ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತ ಎಣಿಕೆಗೆ ಬಿಗಿ ಭದ್ರತೆ

Update: 2019-05-22 12:56 GMT

ಬೆಂಗಳೂರು, ಮೇ 22: ನಗರದಲ್ಲಿ ನಾಳೆ(ಮೇ 23) ನಡೆಯಲಿರುವ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್‌ರೊಂದಿಗೆ ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬೆಂಗಳೂರು ಕೇಂದ್ರ, ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬೆಂಗಳೂರು ಉತ್ತರ, ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಏಜೆಂಟರು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತರಬೇಕು. ಯಾರಿಗೂ ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಬಳಕೆಗೆ ಅವಕಾಶವಿರುವುದಿಲ್ಲ ಹಾಗೂ ಯಾವುದೇ ತರದ ಬ್ಯಾಗ್‌ಗಳನ್ನು ತರುವಂತಿಲ್ಲ ಎಂದು ಅವರು ಸೂಚಿಸಿದರು. ಮತ ಎಣಿಕೆ ಕೇಂದ್ರಗಳ ಸುತ್ತಮುತ್ತಲೂ 100 ಮೀಟರ್ ನಷ್ಟು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಎಣಿಕೆ ಕೇಂದ್ರದ ಬಳಿ ಅಗ್ನಿಶಾಮಕ ದಳ, ಎರಡು ಆ್ಯಂಬುಲೆನ್ಸ್, ಎರಡು ಜನರೇಟರ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಕಟ್ಟೆಚ್ಚರ ವಹಿಸಲಾಗಿದೆ ಎಂದು ಅವರು ತಿಳಿಸಿದರು.

ಮತ ಎಣಿಕೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಯು ನಾಳೆ(ಮೇ 23) ಬೆಳಗ್ಗೆ 5 ಗಂಟೆಗೆ ಸ್ಥಳಕ್ಕೆ ಆಗಮಿಸಿ ವರದಿ ಮಾಡಿಕೊಳ್ಳಬೇಕು. ಎಂಟು ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ಆರಂಭವಾಗಲಿದೆ. ಬಳಿಕ ಇವಿಎಂಗಳ ಎಣಿಕೆ ಕಾರ್ಯ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಇವಿಎಂ ಎಣಿಕೆ ಮುಗಿಯಲಿದೆ. ಅನಂತರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ವಿವಿ ಪ್ಯಾಟ್‌ಗಳ ಎಣಿಕೆ ನಡೆಯಲಿದೆ. ಇವಿಎಂ ಹಾಗೂ ವಿವಿ ಪ್ಯಾಟ್‌ಗಳ ತಾಳೆ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಪೊಲೀಸ್ ಬಂದೋಬಸ್ತ್: ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ವಹಿಸಲಾಗಿದೆ. ಬಂದೋಬಸ್ತ್‌ಗಾಗಿ 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 2 ಪ್ಯಾರಾ ಮಿಲಿಟರಿ ಪಡೆ, 23 ಕೆಎಸ್‌ಆರ್‌ಪಿ, 7 ಡಿಸಿಪಿ, 22 ಎಸಿಪಿ, 77 ಇನ್ಸ್‌ಪೆಕ್ಟರ್, 180 ಎಸ್‌ಐಗಳನ್ನು ನಿಯೋಜನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ವಿವರಿಸಿದರು.

ನಾಳೆ ಬೆಳಗ್ಗೆ 6 ರಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೂ ಮತ ಎಣಿಕೆ ಕೇಂದ್ರಗಳ ಸುತ್ತಮುತ್ತಲೂ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News