ಸಿಎಂ ಕುಮಾರಸ್ವಾಮಿ ಮೇಲೆ ಎಲ್ಲ ಸಚಿವರಿಗೆ ವಿಶ್ವಾಸವಿದೆ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

Update: 2019-05-24 12:17 GMT

ಬೆಂಗಳೂರು, ಮೇ 24: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನಾಯಕತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಮುಂದಿನ ನಾಲ್ಕು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಅನೌಪಚಾರಿಕ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಜಿ. ಪರಮೇಶ್ವರ್, ಸಭೆಯಲ್ಲಿ ಲೋಕಸಭಾ ಚುನಾವಣೆಯ ಒಟ್ಟಾರೆ ಫಲಿತಾಂಶ, ರಾಜ್ಯದ ಫಲಿತಾಂಶಗಳ ಕುರಿತು ಚರ್ಚೆ ಹಾಗೂ ವಿಶ್ಲೇಷಣೆ ನಡೆಸಲಾಯಿತು ಎಂದರು.

ಲೋಕಸಭಾ ಚುನಾವಣೆ ಫಲಿತಾಂಶ ಕೇಂದ್ರ ಸರಕಾರಕ್ಕೆ ನೀಡಿದ ಜನಾದೇಶವೇ ಹೊರತು ರಾಜ್ಯ ಸರಕಾರಕ್ಕೆ ಅಲ್ಲ ಎಂದು ಸಚಿವ ಸಂಪುಟವು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದೆ. ಚುನಾವಣಾ ಫಲಿತಾಂಶದ ನಂತರ ಸರಕಾರದ ಕುರಿತು ಹೇಳಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಇಂದಿನ ಸಭೆಯಲ್ಲಿ ಎಲ್ಲ ಸಚಿವರು ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಎಲ್ಲ ಶಾಸಕರೂ ನಮ್ಮ ಜೊತೆಗಿದ್ದಾರೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೇವೆ. ಇದಕ್ಕೆ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹಮತ ವ್ಯಕ್ತಪಡಿಸಿದ್ದಾರೆ. ಸರಕಾರ ಬೀಳಿಸಲು ವಿಪಕ್ಷ ಬಿಜೆಪಿ ನಡೆಸುವ ಷಡ್ಯಂತ್ರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಪರಮೇಶ್ವರ್ ಇದೇ ವೇಳೆ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವು ಮುಂದಿನ ನಾಲ್ಕು ವರ್ಷಗಳ ಕಾಲ ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಉತ್ತಮ ಆಡಳಿತ ನೀಡಲಿದೆ. ರಾಜ್ಯದ ಜನತೆಗೆ ಯಾವುದೇ ಕಾರಣಕ್ಕೂ ನಿರಾಶೆ ಮಾಡುವುದಿಲ್ಲ ಎಂದು ಪರಮೇಶ್ವರ್ ಇದೇ ವೇಳೆ ನುಡಿದರು.

ರಾಜ್ಯದಲ್ಲಿ ಮೈತ್ರಿ ಸರಕಾರ ಅತ್ಯಂತ ಸುಭದ್ರವಾಗಿದ್ದು, ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ನಾವು ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾಲ್ಕು ವರ್ಷಗಳ ಕಾಲ ಎರಡೂ ಪಕ್ಷಗಳ ಒಗ್ಗಟ್ಟಾಗಿ ಶ್ರಮಿಸಲಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.

ಅನೌಪಚಾರಿಕ ಸಚಿವ ಸಂಪುಟ ಸಭೆಯಲ್ಲಿ ಸಂಪುಟದ ಸಚಿವರಾದ ಆರ್.ವಿ. ದೇಶಪಾಂಡೆ, ಎಚ್.ಡಿ.ರೇವಣ್ಣ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಜಿ.ಟಿ. ದೇವೇಗೌಡ, ಝಮೀರ್ ಅಹ್ಮದ್ ಖಾನ್, ಬಂಡೆಪ್ಪ ಕಾಶೆಂಪೂರ್, ಪುಟ್ಟರಾಜು, ಸಾ.ರಾ.ಮಹೇಶ್, ಕೃಷ್ಣಭೈರೇಗೌಡ, ಸತೀಶ್ ಜಾರಕಿಹೊಳಿ, ಡಿ.ಸಿ.ತಮ್ಮಣ್ಣ ಸೇರಿದಂತೆ ಬಹುತೇಕ ಸಚಿವರು ಪಾಲ್ಗೊಂಡಿದ್ದರು.

‘ಲೋಕಸಭೆ ಚುನಾವಣಾ ಫಲಿತಾಂಶ ಮೈತ್ರಿ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸರಕಾರ ಇನ್ನೂ ನಾಲ್ಕು ವರ್ಷ ಸುಭದ್ರವಾಗಿ ಮುಂದುವರಿಯಲಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮೈತ್ರಿ ಸರಕಾರ ಬೀಳಿಸಬಹುದೆಂದು ಬಿಜೆಪಿ ಭಾವಿಸಿದ್ದರೆ ಅದು ಸಾಧ್ಯವಿಲ್ಲ’

-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News