ವಿಶ್ವಕಪ್ ಎತ್ತಲು ವಿಫಲರಾದ ಹತ್ತು ಕ್ರಿಕೆಟ್ ದಿಗ್ಗಜರು

Update: 2019-05-25 06:31 GMT

ಹೊಸದಿಲ್ಲಿ, ಮೇ 24: ಶ್ರೇಷ್ಠ ಕ್ರಿಕೆಟಿಗನೆಂಬ ಸ್ಥಾನಮಾನ ಗಿಟ್ಟಿಸಿಕೊಂಡರೂ ವಿಶ್ವಕಪ್ ಚಾಂಪಿಯನ್ ಪಟ್ಟ ಗ್ಯಾರಂಟಿಯಲ್ಲ. ಈ ಮಾತು ಎಲ್ಲ ಕ್ರೀಡೆಗೆ ಅನ್ವಯವಾಗುತ್ತದೆ. ಆದರೆ, ಕ್ರಿಕೆಟ್‌ನಲ್ಲಿ ಈ ಪಟ್ಟಿ ದೀರ್ಘವಾಗಿದೆ. ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ತಾನಾಡಿದ 6ನೆ ಆವೃತ್ತಿಯ ವಿಶ್ವಕಪ್‌ನಲ್ಲಿ ಟ್ರೋಫಿ ಎತ್ತಿ ಹಿಡಿದಿದ್ದರು.

ವಿಶ್ವಕಪ್ ಎತ್ತಲು ವಿಫಲವಾದ 10 ದಿಗ್ಗಜ ಕ್ರಿಕೆಟಿಗರೆಂದರೆ:

ಗ್ರಹಾಂ ಗೂಚ್: ಗೂಚ್ ಮೂರು ಬಾರಿ ವಿಶ್ವಕಪ್‌ನಲ್ಲಿ ಆಡಿದರೂ ಟ್ರೋಫಿ ಕೈಗೆಟುಕಲಿಲ್ಲ. 1987ರಲ್ಲಿ ಮುಂಬೈನಲ್ಲಿ ನಡೆದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಗಳಿಸಿದ ಶತಕ ಗೂಚ್ ವೃತ್ತಿಜೀವನದ ಸ್ಮರಣೀಯ ಸಾಧನೆ.

ಇಯಾನ್ ಬೋಥಂ

ಇಂಗ್ಲೆಂಡ್‌ನ ಪರ ಎರಡು ವಿಶ್ವಕಪ್‌ನಲ್ಲಿ ಆಡಿರುವ ಬೋಥಂ ಆಲ್‌ರೌಂಡ್ ಸಾಮರ್ಥ್ಯದಿಂದ ಗಮನ ಸೆಳೆದಿದ್ದರು. 1992ರ ವಿಶ್ವಕಪ್‌ನಲ್ಲಿ 10 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದರು. ಅಗ್ರ ಕ್ರಮಾಂಕ ಹಾಗೂ ಮಧ್ಯಮ ಸರದಿಯಲ್ಲಿ ಪಿಂಚ್ ಹಿಟ್ಟರ್ ಆಗಿ ಆಡುವ ಸಾಮರ್ಥ್ಯ ಹೊಂದಿದ್ದರು.

ವಕಾರ್ ಯೂನಿಸ್

ಓರ್ವ ಶ್ರೇಷ್ಠ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದ ಪಾಕ್‌ನ ವಕಾರ್ ಯೂನಿಸ್ ಗಾಯಗೊಂಡ ಕಾರಣ 1992ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಐತಿಹಾಸಿಕ ವಿಶ್ವಕಪ್ ಜಯಿಸಿದ್ದಾಗ ತಂಡದಲ್ಲಿರಲಿಲ್ಲ. ವಸೀಂ ಅಕ್ರಂ ಆಗ ಬೌಲಿಂಗ್‌ನಲ್ಲಿ ಮಿಂಚಿದ್ದರು. 1999ರಲ್ಲಿ ಪಾಕಿಸ್ತಾನ ಫೈನಲ್‌ಗೆ ತಲುಪಲು ಯೂನಿಸ್ ಮಹತ್ವದ ಕೊಡುಗೆ ನೀಡಿದ್ದರು.

