ಮೇರಿಕೋಮ್, ಸರಿತಾದೇವಿಗೆ ಸ್ವರ್ಣ

Update: 2019-05-25 06:01 GMT

ಗುವಾಹಟಿ, ಮೇ 24: ಆರು ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿಕೋಮ್ ಹಾಗೂ ಎಲ್. ಸರಿತಾದೇವಿ 2ನೇ ಆವೃತ್ತಿಯ ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಕೊನೆಯ ದಿನವಾದ ಶುಕ್ರವಾರ ಏಶ್ಯನ್ ಗೇಮ್ಸ್ ಚಾಂಪಿಯನ್ ಅಮಿತ್ ಪಾಂಘಾಲ್ 52 ಕೆಜಿ ವಿಭಾಗದಲ್ಲಿ ದೈತ್ಯ ಸಂಹಾರಿ ಖ್ಯಾತಿಯ ಸಚಿನ್ ಸಿವಾಚ್ ಸವಾಲನ್ನು ಮೆಟ್ಟಿ ನಿಂತು 4-1 ಅಂತರದಿಂದ ಜಯ ಸಾಧಿಸಿ ಚಿನ್ನ ಜಯಿಸಿದರು. ಒಟ್ಟಾರೆ ಭಾರತ ಪುರುಷರ 4 ವಿಭಾಗಗಳಾದ 52ಕೆಜಿ, 81ಕೆಜಿ, 91ಕೆಜಿ ಹಾಗೂ +91ಕೆಜಿ ವಿಭಾಗಗಳಲ್ಲಿ ಪದಕ ಜಯಿಸಿದೆ. ಮಹಿಳೆಯರು 51ಕೆಜಿ, 57 ಕೆಜಿ ಹಾಗೂ 75 ಕೆಜಿ ವಿಭಾಗಗಳಲ್ಲಿ ಚಿನ್ನ ಜಯಿಸಿದರು. ಭಾರತ ಟೂರ್ನಿಯಲ್ಲಿ 18ರಲ್ಲಿ 12 ಚಿನ್ನದ ಪದಕಗಳನ್ನು ಬಾಚಿಕೊಂಡಿತು. ಕಳೆದ ವರ್ಷ ಮೊದಲ ಆವೃತ್ತಿಯ ಟೂರ್ನಿಯಲ್ಲಿ ಭಾರತ 6 ಚಿನ್ನದ ಪದಕ ಜಯಿಸಿತ್ತು. ಈ ಬಾರಿ ಎರಡು ಪಟ್ಟು ಚಿನ್ನ ಜಯಿಸಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ವಿಜೇತೆ ಸರಿತಾದೇವಿ ಅವರು ಸಿಮ್ರಾನ್‌ಜೀತ್ ಕೌರ್ ಅವರನ್ನು 3-2 ಅಂತರದಿಂದ ಮಣಿಸಿ 3 ವರ್ಷಗಳ ಬಳಿಕ ಮೊದಲ ಚಿನ್ನ ಜಯಿಸಿದರು. ಒಲಿಂಪಿಕ್ಸ್‌ನಲ್ಲಿ ಕಂಚು ಪದಕ ವಿಜೇತೆ ಮೇರಿ ಕೋಮ್ ಮಾಜಿ ರಾಷ್ಟ್ರೀಯ ಚಾಂಪಿಯನ್ ಮಿರೆರಾಂನ ವನ್‌ಲಾಲ್ ದುಯಟಿ ಅವರನ್ನು ಒಮ್ಮತದ ತೀರ್ಪಿನಲ್ಲಿ ಮಣಿಸಿದರು. ಶಿವ ಥಾಪಾ ಹಾಲಿ ಚಾಂಪಿಯನ್ ಮನೀಶ್ ಕೌಶಿಕ್‌ರನ್ನು 60 ಕೆಜಿ ವಿಭಾಗದಲ್ಲಿ ಸೋಲಿಸಿ ಚಿನ್ನ ಜಯಿಸಿದರು. ಈ ಮೂಲಕ ಕಳೆದ ವರ್ಷದ ಸೆಮಿ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡರು. ರಾಷ್ಟ್ರೀಯ ಚಾಂಪಿಯನ್ ಪಿಎಲ್ ಪ್ರಸಾದ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಸೋಳಂಕಿ 52ಕೆಜಿ ತೂಕ ವಿಭಾಗದಲ್ಲಿ ಕಂಚು ಜಯಿಸಿದರು.

ಭಾರತ ಪುರುಷರ 75ಕೆಜಿ ಫೈನಲ್‌ನಲ್ಲಿ ಚಿನ್ನ ಜಯಿಸುವುದರಿಂದ ವಂಚಿತವಾಯಿತು. ಆಶೀಶ್ ಕುಮಾರ್ ಫಿಲಿಪಿನೊ ಎಮಿರ್ ಫೆಲಿಕ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಆಡದೇ ಹಿಂದೆ ಸರಿದರು. ಕುಮಾರ್ ಸೆಮಿ ಫೈನಲ್ ಪಂದ್ಯದ ವೇಳೆ ಹಣೆಗೆ ಗಾಯಗೊಂಡು ನಿವೃತ್ತಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News