ಬಿಜೆಪಿ ರಾಜ್ಯದ ಜನತೆಯ ಕ್ಷಮೆ ಕೋರಬೇಕು: ಜೆಡಿಎಸ್ ವಕ್ತಾರ ರಮೇಶ್‌ ಬಾಬು

Update: 2019-05-22 16:29 GMT

ಬೆಂಗಳೂರು, ಮೇ 22: ರಾಜ್ಯದಲ್ಲಿ ಬಿಜೆಪಿ ಕ್ರಿಯಾತ್ಮಕ ವಿಪಕ್ಷವಾಗಿ ಕೆಲಸ ಮಾಡದೆ ಒಂದು ವರ್ಷದಿಂದ ವಾಮ ಮಾರ್ಗದಿಂದ ಅಧಿಕಾರಕ್ಕಾಗಿ ವ್ಯರ್ಥ ಪ್ರಯತ್ನ ನಡೆಸಿದ್ದು, ಜನತೆಗೆ ಉತ್ತರ ನೀಡಬೇಕಾಗುತ್ತದೆ. ಅಲ್ಲದೆ, ತನ್ನ ತಪ್ಪಿಗಾಗಿ ರಾಜ್ಯದ ಜನತೆ ಕ್ಷಮೆ ಕೋರಬೇಕೆಂದು ಜೆಡಿಎಸ್ ವಕ್ತಾರ ರಮೇಶ್‌ ಬಾಬು ಆಗ್ರಹಿಸಿದ್ದಾರೆ.

ರಾಜ್ಯದ ಅಧಿಕೃತ ವಿಪಕ್ಷವಾದ ಬಿಜೆಪಿ, ಒಂದು ಸಕ್ರಿಯ ವಿರೋಧ ಪಕ್ಷದ ಕೆಲಸ ಮಾಡುವಲ್ಲಿ ವಿಫಲವಾಗಿದ್ದು ವಾಮ ಮಾರ್ಗದಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಬೀಳಿಸುವ ಕೆಲಸದಲ್ಲೇ ತನ್ನ ಸಮಯವನ್ನು ಕಳೆದಿದೆ ಎಂದು ರಮೇಶ್‌ ಬಾಬು ವಾಗ್ದಾಳಿ ನಡೆಸಿದ್ದಾರೆ.

ಅಭಿನಂದನೆ: ಮೈತ್ರಿ ಸರಕಾರ ಮುಖ್ಯಮಂತ್ರಿ ಕುಮಾರಸ್ವಾಮಿ ನಾಯಕತ್ವದಲ್ಲಿ ಸ್ಥಾಪನೆಯಾಗಿ ನಾಳೆಗೆ(ಮೇ 23) ಒಂದು ವರ್ಷವಾಗಲಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಷಯಾಧಾರಿತವಾಗಿ ಕಾಂಗ್ರೆಸ್-ಜೆಡಿಸ್ ಮೈತ್ರಿ ಸರಕಾರವನ್ನು ರಚಿಸುವ ಮೂಲಕ ಜನಪರ ಆಡಳಿತ ನೀಡಿದ್ದು, ಆ ಕಾರಣಕ್ಕಾಗಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರವನ್ನು ರಮೇಶ್ ಅಭಿನಂದಿಸಿದ್ದಾರೆ.

ಮೊದಲ ಬಾರಿಗೆ ರಾಜ್ಯದ ರೈತರ 48 ಸಾವಿರ ಕೋಟಿ ರೂ.ಸಾಲಮನ್ನಾ, ವೃದ್ಧಾಪ್ಯ ಮಾಶಾಸನ ಹೆಚ್ಚಳ, ಗರ್ಭಿಣಿಯರಿಗೆ 6 ತಿಂಗಳ ಮಾಶಾಸನ, ಬೀದಿ ವ್ಯಾಪಾರಿಗಳಿಗೆ ಬಡವರ ಬಂದು ಯೋಜನೆ, ಯುವಕರಿಗೆ ಉದ್ಯೋಗ ಖಾತರಿ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ರಕ್ಷಣೆಗೆ ಆದ್ಯತೆ, ಬೆಂಗಳೂರು ಅಭಿವೃದ್ದಿಗೆ ಬದ್ಧತೆ ವ್ಯಕ್ತಪಡಿಸಿದೆ.

ಒಂದು ವರ್ಷದಲ್ಲಿ ಪ್ರಕೃತಿ ವಿಕೋಪ, ಬರದ ಛಾಯೆ, ಕುಡಿಯುವ ನೀರಿನ ಸಮಸ್ಯೆ, ಸಂಪನ್ಮೂಲದ ಕೊರತೆ ಮುಂತಾದ ಅಡೆ-ತಡೆಗಳಿದ್ದರೂ ಮೈತ್ರಿ ಸರಕಾರ ಉತ್ತಮ ಆಡಳಿತ ನೀಡಿದ್ದು, ಎರಡೂ ಪಕ್ಷದ ಮುಖಂಡರನ್ನು ಕಾರ್ಯಕರ್ತರನ್ನೂ ಅಭಿನಂದಿಸುತ್ತೇನೆ. ಈ ಸರಕಾರ ಉಳಿದ ನಾಲ್ಕೂ ವರ್ಷಗಳಲ್ಲಿ ಇನ್ನೂ ಹೆಚ್ಚು ಜನಪರವಾಗಿ ಕೆಲಸ ಮಾಡಲೆಂದು ರಮೇಶ್‌ ಬಾಬು ಪ್ರಕಟನೆಯಲ್ಲಿ ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News