ಕಾಂಗ್ರೆಸ್, ನ್ಯಾಷನಲ್ ಹೆರಾಲ್ಡ್ ವಿರುದ್ಧದ ಮಾನನಷ್ಟ ಮೊಕದ್ದಮೆ ಹಿಂಪಡೆಯಲು ಅನಿಲ್ ಅಂಬಾನಿ ನಿರ್ಧಾರ

Update: 2019-05-21 16:11 GMT

ಹೊಸದಿಲ್ಲಿ, ಮೇ 21: ಕಾಂಗ್ರೆಸ್ ಮುಖಂಡರು ಹಾಗೂ ನ್ಯಾಷನಲ್ ಹೆರಾಲ್ಡ್ ದಿನಪತ್ರಿಕೆಯ ವಿರುದ್ಧ ಅಹ್ಮದಾಬಾದ್ ನ್ಯಾಯಾಲಯದಲ್ಲಿ ದಾಖಲಿಸಲಾಗಿದ್ದ 5000 ಕೋಟಿ ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆಯಲು ಅನಿಲ್ ಅಂಬಾನಿ ಮಾಲಕತ್ವದ ರಿಲಯನ್ಸ್ ಗ್ರೂಪ್ ನಿರ್ಧರಿಸಿದೆ ಎಂದು ವರದಿಯಾಗಿದೆ. ರಫೇಲ್ ಯುದ್ಧವಿಮಾನ ಒಪ್ಪಂದದ ಕುರಿತು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಪ್ರಧಾನಿ ಮೋದಿ ರಫೇಲ್ ಒಪ್ಪಂದದ ಘೋಷಣೆ ಮಾಡುವ 10 ದಿನದ ಮೊದಲು ಅನಿಲ್ ಅಂಬಾನಿ ರಿಲಯನ್ಸ್ ಡಿಫೆನ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದರು ಎಂದು ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಪತ್ರಿಕೆಯ ಸಂಪಾದಕ ಝಾಫರ್ ಆಘ, ಲೇಖನ ಬರೆದ ವಿಶ್ವದೀಪಕ್ ಎಂಬವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು.

ಅಲ್ಲದೆ ಕಾಂಗ್ರೆಸ್ ಮುಖಂಡರಾದ ಸುನಿಲ್ ಜಾಖಡ್, ರಣದೀಪ್ ಸುರ್ಜೆವಾಲಾ, ಉಮ್ಮನ್ ಚಾಂಡಿ, ಅಶೋಕ್ ಚವಾಣ್, ಎಎಂ ಸಿಂಘ್ವಿ, ಸಂಜಯ್ ನಿರುಪಮ್ ಮತ್ತು ಶಕ್ತಿಸಿನ್ಹ ಗೋಹಿಲ್ ಹಾಗೂ ಕೆಲವು ಪತ್ರಕರ್ತರ ವಿರುದ್ಧ ರಿಲಯನ್ಸ್ ಗ್ರೂಪ್‌ನ ಸಹಸಂಸ್ಥೆ ರಿಲಯನ್ಸ್ ಡಿಫೆನ್ಸ್, ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ರಿಲಯನ್ಸ್ ಏರೋಸ್ಟ್ರಕ್ಚರ್ ಸಂಸ್ಥೆಗಳು ಮಾನನಷ್ಟ ಮೊಕದ್ದಮೆ ಹೂಡಿದ್ದವು. ಇದೀಗ ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆಯುವುದಾಗಿ ರಿಲಯನ್ಸ್‌ನ ವಕೀಲರು ತಿಳಿಸಿದ್ದಾರೆ. ರಜೆಯ ಬಳಿಕ ನ್ಯಾಯಾಲಯದ ಕಲಾಪ ಆರಂಭವಾದೊಡನೆ ಮೊಕದ್ದಮೆ ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ ದೊರಕಲಿದೆ ಎಂದು ನ್ಯಾಷನಲ್ ಹೆರಾಲ್ಡ್ ಪರ ವಕೀಲ ಪಿಎಸ್ ಚಂಪಾನೆರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News