ವಿಶ್ವಕಪ್ ನಲ್ಲಿ ಗರಿಷ್ಠ ಅರ್ಧಶತಕಗಳನ್ನು ದಾಖಲಿಸಿದ ಐವರು ದಾಂಡಿಗರು

Update: 2019-05-21 06:16 GMT

ಹೊಸದಿಲ್ಲಿ, ಮೇ 20: ಐಸಿಸಿ ವಿಶ್ವಕಪ್ ಮೇ 30ರಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಸಂಸ್ಥೆಗಳ ಜಂಟಿ ಆತಿಥ್ಯದಲ್ಲಿ ಇಂಗ್ಲೆಂಡ್‌ನಲ್ಲಿ ಆರಂಭಗೊಳ್ಳಲಿದೆ. ಈ ಟೂರ್ನಮೆಂಟ್‌ನಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ. ಹಲವು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆ ಇದೆ.

 ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೂರ್ನಮೆಂಟ್‌ನಲ್ಲಿ ಬ್ಯಾಟಿಂಗ್ ಸ್ನೇಹಿ ವಾತಾವರಣವನ್ನು ನಿರೀಕ್ಷಿಸಲಾಗಿದೆ.

   ಕಳೆದ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಎರಡು ಬಾರಿ 440ಕ್ಕಿಂತ ಅಧಿಕ ರನ್‌ನ್ನು ತಂಡಗಳು ಕಲೆ ಹಾಕಿವೆ. ಇಂಗ್ಲೆಂಡ್ 2016ರಲ್ಲಿ ಪಾಕಿಸ್ತಾನದ ವಿರುದ್ಧ 3 ವಿಕೆಟ್ ನಷ್ಟದಲ್ಲಿ 444 ರನ್ ಗಳಿಸಿತ್ತು. 2018ರಲ್ಲಿ ಆಸ್ಟ್ರೇಲಿಯದ ವಿರುದ್ಧ 6 ವಿಕೆಟ್ ನಷ್ಟದಲ್ಲಿ 481 ರನ್ ದಾಖಲಿಸುವ ಮೂಲಕ ಹಿಂದಿನ ದಾಖಲೆಯನ್ನು ಇಂಗ್ಲೆಂಡ್ ಮುರಿದಿತ್ತು.

ಕ್ರಿಕೆಟ್‌ನಲ್ಲಿ ಗರಿಷ್ಠ ಏಕದಿನ ಅರ್ಧಶತಕಗಳನ್ನು ದಾಖಲಿಸಿರುವ ಐವರು ಅಗ್ರ ದಾಂಡಿಗರ ವಿವರ ಇಂತಿವೆ.

 ಸಚಿನ್ ತೆಂಡುಲ್ಕರ್ (15)

 ಭಾರತದ ಸಚಿನ್ ತೆಂಡುಲ್ಕರ್ ವಿಶ್ವಕಪ್‌ನಲ್ಲಿ ಗರಿಷ್ಠ ಅರ್ಧಶತಕಗಳನ್ನು ದಾಖಲಿಸಿರುವ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ತೆಂಡುಲ್ಕರ್ 1992ರಿಂದ 2011ರ ತನಕ ಆಡಿರುವ 6 ವಿಶ್ವಕಪ್‌ಗಳ 45 ಪಂದ್ಯಗಳಲ್ಲಿ 15 ಅರ್ಧಶತಕಗಳನ್ನು ದಾಖಲಿಸುವ ಮೂಲಕ ವಿಶ್ವಕಪ್‌ನಲ್ಲಿ ಗರಿಷ್ಠ ಅರ್ಧಶತಕಗಳನ್ನು ದಾಖಲಿಸಿರುವ ಆಟಗಾರರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ಸಚಿನ್ 10 ದೇಶಗಳ ವಿರುದ್ಧದ ಪಂದ್ಯಗಳಲ್ಲಿ ಸಚಿನ್ ಗರಿಷ್ಠ ಅರ್ಧಶತಕಗಳನ್ನು ದಾಖಲಿಸಿದ್ದಾರೆ. 2003ರಲ್ಲಿ ಪಾಕಿಸ್ತಾನ ವಿರುದ್ಧ ಸೆಂಚೂರಿಯನ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ 98 ರನ್ ದಾಖಲಿಸಿ ಭಾರತಕ್ಕೆ 6 ವಿಕೆಟ್‌ಗಳ ಭರ್ಜರಿ ಗೆಲುವಿಗೆ ನೆರವಾಗಿದ್ದರು.

