲಿ ನಾಲ್ಕು ಬಾರಿ ಸೆಮಿಫೈನಲ್ ಪ್ರವೇಶಿಸಿದರೂ ಒಂದು ಬಾರಿಯೂ ಫೈನಲ್ ತಲುಪದಿರುವುದು ಹರಿಣಗಳಿಗೆ ಈ ಹೆಸರು ಖಾಯಂ ಆಗುವಂತೆ ಮಾಡಿತು. ಆದರೆ ಈ ಬಾರಿ ವಿಶ್ವಕಪ್ ಇಂಗ್ಲೆಂಡ್‌ನಲ್ಲಿ ನಡೆಯುತ್ತಿದ್ದು ಇಲ್ಲಿನ ಪರಿಸ್ಥಿತಿಯನ್ನು ಪರಿಗಣಿಸಿದರೆ ದಕ್ಷಿಣ ಆಫ್ರಿಕದ ಅಗ್ರಮಾನ್ಯ ವೇಗಿಗಳು ಮತ್ತು ಸ್ಪಿನ್ನರ್‌ಗಳು ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸುವುದರಲ್ಲಿ ಅನುಮಾನವಿಲ್ಲ. 35ರ ಹರೆಯದ ಸ್ಟೇನ್ ಈಗಲೂ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್ ಪಡೆಯಲು ಅವರಿಗಿನ್ನು ಕೇವಲ ನಾಲ್ಕು ವಿಕೆಟ್‌ಗಳ ಅಗತ್ಯವಿದೆ. ಸರಣಿಯುದ್ದಕ್ಕೂ ಸ್ಟೇಯ್ನಿ ಗಾಯಗೊಳ್ಳದೆ ಉಳಿದರೆ ಎದುರಾಳಿಗಳಿಗೆ ಸಿಂಹಸ್ವಪ್ನವಾಗಲಿದ್ದಾರೆ. ಇನ್ನು ಯುವ ಕಾಗಿಸೊ ರಬಾಡ ಇತ್ತೀಚೆಗೆ ಕೊನೆಗೊಂಡ ಐಪಿಎಲ್‌ನಲ್ಲಿ ಉತ್ತಮ ನಿರ್ವಹಣೆ ತೋರಿದ ಹುಮ್ಮಸ್ಸಿನಲ್ಲೇ ವಿಶ್ವಕಪ್ ಆಡಲಿಳಿಯಲಿದ್ದಾರೆ. ರಬಾಡ ಕರಾರುವಕ್ ದಾಳಿಗೆ ಅನುಭವಿ ಬ್ಯಾಟ್ಸ್ ಮ್ಯಾನ್‌ಗಳೂ ಉತ್ತರಿಸಲು ವಿಫಲವಾಗಿದ್ದಾರೆ. ಇಮ್ರಾನ್ ತಾಹಿರ್ ಸ್ಪಿನ್ ದಾಳಿಗೆ ಪರಿಣಾಮಕಾರಿ ಸ್ಪಿನ್ ಆಟಗಾರರೂ ತಬ್ಬಿಬ್ಬುಗೊಳ್ಳುತ್ತಾರೆ. ಪಿಚ್‌ನಿಂದ ಕೊಂಚ ಬೆಂಬಲ ಸಿಕ್ಕರೂ ಅದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ತಾಹಿರ್ ಉತ್ತಮ ಫಾರ್ಮ್‌ನಲ್ಲಿದ್ದರೆ ದಕ್ಷಿಣ ಆಫ್ರಿಕಾ ಅರ್ಧ ವಿಶ್ವಕಪ್ ಗೆದ್ದಂತೆ. ದಕ್ಷಿಣ ಆಫ್ರಿಕ ತನ್ನ ಮೊದಲ ವಿಶ್ವಕಪ್ ಪಂದ್ಯವನ್ನು ಮೇ 30ರಂದು ಇಂಗ್ಲೆಂಡ್ ವಿರುದ್ಧ ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News