ಸೋಲಿನ ಪರಾಮರ್ಶೆಗೆ ಕಾಂಗ್ರೆಸ್ ಮುಖಂಡರ ಉಪಾಹಾರ ಕೂಟ
ಬೆಂಗಳೂರು, ಮೇ 24: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಸೋಲಿನ ಬಗ್ಗೆ ಆತ್ಮಾವಲೋಕನ ಹಾಗೂ ಮೈತ್ರಿ ಸರಕಾರ ಉಳಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾಂಗ್ರೆಸ್ ಸಚಿವರು ಹಾಗೂ ಮುಖಂಡರು ಸಮಾಲೋಚನೆ ನಡೆಸಿದರು.
ಶುಕ್ರವಾರ ಸದಾಶಿವನಗರದಲ್ಲಿನ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಉಪಾಹಾರ ಕೂಟದಲ್ಲಿ ನೆಪದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿ ಕಾಂಗ್ರೆಸ್ ಸಚಿವರು-ಮುಖಂಡರು ಮೈತ್ರಿ ಅಭ್ಯರ್ಥಿಗಳ ಸೋಲಿನ ಬಗ್ಗೆ ಚರ್ಚಿಸಿದ್ದಾರೆಂದು ಗೊತ್ತಾಗಿದೆ.
ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಮತ್ತು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರಿಂದ ಅತೀವ ಬೇಸರಗೊಂಡಿರುವ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದಾರೆಂಬ ವದಂತಿ ಸೃಷ್ಟಿಯಾಗಿತ್ತು. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಕಾಂಗ್ರೆಸ್ ಪಕ್ಷದ ಎಲ್ಲ ಸಚಿವರು ಮತ್ತು ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ಕಾಂಗ್ರೆಸ್ ಸಚಿವರು ಹಾಗೂ ಮುಖಂಡರು ಅಭಯ ನೀಡಿದ್ದಾರೆ.
ಅಲ್ಲದೆ, ಅಸಮಾಧಾನಗೊಂಡಿರುವ ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ಇನ್ನಿತರರಿಗೆ ಸಚಿವ ಸ್ಥಾನ ನೀಡುವ ಮೂಲಕ ಬಂಡಾಯ ಶಾಸಕರ ಮನವೊಲಿಕೆ ಬಗ್ಗೆಯೂ ಚರ್ಚಿಸಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಆಪರೇಷನ್ ಕಮಲಕ್ಕೆ ಅವಕಾಶ ನೀಡದೆ, ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಂಕಲ್ಪ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಮೈತ್ರಿ ಸರಕಾರಕ್ಕೆ ಆತಂಕವಿಲ್ಲ: ಮೈತ್ರಿ ಅಭ್ಯರ್ಥಿಗಳ ಸೋಲಿನ ಹಿನ್ನೆಲೆಯಲ್ಲಿ ಸಚಿವರು, ಮುಖಂಡರೆಲ್ಲರೂ ಸೇರಿ ಚರ್ಚೆ ಮಾಡಿದ್ದೇವೆ. ಮೈತ್ರಿ ಸರಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಸರಕಾರ ಮುಂದುವರಿಯಲಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಅನೌಪಚಾರಿಕ ಸಂಪುಟ ಸಭೆಗೆ ನಾನು ಹೋಗುವುದಿಲ್ಲ. ಸರಕಾರದ ಮೇಲೆ ಚುನಾವಣೆ ಫಲಿತಾಂಶ ಯಾವುದೆ ರೀತಿಯ ಪರಿಣಾಮ ಬೀರುವುದಿಲ್ಲ. ಸರಕಾರ ನಾಲ್ಕು ವರ್ಷ ಸುಭದ್ರವಾಗಿರಲಿದೆ ಎಂದು ಅವರು ಹೇಳಿದರು.
ಲೋಕಸಭೆ ಚುನಾವಣೆ ಫಲಿತಾಂಶಕ್ಕೂ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಸೋಲಿನ ಪರಾಮರ್ಶೆ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ದಿಲ್ಲಿಯಲ್ಲಿ ನಾಳೆ(ಮೇ 25) ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ತೆರಳಲಿದ್ದೇನೆ ಎಂದರು.
‘ಮೈತ್ರಿ ಅಭ್ಯರ್ಥಿಗಳ ಸೋಲಿನ ಬಗ್ಗೆ ಚರ್ಚಿಸಲಾಗಿದೆ. ಮೈತ್ರಿ ಸರಕಾರ ಯಾಥಾ ರೀತಿ ಮುಂದುವರಿಯಲಿದೆ. ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಒಗ್ಗಟ್ಟಾಗಿಯೇ ಹೋಗುತ್ತೇವೆ. ಇವಿಎಂ ಬಗ್ಗೆ ಪಕ್ಷದ ವರಿಷ್ಠರು ರಾಷ್ಟ್ರಮಟ್ಟದಲ್ಲಿ ಚರ್ಚಿಸಲಿದ್ದಾರೆ’
-ಯು.ಟಿ.ಖಾದರ್ ನಗರಾಭಿವೃದ್ಧಿ ಸಚಿವ
‘ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಬೀಳಿಸುವ ಬಿಜೆಪಿಯ ಪ್ರಯತ್ನ ಯಾವುದೇ ಕಾರಣಕ್ಕೂ ಫಲ ನೀಡಲು ಸಾಧ್ಯವಿಲ್ಲ. ಮೈತ್ರಿ ಸರಕಾರ ಸುಭದ್ರವಾಗಿರಲಿದೆ. ವಿದ್ಯುನ್ಮಾನ ಮತ ಯಂತ್ರ(ಇವಿಎಂ) ಹ್ಯಾಕ್ ಮಾಡಿರುವ ಬಗ್ಗೆ ಪಕ್ಷ ನಿರ್ಧರಿಸಲಿದೆ’
-ಶಿವಾನಂದ್ ಪಾಟೀಲ್, ಆರೋಗ್ಯ ಸಚಿವ