ಸೌರವ್ ಗಂಗುಲಿ

ಗಂಗುಲಿ 1999ರಿಂದ 2007ರ ನಡುವೆ 3 ವಿಶ್ವಕಪ್‌ಗಳಲ್ಲಿ ಆಡಿದ್ದಾರೆ. 2003ರಲ್ಲಿ ಭಾರತ ಫೈನಲ್‌ಗೆ ತಲುಪಲು ನಾಯಕತ್ವವಹಿಸಿದ್ದರು. 2003ರ ವಿಶ್ವಕಪ್‌ವೊಂದರಲ್ಲೇ 3 ಶತಕ ದಾಖಲಿಸಿದ್ದರು. ಆಕ್ರಮಣಕಾರಿ ಹಾಗೂ ಮುಚ್ಚುಮರೆಯಿಲ್ಲದೆ ಮಾತನಾಡುವ ಗಂಗುಲಿ ಭಾರತ ತಂಡಕ್ಕೆ ಹೋರಾಟದ ಗುಣ ಮೈಗೂಡಿಸಿದ್ದರು. ಹಲವು ಯುವ ಆಟಗಾರರನ್ನು ಬೆಳೆಸಿದ್ದ ಗಂಗುಲಿ 2011ರ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆಯಲಿಲ್ಲ. ಆದರೆ ವಿಶ್ವಕಪ್‌ನಲ್ಲಿ 22 ಪಂದ್ಯಗಳನ್ನು ಆಡಿದ್ದ ಅವರು 55.88ರ ಸರಾಸರಿಯಲ್ಲಿ 1,006 ರನ್ ಗಳಿಸಿದ್ದಾರೆ.

ಬ್ರಿಯಾನ್ ಲಾರಾ

ಲಾರಾ ಅವರ ಟೆಸ್ಟ್ ಕ್ರಿಕೆಟ್‌ನಲ್ಲಿನ ದಾಖಲೆ ಎಲ್ಲರಿಗೂ ಚಿರಪರಿಚಿತ. ಪೋರ್ಟ್ ಆಫ್ ಸ್ಪೇನ್‌ನ ಪ್ರಿನ್ಸ್ ಆಗಿರುವ ಲಾರಾ ಏಕದಿನ  ಕ್ರಿಕೆಟ್‌ನಲ್ಲೂ ತನ್ನ ಛಾಪು ಮೂಡಿಸಿದ್ದರು. 10,000 ರನ್ ಗಳಿಸಿದ ಕೆಲವೇ ಆಟಗಾರರ ಪೈಕಿ ಒಬ್ಬರಾಗಿದ್ದರು. ವೆಸ್ಟ್‌ಇಂಡೀಸ್ ಪರ 299 ಏಕದಿನ ಪಂದ್ಯಗಳನ್ನು ಆಡಿದ್ದ ಅವರು ಮೂರು ಬಾರಿ 150ಕ್ಕೂ ಅಧಿಕ ರನ್ ಗಳಿಸಿದ್ದ ಸಾಧನೆ ಮಾಡಿದ್ದರು. ಲ್ಯಾನ್ಸ್ ಕ್ಲೂಸ್ನರ್: ಉತ್ತಮ ಟೆಸ್ಟ್ ಕ್ರಿಕೆಟಿಗನಾಗಿರುವ ಕ್ಲೂಸ್ನರ್ 1999ರ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ವಿಶ್ವದ ಗಮನ ಸೆಳೆದಿದ್ದರು. ದ.ಆಫ್ರಿಕ ಸೆಮಿ ಫೈನಲ್‌ನಲ್ಲಿ ಹೊರಬಿದ್ದರೂ ಕ್ಲೂಸ್ನರ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಉತ್ತಮ ಆಲ್‌ರೌಂಡ್ ಪ್ರದರ್ಶನಕ್ಕಾಗಿ 2000ರಲ್ಲಿ ವರ್ಷದ ವಿಸ್ಡನ್ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದರು.

ಜಾಕ್ ಕಾಲಿಸ್

ಕ್ಲೂಸ್ನರ್ ಬಳಿಕ ದಕ್ಷಿಣ ಆಫ್ರಿಕದ ಶ್ರೇಷ್ಠ ಆಲ್‌ರೌಂಡರ್ ಆಗಿ ಹೊರಹೊಮ್ಮಿದ್ದವರು ಕಾಲಿಸ್. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಛಾಪು ಮೂಡಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 273 ವಿಕೆಟ್‌ಗಳ ಜೊತೆಗೆ 11,000ಕ್ಕೂ ಅಧಿಕ ರನ್ ಗಳಿಸಿದ್ದರು. 17 ಶತಕ ಹಾಗೂ 86 ಅರ್ಧಶತಕಗಳನ್ನು ಗಳಿಸಿರುವ ಕಾಲಿಸ್‌ಗೆ ವಿಶ್ವಕಪ್ ಜಯಿಸಲು ಸಾಧ್ಯವಾಗಲಿಲ್ಲ.

