ಸೋಲಿನ ಚರ್ಚೆ ನಿಲ್ಲಿಸಿ ಪಕ್ಷವನ್ನು ಗಟ್ಟಿಗೊಳಿಸುವ ಕಡೆಗೆ ಚಿಂತಿಸೋಣ: ಎಚ್.ವಿಶ್ವನಾಥ್
ಬೆಂಗಳೂರು, ಮೇ 24: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋತಿರುವುದನ್ನು ಒಪ್ಪಿಕೊಳ್ಳುತ್ತಲೆ, ಅದರ ಬಗ್ಗೆ ಹೆಚ್ಚು ಚರ್ಚಿಸುವುದು ಬೇಡ. ಮುಂದಿನ ದಿನಗಳಲ್ಲಿ ಮತ್ತಷ್ಟು ಒಮ್ಮತದಿಂದ, ವಿಶ್ವಾಸದಿಂದ ಪಕ್ಷವನ್ನು ಗಟ್ಟಿಗೊಳಿಸುವುದರ ಬಗ್ಗೆ ಜೆಡಿಎಸ್ ನಾಯಕರು, ಕಾರ್ಯಕರ್ತರು ಚಿಂತಿಸಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು.
ಶುಕ್ರವಾರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸೋತಿರುವುದರ ಕುರಿತು ಪರಾಮರ್ಶೆ ನಡೆಸಲು ನಗರದ ಜೆಪಿ ಭವನದಲ್ಲಿ ಆಯೋಜಿಸಿದ್ದ ಜೆಡಿಎಸ್ ಶಾಸಕಾಂಗ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಭ್ಯರ್ಥಿಗಳು ಸೋಲಲು ಕಾರಣಗಳೇನು ಎಂಬುದರ ಬಗ್ಗೆ ನಾಯಕರಿಂದ ಮಾಹಿತಿ ಪಡೆಯಲಾಯಿತು. ಈ ಸಮಸ್ಯೆಗಳು ಪುನಃ ಮರುಕಳಿಸದಂತೆ ಎಚ್ಚರಿಕೆಯಿಂದ ಪಕ್ಷವನ್ನು ಗಟ್ಟಿಗೊಳಿಸುವುದರ ಕಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚಿಂತನೆ ನಡೆಸಲಾಯಿತು ಎಂದು ಅವರು ಹೇಳಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ 5 ವಿಧಾನಸಭಾ ಕ್ಷೇತ್ರವು ಜೆಡಿಎಸ್ ಶಾಸಕರೇ ಅಧಿಕಾರದಲ್ಲಿದ್ದೂ ನಿಖಿಲ್ ಕುಮಾರಸ್ವಾಮಿ ಗೆಲ್ಲಲು ಯಾಕೆ ಸಾಧ್ಯವಾಗಿಲ್ಲ. ಜೆಡಿಎಸ್‌ನ ಭದ್ರಕೋಟೆಯಲ್ಲಿಯೆ ಸೋಲಾಗಿರುವುದರ ಕುರಿತು ಜೆಡಿಎಸ್ ನಾಯಕರು ಗಂಭೀರವಾಗಿ ಚಿಂತಿಸಬೇಕು. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುವುದುರ ಕುರಿತು ಚರ್ಚೆ ನಡೆಸಲಾಯಿತು ಎಂದು ಅವರು ಹೇಳಿದರು.
ಸ್ಥಳೀಯ ಮಟ್ಟದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ನಡುವೆ ಒಮ್ಮತ ಇಲ್ಲದಿರುವುದು ಸೋಲಿಗೆ ಕಾರಣವಾಗಿದೆ ಎಂಬ ಆರೋಪಗಳು ವ್ಯಕ್ತವಾಯಿತು. ಇವೆಲ್ಲಾ ಆರೋಪಗಳು ಇಂದಿಗೂ ಮುಕ್ತಾಯವಾಗಿದೆ. ನಾಳೆಯಿಂದ ಹೊಸದಾಗಿ ಜೆಡಿಎಸ್‌ನ ಕಟ್ಟುವುದು ಹಾಗೂ ಮೈತ್ರಿ ಸರಕಾರಕ್ಕೆ ಒಗ್ಗಟ್ಟಿನಿಂದ ಶಕ್ತಿ ತುಂಬುವುದಷ್ಟೆ ನಮ್ಮ ಕೆಲಸವಾಗಬೇಕೆಂದು ಅವರು ಹೇಳಿದರು.
ಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಜೆಡಿಎಸ್‌ನ ಸಚಿವರು, ಶಾಸಕರು ಭಾಗವಹಿಸಿದ್ದರು.
ಜೆಡಿಎಸ್ ಸೋಲಿನ ನೈತಿಕ ಹೊಣೆಹೊತ್ತು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ನಿರ್ಧರಿಸಿದ್ದೆ. ಆದರೆ, ಇಂತಹ ಸಂದರ್ಭದಲ್ಲಿ ರಾಜೀನಾಮೆ ಕೊಡಬೇಡಿ. ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಾಯಕರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿ ಎಂದು ಎಚ್.ಡಿ.ದೇವೇಗೌಡರು ಸಲಹೆ ನೀಡಿದರು. ಹೀಗಾಗಿ ಅವರ ಮಾತಿನಂತೆ ನಡೆದುಕೊಳ್ಳಲು ನಿರ್ಧರಿಸಿದ್ದೇನೆ.
-ಎಚ್.ವಿಶ್ವನಾಥ್, ರಾಜ್ಯಾಧ್ಯಕ್ಷ, ಜೆಡಿಎಸ್