ಕಬಾಬ್ ವ್ಯಾಪಾರಿ ಕೊಲೆ ಪ್ರಕರಣ: ನಾಲ್ವರ ಬಂಧನ

Update: 2019-05-22 16:43 GMT

ಬೆಂಗಳೂರು, ಮೇ 22: ಕಬಾಬ್ ಅಂಗಡಿ ಮಾಲಕ ಹತ್ಯೆ ಪ್ರಕರಣ ಸಂಬಂಧ ಇಲ್ಲಿನ ಉತ್ತರ ವಿಭಾಗದ ರಾಜಗೋಪಾಲನಗರ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಸನ ಜಿಲ್ಲೆಯ ಜಾವಗಲ್ ನಿವಾಸಿ ರವೀಶ್, ಹೊಳೆನರಸೀಪುರ ನಿವಾಸಿ ಜಿತೇಂದ್ರ, ಸುಮಂತರಾಜ್ ಹಾಗೂ ಪ್ರದೀಪ್ ಕುಮಾರ್ ಎಂಬುವರು ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ಕಿಶೋರ್ ಎಂಬಾತ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಹಿನ್ನಲೆ: ಮಂಡ್ಯ ಮೂಲದ ಉಮೇಶ್ ಎಂಬಾತ ಇಲ್ಲಿನ ಶ್ರೀಗಂಧ ನಗರದ ಹೆಗ್ಗನಹಳ್ಳಿ 2ನೇ ಮುಖ್ಯರಸ್ತೆಯಲ್ಲಿ ಕಬಾಬ್ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ರೂಪಾ ಎಂಬಾಕೆಯನ್ನು ಉಮೇಶ್ ವಿವಾಹವಾಗಿದ್ದರು ಎನ್ನಲಾಗಿದೆ.

ಆರೋಪಿ ಕಿಶೋರ್ ಎಂಬಾತ, ಉಮೇಶ್ ಪತ್ನಿ ರೂಪಾಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಈ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿತ್ತು. ಇತ್ತೀಚಿಗೆ ಕಿಶೋರ್, ರೂಪಾ ಜೊತೆಗಿದ್ದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಇದರ ವಿರುದ್ಧ ದಂಪತಿ ಇಲ್ಲಿನ ರಾಜಗೋಪಾಲ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.

ದೂರಿನ್ವಯ ಪೊಲೀಸರು, ಕಿಶೋರ್‌ನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ತದನಂತರ ಜಾಮೀನಿನ ಮೇಲೆ ಹೊರ ಬಂದ ಕಿಶೋರ್, ಹಳೇ ದ್ವೇಷವಿಟ್ಟುಕೊಂಡು ಮೇ 12ರ ರಾತ್ರಿ ಉಮೇಶ್ ಮೇಲೆ ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡ ರಾಜಗೋಪಾಲ ನಗರ ಠಾಣಾ ಪೊಲೀಸರು, ನಾಲ್ವರನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News