ಸುಮಲತಾರನ್ನು ಅಹ್ವಾನಿಸಲಿದೆಯೇ ಬಿಜೆಪಿ ?: ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು ಹೀಗೆ..

Update: 2019-05-24 17:27 GMT

ಬೆಂಗಳೂರು, ಮೇ 24: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಕೈಗೊಳ್ಳುವ ನಿರ್ಧಾರದ ಮೇಲೆ ರಾಜ್ಯ ರಾಜಕಾರಣ ನಿಂತಿದೆ. ಹೀಗಾಗಿ ಈಗಲೇ ನಾನು ಏನನ್ನು ಹೇಳುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೂತನ ಸಂಸದರೊಂದಿಗೆ ಮೇ 29ಕ್ಕೆ ಹೊಸದಿಲ್ಲಿಗೆ ತೆರಳಲಿದ್ದು, ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ಬಳಿಕ ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದ ಜನರ ತೀರ್ಮಾನದಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಖಂಡರು ನಡೆದುಕೊಳ್ಳಲಿದ್ದಾರೆಂಬ ನಂಬಿಕೆ ಇದೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯದ ಮೈತ್ರಿ ಸರಕಾರದ ಬಗ್ಗೆ ನಾನು ಈಗಲೇ ಏನನ್ನು ಹೇಳುವುದಿಲ್ಲ ಎಂದು ಬಿಎಸ್‌ವೈ ಪ್ರತಿಕ್ರಿಯೆಗೆ ನಿರಾಕರಿಸಿದರು.

ರಾಜ್ಯದಲ್ಲಿ ಬಿಜೆಪಿ ಕನಿಷ್ಠ 22ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಮೊದಲೇ ಭವಿಷ್ಯ ನುಡಿದಿದ್ದೆ. ನಾನು 40 ವರ್ಷಗಳ ಕಾಲ ರಾಜ್ಯವನ್ನು ಸುತ್ತಿದ ಅನುಭವದಿಂದಲೇ ಈ ಮಾತನ್ನು ಹೇಳಿದ್ದೆ. ಇದೀಗ ಅದು ನಿಜವಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಮಂಡ್ಯ ಕ್ಷೇತ್ರದ ಬಿಜೆಪಿ ಬೆಂಬಲಿತ ಪಕ್ಷೇತರವಾಗಿ ಆಯ್ಕೆಯಾಗಿರುವ ನೂತನ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿಗೆ ಬರುವಂತೆ ನಾವಾಗಿಯೇ ಕರೆಯುವುದಿಲ್ಲ. ಅವರಾಗಿಯೇ ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಯಡಿಯೂರಪ್ಪ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News