ಸಚಿನ್ ತೆಂಡುಲ್ಕರ್ ವಿಶ್ವಕಪ್‌ನಲ್ಲಿ 2,278 ರನ್ ದಾಖಲಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಮೂರು ಅರ್ಧಶತಕ, ಆಸ್ಟ್ರೇಲಿಯ, ಶ್ರೀಲಂಕಾ ಮತ್ತು ಝಿಂಬಾಬ್ವೆ ವಿರುದ್ಧ ತಲಾ 2, ನ್ಯೂಝಿಲ್ಯಾಂಡ್, ವಿಂಡೀಸ್, ನೆದರ್‌ಲ್ಯಾಂಡ್, ಇಂಗ್ಲೆಂಡ್, ಕೀನ್ಯ ಮತ್ತು ಬರ್ಮುಡಾ ವಿರುದ್ಧ ತಲಾ 1 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಸಚಿನ್ ತೆಂಡುಲ್ಕರ್ ವಿಶ್ವಕಪ್‌ನಲ್ಲಿ ಒಟ್ಟು 6 ಶತಕಗಳನ್ನು ತನ್ನ ಹೆಸರಿನಲ್ಲಿ ಜಮೆ ಮಾಡಿದ್ದಾರೆ.

 ಜಾಕ್ ಕಾಲಿಸ್ (ದ.ಆಫ್ರಿಕ) 9

ದಕ್ಷಿಣ ಆಫ್ರಿಕದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ಜಾಕ್ ಕಾಲಿಸ್ ವಿಶ್ವಕಪ್‌ನಲ್ಲಿ ಗರಿಷ್ಠ ಅರ್ಧಶತಕಗಳನ್ನು ದಾಖಲಿಸಿರುವ ದಾಂಡಿಗರ ಪೈಕಿ 2ನೇ ಸ್ಥಾನದಲ್ಲಿದ್ದಾರೆ. ಅವರು 9 ಅರ್ಧಶತಕಗಳನ್ನು ಜಮೆ ಮಾಡಿದ್ದಾರೆ.

18 ವರ್ಷಗಳ ಅಂತರ್‌ರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿನಲ್ಲಿ 1996ರಿಂದ 2011ರ ನಡೆದ ವಿಶ್ವಕಪ್‌ನಲ್ಲಿ 36 ಪಂದ್ಯಗಳನ್ನು ಆಡಿದ್ದಾರೆ. ನೆದರ್‌ಲ್ಯಾಂಡ್ ವಿರುದ್ಧ 2007ರಲ್ಲಿ ಔಟಾಗದೆ 128 ರನ್ ಗಳಿಸಿದ್ದಾರೆ. ವಿಶ್ವಕಪ್‌ನ ಐದು ಆವೃತ್ತಿಗಳಲ್ಲಿ 21 ವಿಕೆಟ್‌ಗಳನ್ನು ತಮ್ಮ ಖಾತೆಗೆ ಜಮೆ ಮಾಡಿದ್ದಾರೆ.

ಕಾಲಿಸ್ ಭಾರತದ ವಿರುದ್ಧ 2 ಅರ್ಧಶತಕ, ಪಾಕಿಸ್ತಾನ, ನ್ಯೂಝಿಲ್ಯಾಂಡ್, ವೆಸ್ಟ್‌ಇಂಡೀಸ್, ಆಸ್ಟ್ರೇಲಿಯ, ಶ್ರೀಲಂಕಾ, ಐರ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ತಲಾ 1 ಅರ್ಧಶತಕಗಳನ್ನು ಜಮೆ ಮಾಡಿದ್ದಾರೆ.

 ಗ್ರಹಾಂ ಗೂಚ್ (ಇಂಗ್ಲೆಂಡ್) 8

ಇಂಗ್ಲೆಂಡ್‌ನ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಗ್ರಹಾಂ ಗೂಚ್ ಐಸಿಸಿ ವಿಶ್ವಕಪ್‌ನಲ್ಲಿ ಗರಿಷ್ಠ ಅರ್ಧಶತಕಗಳನ್ನು ಜಮೆ ಮಾಡಿರುವ ಆಟಗಾರರ ಪೈಕಿ 3ನೇ ಸ್ಥಾನದಲಿದ್ದಾರೆ.

ಗೂಚ್ 8 ಅರ್ಧಶತಕಗಳನ್ನು ಜಮೆ ಮಾಡಿದ್ದಾರೆ. 1979, 1987 ಮತ್ತು 1992 ವಿಶ್ವಕಪ್ ಆವೃತ್ತಿಗಳಲ್ಲಿ ಗೂಚ್ 21 ಪಂದ್ಯಗಳನ್ನು ಆಡಿದ್ದರು. 44.85 ಸರಾಸರಿಯಂತೆ 897 ರನ್ ಜಮೆ ಮಾಡಿದ್ದರು.1987ರಲ್ಲಿ ಭಾರತದ ವಿರುದ್ಧ ವಿಶ್ವಕಪ್‌ನಲ್ಲಿ ಶತಕ (115) ಬಾರಿಸಿದ್ದರು. ಅವರ ದಾಖಲಿರುವ 8 ಅರ್ಧಶತಕಗಳ ಪೈಕಿ ವೆಸ್ಟ್‌ಇಂಡೀಸ್, ಆಸ್ಟ್ರೇಲಿಯ ಮತ್ತು ಶ್ರೀಲಂಕಾ ವಿರುದ್ಧ ತಲಾ 1 ಬಾರಿ 50ಕ್ಕಿಂತ ಹೆಚ್ಚು ರನ್ ದಾಖಲಿಸಿದ್ದಾರೆ.