ಕುಮಾರ ಸಂಗಕ್ಕರ 

2015ರ ವಿಶ್ವಕಪ್‌ನಲ್ಲಿ ಸತತ 4 ಶತಕವನ್ನು ಸಿಡಿಸಿದ್ದ ಶ್ರೀಲಂಕಾದ ಸಂಗಕ್ಕರಗೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ವಿಕೆಟ್ ಕೀಪಿಂಗ್ ಜೊತೆಗೆ ದಾಂಡಿಗನಾಗಿಯೂ ತಂಡಕ್ಕೆ ಆಸರೆಯಾಗಿದ್ದ ಅವರು ತೆಂಡುಲ್ಕರ್ ಬಳಿಕ ಅತ್ಯಂತ ಹೆಚ್ಚು ಏಕದಿನ ಸ್ಕೋರ್ ಗಳಿಸಿದ ಆಟಗಾರನಾಗಿ ವೃತ್ತಿಜೀವನ ಅಂತ್ಯಗೊಳಿಸಿದ್ದರು. ಶ್ರೀಲಂಕಾ 1996ರ ವಿಶ್ವಕಪ್ ಗೆದ್ದಾಗ ಯುವಕನಾಗಿದ್ದ ಸಂಗಕ್ಕರ 2007, 2011ರಲ್ಲಿ ತನ್ನ ತಂಡವನ್ನು ಫೈನಲ್‌ಗೆ ತಲುಪಿಸಿದ್ದರೂ ವಿಶ್ವಕಪ್ ಕೈಗೆಟುಕಲಿಲ್ಲ.ಈ ಎರಡೂ ಟೂರ್ನಿಗಳಲ್ಲಿ 50ಕ್ಕೂ ಅಧಿಕ ಸರಾಸರಿಯಲ್ಲಿ ಆಡಿದ್ದರು.

ವಿಲಿಯರ್ಸ್ 

ಡಿವಿಲಿಯರ್ಸ್ 2007,2011 ಹಾಗೂ 2015ರ ವಿಶ್ವಕಪ್‌ನಲ್ಲಿ ಆಡಿದ್ದರು.ಏಕದಿನ ಕ್ರಿಕೆಟ್‌ನ ಬ್ಯಾಟಿಂಗ್‌ನಲ್ಲಿ 53.50ರ ಸರಾಸರಿ ಕಾಯ್ದುಕೊಂಡಿದ್ದರು. ವಿಂಡೀಸ್ ವಿರುದ್ಧ 31 ಎಸೆತಗಳಲ್ಲಿ ಗಳಿಸಿರುವ ಶತಕ ವೇಗದ ಶತಕವಾಗಿ ಉಳಿದಿದೆ. ಟೆನಿಸ್, ಹಾಕಿ ಹಾಗೂ ಗಾಲ್ಫ್ ಕ್ರೀಡೆಯಲ್ಲೂ ಕೈಚೆಳಕ ತೋರಿರುವ ಅವರಿಗೆ ವಿಶ್ವಕಪ್ ಮರೀಚಿಕೆಯಾಗುಳಿಯಿತು.

ಶಾಹಿದ್ ಅಫ್ರಿದಿ 

‘ಬೂಮ್ ಬೂಮ್’ಖ್ಯಾತಿಯ ಅಫ್ರಿದಿ ಪಾಕಿಸ್ತಾನದ ಆಕ್ರಮಣಕಾರಿ ಮಧ್ಯಮ ಕ್ರಮಾಂಕದ ದಾಂಡಿಗನಾಗಿ ಗುರುತಿಸಿಕೊಂಡಿದ್ದರು. 1996ರಲ್ಲಿ 37 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದ ಗಮನ ಸೆಳೆದಿದ್ದರು. ಈ ದಾಖಲೆ ದೀರ್ಘಕಾಲ ಉಳಿದಿತ್ತು. 1999ರಿಂದ 2015ರ ವಿಶ್ವಕಪ್‌ನಲ್ಲಿ ಆಡಿದ್ದ ಅಫ್ರೀದಿ 2011ರ ವಿಶ್ವಕಪ್‌ನಲ್ಲಿ ಗರಿಷ್ಠ 21 ವಿಕೆಟ್ ಪಡೆದಿದ್ದರು. ಇದೀಗ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪೈಕಿ 5ನೇ ಸ್ಥಾನದಲ್ಲಿದ್ದಾರೆ. ನಾಯಕತ್ವದ ಜೊತೆಗೆ ಆಲ್‌ರೌಂಡರ್ ಮೂಲಕ ಓರ್ವ ಶ್ರೇಷ್ಠ ಕ್ರಿಕೆಟಿಗನಾಗಿದ್ದರು. ಆದರೆ ಅವರಿಗೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News