ಐಪಿಎಲ್ ಬೆಟ್ಟಿಂಗ್ ನ ಸಾಲ ತೀರಿಸಲು ಹಣ ನೀಡದ ತಂದೆಯನ್ನೇ ಕೊಂದ ಪುತ್ರ

Update: 2019-05-21 12:30 GMT

ರೋಹ್ಟಕ್ : ಐಪಿಎಲ್ ಪಂದ್ಯಾಟಗಳ ಮೇಲೆ ಬೆಟ್ಟಿಂಗ್ ನಡೆಸಿ ಲಕ್ಷಗಟ್ಟಲೆ ಹಣ ಕಳೆದುಕೊಂಡ ರೋಹ್ಟಕ್ ನಗರದ ವ್ಯಕ್ತಿಯೊಬ್ಬನನ್ನು ನಗರದ ಪ್ರಮುಖ ಪೀಠೋಪಕರಣ ಉದ್ಯಮಿಯಾಗಿರುವ ತಂದೆಯನ್ನು ಹತ್ಯೆಗೈದ ಆರೋಪದ ಮೇಲೆ ಆತನ ಅಪ್ರಾಪ್ತ ಪುತ್ರನ ಜತೆಗೆ ಬಂಧಿಸಲಾಗಿದೆ. ಆರೋಪಿಗೆ ಹಣ ನೀಡಲು ತಂದೆ ನಿರಾಕರಿಸಿದ್ದೇ ಹತ್ಯೆಗೆ ಕಾರಣವೆನ್ನಲಾಗಿದೆ. ಮೇ 10ರಂದು ತಂದೆಯ ಅಂಗಡಿಯಲ್ಲಿ ಆರೋಪಿ ಆತನ ತಂದೆಯ ಕತ್ತು ಹಿಚುಕಿ ಸಾಯಿಸಿದ್ದನೆಂದು ತಿಳಿದು ಬಂದಿದೆ. ಕೊಲೆ ಕೃತ್ಯವನ್ನು ಖಂಡಿಸಿ ಕಲನೌರ್ ಮಾರುಕಟ್ಟೆಯ ವರ್ತಕರು ಮುಂದಿನ ಕೆಲ ದಿನಗಳ ಕಾಲ ಬಂದ್ ಕೂಡ ನಡೆಸಿದ್ದರು.

ಐಪಿಎಲ್ ಬೆಟ್ಟಿಂಗಿಗಾಗಿ ಮಾಡಿದ್ದ ಸಾಲತೀರಿಸಲು ತಂದೆಯ ಬಳಿ ಆರೋಪಿ ಹಣ ಕೇಳಿದ್ದನನೆನ್ನಲಾಗಿದ್ದು ಆತ ನಿರಾಕರಿಸಿದಾಗ ಸಿಟ್ಟಿನಿಂದ ಆತನನ್ನು ಕೊಂದು ತನ್ನ ಅಪ್ರಾಪ್ತ ಪುತ್ರನ ಸಹಾಯದಿಂದ ರೋಹ್ಟಕ್ ನಗರದ ಸಕ್ಕರೆ ಕಾರ್ಖಾನೆ ಬಳಿ ಮೃತದೇಹವನ್ನು ಎಸೆದಿದ್ದ.

ಮರುದಿನ ತನ್ನ ತಂದೆ ನಾಪತ್ತೆಯಾಗಿದ್ದಾರೆಂದು ಪೊಲೀಸ್ ದೂರು  ನೀಡಿದ್ದನಲ್ಲದೆ ನೆರೆಹೊರೆಯವರನ್ನು ಕರೆದುಕೊಂಡು ತಂದೆಯನ್ನು ಹುಡುಕುವ ನಾಟಕವಾಡಿ ಉದ್ದೇಶಪೂರ್ವಕವಾಗಿ ತಾನು ತಂದೆಯ ಮೃತದೇಹವನ್ನು ಎಸೆದ ಸ್ಥಳಕ್ಕೆ ಅವರನ್ನು ಕರೆದುಕೊಂಡು ಹೋಗಿದ್ದ.

ಪೊಲೀಸರು ಸಂಶಯದಿಂದ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆತ ಅಸ್ಪಷ್ಟ ಉತ್ತರ ನೀಡಲು ಆರಂಭಿಸಿದಾಗ ಮತ್ತಷ್ಟು ಸಂಶಯಗೊಂಡು ಆತನನ್ನು ಇನ್ನಷ್ಟು ಪ್ರಶ್ನಿಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News