 ಮಾರ್ಟಿನ್ ಕ್ರೋವ್(ನ್ಯೂಝಿಲ್ಯಾಂಡ್ ) 8

ಮಾರ್ಟಿನ್ ಕ್ರೋವ್ ನ್ಯೂಝಿಲ್ಯಾಂಡ್‌ನ ಸಾರ್ವ ಕಾಲಿಕ ದಾಂಡಿಗರಾಗಿದ್ದಾರೆ. 1992ರ ಆವೃತ್ತಿಯ ವಿಶ್ವಕಪ್‌ನಲ್ಲಿ ಅವರು 9 ಪಂದ್ಯಗಳಲ್ಲಿ 448 ರನ್ ದಾಖಲಿಸಿದ್ದಾರೆ. ನ್ಯೂಝಿಲ್ಯಾಂಡ್‌ನ್ನು ಏಕಾಂಗಿ ಹೋರಾಟದ ಮೂಲಕ ಸೆಮಿಪೈನಲ್ ತಲುಪಿಸಿದ್ದರು. ಆದರೆ ಪಾಕಿಸ್ತಾನ ವಿರುದ್ಧ ಸೋತು ಪ್ರಶಸ್ತಿಯ ಸುತ್ತಿಗೇರುವ ಅವಕಾಶ ಕಳೆದುಕೊಂಡಿತ್ತು. ಗರಿಷ್ಠ ರನ್ ಗಳಿಸಿದ್ದರು. ಪ್ಲೇಯರ್ ಆಫ್ ಟೂರ್ನಮೆಂಟ್ ಪ್ರಶಸ್ತಿಗೆ ಭಾಜನರಾಗಿದ್ದರು.

  ಕ್ರೋವ್ 1983, 1987 ಮತ್ತು 1992ರ ವಿಶ್ವಕಪ್‌ಗಳ 21 ಪಂದ್ಯಗಳಲ್ಲಿ ಭಾಗವಹಿಸಿ 8 ಅರ್ಧಶತಕಗಳನ್ನು ಜಮೆ ಮಾಡಿದ್ದರು. 8 ಅರ್ಧಶತಕಗಳಲ್ಲಿ 3 ಅರ್ಧಶತಕಗಳನ್ನು ಝಿಂಬಾಬ್ವೆ ವಿರುದ್ಧ ದಾಖಲಿಸಿದ್ದರು. ಇಂಗ್ಲೆಂಡ್ ವಿರುದ್ಧ 2, ಪಾಕಿಸ್ತಾನ, ವೆಸ್ಟ್‌ಇಂಡೀಸ್ ವಿರುದ್ಧ ಮತ್ತು ಆಸ್ಟ್ರೇಲಿಯ ವಿರುದ್ಧ ತಲಾ 1 ಅರ್ಧಶತಕಗಳನ್ನು ಜಮೆ ಮಾಡಿದ್ದರು.

 ಹರ್ಷಲ್ ಗಿಬ್ಸ್ (ದ.ಆಫ್ರಿಕ)8

  ದಕ್ಷಿಣ ಆಫ್ರಿಕದ ಆರಂಭಿಕ ದಾಂಡಿಗ ಹರ್ಷಲ್ ಗಿಬ್ಸ್ ಅವರು ದಕ್ಷಿಣ ಆಫ್ರಿಕದ ಓರ್ವ ಯಶಸ್ವಿ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. 25 ವಿಶ್ವಕಪ್ ಪಂದ್ಯಗಳಲ್ಲಿ ಅವರು 8 ಅರ್ಧಶತಕಗಳನ್ನು ಜಮೆ ಮಾಡಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 143. ವಿಶ್ವಕಪ್‌ನ ಮೂರು ಆವೃತ್ತಿಗಳಲ್ಲಿ (1999, 2003 ಮತ್ತು 2007)ಅವರು ದಕ್ಷಿಣ ಆಫ್ರಿಕ ತಂಡದ ಪರ ಆಡಿದ್ದರು. 1,076 ರನ್ ಜಮೆ ಮಾಡಿರುವ ಅವರು 2010ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.

ಆಸ್ಟ್ರೇಲಿಯದ ಮೈಕಲ್ ಕ್ಲಾರ್ಕ್, ಕೀನ್ಯದ ಸ್ಟೀವ್ ಟಿಕೊಲೊ, ಭಾರತದ ಮುಹಮ್ಮದ್ ಅಝರುದ್ದೀನ್, ಆಸ್ಟ್ರೇಲಿಯದ ಆ್ಯಡಮ್ ಗಿಲ್‌ಕ್ರಿಸ್ಟ್ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ವಿಶ್ವಕಪ್‌ಗಳಲ್ಲಿ ತಲಾ 8 ಅರ್ಧಶತಕಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News