ಆಂಧ್ರದಲ್ಲಿ ಜಗನ್ ಜಯಭೇರಿ: ಮೇ 30ರಂದು ಮುಖ್ಯಮಂತ್ರಿಯಾಗಿ ಪ್ರಮಾಣ

Update: 2019-05-23 16:31 GMT

ಹೊಸದಿಲ್ಲಿ, ಮೇ 23: ಲೋಕಸಭಾ ಚುನಾವಣೆಯ ಜೊತೆಗೆ ನಾಲ್ಕು ರಾಜ್ಯಗಳ ವಿಧಾನ ಸಭಾ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಜಯಭೇರಿ ಬಾರಿಸಿದೆ.

ಅರುಣಾಚಲ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳು ಬಿಜೆಪಿ ಪಾಲಾಗಿವೆ. ಒಡಿಶಾದಲ್ಲಿ ಬಿಜೆಡಿ ಹೆಚ್ಚಿನ ಸ್ಥಾನಗಳನ್ನು ಗಳಿಸುವಲ್ಲಿ ಸಫಲವಾಗಿದೆ. 175 ಸ್ಥಾನಗಳಿರುವ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಬಹುಮತಕ್ಕೆ 88 ಸ್ಥಾನಗಳ ಅಗತ್ಯವಿದೆ. ಆದರೆ, ವೈ.ಎಸ್. ಜಗನ್ಮೋಹನ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ 145 ಸ್ಥಾನಗಳನ್ನು ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ 30 ಸ್ಥಾನಗಳನ್ನು ಹಾಗೂ ಜನಸೇನಾ ಪಕ್ಷ 1 ಸ್ಥಾನ ಪಡೆದುಕೊಂಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಒಂದು ಸ್ಥಾನ ಕೂಡ ಲಭ್ಯವಾಗಿಲ್ಲ.

ಆಂಧ್ರಪ್ರದೇಶದಲ್ಲಿ ಪಕ್ಷ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಪಕ್ಷದ ನಾಯಕರನ್ನಾಗಿ ವೈ.ಎಸ್. ಜಗನ್ಮೋಹನ ರೆಡ್ಡಿ ಅವರನ್ನು ಆಯ್ಕೆ ಮಾಡಲು ಮೇ 25ರಂದು ಪಕ್ಷದ ಕಾರ್ಯಕಾರಿಣಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ವೈಸ್‌ಎರ್‌ಸಿ ಮೂಲಗಳು ತಿಳಿಸಿವೆ. ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರು ಮೇ 30ರಂದು ತಿರುಪತಿಯಲ್ಲಿ ಮುಖ್ಯಮತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 60 ಸ್ಥಾನಗಳ ಅರುಣಾಚಲ ವಿಧಾನ ಸಭೆಯಲ್ಲಿ ಬಿಜೆಪಿ 30 ಸ್ಥಾನಗಳನ್ನು ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ತೋರಿದೆ. ಬಹುಮತಕ್ಕೆ 31 ಸ್ಥಾನಗಳ ಅಗತ್ಯ ಇದೆ. ಜೆಡಿಯು 5 ಹಾಗೂ ಕಾಂಗ್ರೆಸ್ 3 ಸ್ಥಾನಗಳನ್ನು ಗಳಿಸಿದೆ. ಜೆಡಿಎಸ್ ಹಾಗೂ ಎನ್‌ಪಿಪಿ 1 ಸ್ಥಾನಗಳನ್ನು ಕೂಡ ಪಡೆದುಕೊಂಡಿಲ್ಲ. ಚೌಖಮ್ ಕ್ಷೇತ್ರದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ತನ್ನ ಹತ್ತಿರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಖುನಾಂಗ್ ಕ್ರಿ ಅವರನ್ನು ಸೋಲಿಸುವ ಮೂಲಕ ಚೌನಾ ಮೈನ್ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ.

 ಒಡಿಶಾದ ವಿಧಾನ ಸಭೆಯಲ್ಲಿ ಒಟ್ಟು 147 ಸ್ಥಾನಗಳಿದ್ದು, ಬಿಜೆಡಿ ಅತ್ಯಧಿಕ 108 ಸ್ಥಾನಗಳನ್ನು ಪಡೆದುಕೊಂಡಿದೆ. ಬಹುಮತ್ಕೆ 74 ಸ್ಥಾನಗಳ ಅಗತ್ಯ ಇದೆ. ಬಿಜೆಪಿ 25, ಕಾಂಗ್ರೆಸ್ 12, ಸಿಪಿಐ (ಎಂ) 1 ಸ್ಥಾನಗಳನ್ನು ಪಡೆದುಕೊಂಡಿದೆ. ಬಿಎಸ್ಪಿಗೆ ಒಂದು ಸ್ಥಾನ ಕೂಡ ದೊರೆತಿಲ್ಲ. ಅತ್ಯಧಿಕ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಆಡಳಿತಾರೂಢ ಬಿಜೆಡಿ ನಿರಂತರ 5ನೇ ಅವಧಿಯಲ್ಲಿ ಕೂಡ ಸರಕಾರ ರಚಿಸಲಿದೆ.

ಸಿಕ್ಕಿಂ ವಿಧಾನ ಸಭೆಯಲ್ಲಿ ಒಟ್ಟು 32 ಸ್ಥಾನಗಳಿದ್ದು, ಬಹುಮತಕ್ಕೆ 17 ಸ್ಥಾನಗಳ ಅಗತ್ಯ ಇದೆ. ಎಸ್‌ಡಿಎಫ್ ಅತ್ಯಧಿಕ 13 ಸ್ಥಾನಗಳನ್ನು ಗಳಿಸಿದೆ. ಎಸ್‌ಕೆಎಂ 12 ಸ್ಥಾನಗಳನ್ನು ಗಳಿಸಿದೆ. ಆದರೆ, ಬಿಜೆಪಿ, ಕಾಂಗ್ರೆಸ್ ಹಾಗೂ ಎಚ್‌ಎಸ್‌ಪಿ 1 ಸ್ಥಾನವನ್ನು ಪಡೆಯಲು ಕೂಡ ಸಫಲವಾಗಿಲ್ಲ. ಇಲ್ಲಿ ಚಾಮ್ಲಿಂಗ್ ನೇತೃತ್ವದ ಎಸ್‌ಡಿಎಫ್ ಸರಕಾರ ರಚಿಸುವ ಸಾಧ್ಯತೆ ದಟ್ಟವಾಗಿ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News