ತನ್ನದೇ ದೇಶದ ಹೆಲಿಕಾಪ್ಟರ್ ಪತನಕ್ಕೆ ಕಾರಣವಾದ ವಾಯುಪಡೆ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ

Update: 2019-05-21 14:38 GMT
ಫೈಲ್ ಫೋಟೊ

ಹೊಸದಿಲ್ಲಿ, ಮೇ.21: ಫೆಬ್ರವರಿ 27ರಂದು ಶ್ರೀನಗರದಲ್ಲಿ ತನ್ನದೇ ದೇಶದ ಎಂಐ-17 ಹೆಲಿಕಾಪ್ಟರ್ ಪತನಕ್ಕೆ ಕಾರಣವಾದ ಶ್ರೀನಗರದ ವಾಯುನೆಲೆಯ ಹಿರಿಯ ಅಧಿಕಾರಿಯನ್ನು ಭಾರತೀಯ ವಾಯುಪಡೆ ಸೇವೆಯಿಂದ ಉಚ್ಛಾಟಿಸಿದೆ. ಫೆಬ್ರವರಿ 27ರಂದು ಭಾರತದ ಮತ್ತು ಪಾಕಿಸ್ತಾನದ ಯುದ್ಧವಿಮಾನಗಳು ಜಮ್ಮು ಮತ್ತು ಕಾಶ್ಮೀರದ ನೌಶೇರ ಸೆಕ್ಟರ್‌ನಲ್ಲಿ ಯುದ್ಧನಿರತವಾಗಿದ್ದ ಸಂದರ್ಭದಲ್ಲಿ ಐಎಎಫ್‌ಗೆ ಸೇರಿದ ರಶ್ಯಾ ನಿರ್ಮಿತ ಎಂಐ-17 ಹೆಲಿಕಾಪ್ಟರ್ ಪತನಗೊಂಡು ಅದರಲ್ಲಿದ್ದ ಎಲ್ಲ ಆರು ಮಂದಿ ಸಾವನ್ನಪ್ಪಿದ್ದರು. ಭಾರತೀಯ ವಾಯುಪಡೆ ಹಾರಿಸಿದ ನೆಲದಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ಎಂಐ-17 ಹೆಲಿಕಾಪ್ಟರನ್ನು ಎದುರಾಳಿ ರಾಷ್ಟ್ರದ ವಿಮಾನ ಎಂದು ತಪ್ಪಾಗಿ ಭಾವಿಸಿ ಅದನ್ನು ಧ್ವಂಸಗೊಳಿಸಿತ್ತು ಎನ್ನುವುದು ತನಿಖೆಯಿಂದ ಬಯಲಾಗಿತ್ತು. ಈ ಕುರಿತು ಅಂತಿಮ ವರದಿ ಇನ್ನಷ್ಟೇ ಬರಬೇಕಿದೆ.

ಸದ್ಯ ಪ್ರಕರಣದ ನ್ಯಾಯಾಲಯ ವಿಚಾರಣೆ ಮುಂದುವರಿದಿದ್ದರೂ ಐಎಎಫ್ ತಪ್ಪಿತಸ್ಥ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲು ನಿರ್ಧರಿಸಿದೆ. ಇದೀಗ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿರುವುದರಿಂದ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಬೇಕೇ, ಬೇಡವೇ ಎಂಬ ಬಗ್ಗೆ ಭಾರತೀಯ ವಾಯುಪಡೆ ಚಿಂತನೆ ನಡೆಸುತ್ತಿದೆ. ಕರ್ತವ್ಯಲೋಪ ಎಸಗಿರುವವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಅಧಿಕಾರಿಯ ವಿರುದ್ಧ ಉದ್ದೇಶ ಹೊಂದಿರದ ಹತ್ಯೆ ಪ್ರಕರಣ ದಾಖಲಿಸಲು ಐಎಎಫ್ ಯೋಚಿಸುತ್ತಿದೆ.ಆ ಮೂಲಕ ಇಂತಹ ಘಟನೆಗಳು ಭವಿಷ್ಯದಲ್ಲಿ ನಡೆಯದಂತೆ ತಡೆಯಲು ಭಾರತೀಯ ವಾಯುಪಡೆ ಮುಂದಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News