ಲೋಕಸಭಾ ಚುನಾವಣಾ ಫಲಿತಾಂಶದ ಹಿನ್ನೆಲೆ: ಜ್ಯೋತಿಷಿಗಳ ವಿರುದ್ಧ ಕಿಡಿ

Update: 2019-05-24 14:48 GMT

ಬೆಂಗಳೂರು, ಮೇ 24: ಲೋಕಸಭಾ ಚುನಾವಣೆಯಗಳಲ್ಲಿ ಕೆಲ ಅಭ್ಯರ್ಥಿಗಳು ಖಚಿತವಾಗಿ ಜಯ ಗಳಿಸುತ್ತಾರೆ ಎಂದೆಲ್ಲಾ ಭವಿಷ್ಯ ನುಡಿದಿದ್ದ ಜ್ಯೋತಿಷಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಕಿಡಿಕಾರುತ್ತಿದ್ದಾರೆ.

ಖ್ಯಾತ ಜ್ಯೋತಿಷಿ ಎಂದೇ ಗುರುತಿಸಿಕೊಂಡಿರುವ ರಾಜಗುರು ದ್ವಾರಕನಾಥ್ ಅವರು ಮೇ 10ರಂದು ಬೆಂಗಳೂರಿನಲ್ಲಿ ಮಾತನಾಡಿ, ತುಮಕೂರು ಲೋಕಸಭಾ ಕ್ಷೇತ್ರದಿಂದ ಎಚ್.ಡಿ.ದೇವೇಗೌಡ, ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಹಾಗೂ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಗೆಲುವು ಖಚಿತ ಎಂದು ಭವಿಷ್ಯ ನುಡಿದಿದ್ದರು. ಆದರೆ, ಗುರುವಾರ ಫಲಿತಾಂಶ ಹೊರಬಿದ್ದಿದ್ದು, ಪ್ರಜ್ವಲ್ ಮಾತ್ರ ವಿಜೇತರಾಗಿದ್ದು, ಎಚ್.ಡಿ.ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದಾರೆ.

ಅಷ್ಟೇ ಅಲ್ಲದೆ, ಕೆಲ ದೇವಾಲಯಗಳಿಗೆ ಕುಮಾರಸ್ವಾಮಿ ಭೇಟಿ ನೀಡಿದರೆ, ಒಳ್ಳೆಯದು ಆಗಲಿದೆ ಎಂದು ರಾಜಗುರು ಹೇಳಿದ್ದರು. ಇದೀಗ ಎಲ್ಲ ಭವಿಷ್ಯವೂ ಬದಲಾಗಿದ್ದು, ಹಲವು ಕಾರ್ಯಕರ್ತರು, ಮೂಢನಂಬಿಕೆ ವಿರೋಧಿ ಕಾನೂನು ಜಾರಿ, ಸುದ್ದಿ ವಾಹಿಗಳಲ್ಲಿನ ಕಪಟ ಜ್ಯೋತಿಷಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್‌ನಲ್ಲಿ ಆಗ್ರಹಿಸುತ್ತಿದ್ದಾರೆ.

ವೈರಲ್ ಆಯ್ತು ವ್ಯಂಗ್ಯ ಚಿತ್ರ

ಹಿರಿಯ ರಾಜಕೀಯ ನಾಯಕರೊಬ್ಬರು, ಜ್ಯೋತಿಷಿಯೊಬ್ಬರ ಮನೆಬಾಗಿಲು ಪ್ರವೇಶ ಮಾಡುವ ಮುನ್ನ, ಪಾದರಕ್ಷೆಯನ್ನು ಕೈಯಲ್ಲಿ ಹಿಂಬದಿ ಇಟ್ಟುಕೊಂಡಿರುವ ವ್ಯಂಗ್ಯ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಖ್ಯಮಂತ್ರಿ ಕ್ರಮ ಕೈಗೊಳ್ಳಿ

ಜ್ಯೋತಿಷಿಗಳು ಹೇಳಿದಂತೆ ನಡೆಯಲು ಸಾಧ್ಯವಿಲ್ಲ. ಇದೀಗ ಮುಖ್ಯ ಮಂತ್ರಿಗಳಿಗೂ ಅನುಭವ ಆಗಿರಬಹುದು. ಹೀಗಾಗಿ, ಸುಳ್ಳು ಹೇಳಿ, ಜನರನ್ನು ಮಾನಸಿಕವಾಗಿ ವಂಚನೆ ಮಾಡುವ ಜ್ಯೋತಿಷಿಗಳ ವಿರುದ್ಧ ಮೈತ್ರಿ ಸರಕಾರ ಕ್ರಮಕ್ಕೆ ಮುಂದಾಗುವ ಧೈರ್ಯವನ್ನು ಮಾಡಲಿ.

-ಹರ್ಷಗೌಡ, ಪಕ್ಷವೊಂದರ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News