ಇಂಗ್ಲೆಂಡ್ ಕಪ್ ಗೆಲ್ಲುವ ನೆಚ್ಚಿನ ತಂಡ: ವಿವಿಧ ತಂಡಗಳ ನಾಯಕರ ಅನಿಸಿಕೆ

Update: 2019-05-25 07:22 GMT

ಲಂಡನ್, ಮೇ 24: ಮುಂಬರುವ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿಶ್ವಕಪ್‌ಗೆಲ್ಲುವ ಫೇವರಿಟ್ ತಂಡವಾಗಿದೆ. ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಬಹುತೇಕ ತಂಡಗಳ ನಾಯಕರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ 10 ತಂಡಗಳ ನಾಯಕರು ಗುರುವಾರ ತಂಡಗಳ ಸಾಮರ್ಥ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಕೆಲವು ವರ್ಷಗಳಿಂದ ಇಂಗ್ಲೆಂಡ್ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಭಾರತಕ್ಕಿಂತಲೂ ಇಂಗ್ಲೆಂಡ್ ಬಲಿಷ್ಠ ತಂಡ. ಈ ಕಾರಣದಿಂದಾಗಿ ಇಂಗ್ಲೆಂಡ್ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿದೆ ಎಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡದ ನಾಯಕ ಆ್ಯರೊನ್ ಫಿಂಚ್ ಹೇಳಿದ್ದಾರೆ.

ಆಸ್ಟ್ರೇಲಿಯ ತಂಡಕ್ಕೆ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ವಾರ್ನರ್ ವಾಪಸಾಗಿದ್ದಾರೆ. ತಂಡ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಲಿದೆ ಎಂದು ಫಿಂಚ್ ಅಭಿಪ್ರಾಯಪಟ್ಟರು.

ಪ್ರಪಂಚದಲ್ಲಿ 10 ಬಲಿಷ್ಠ ತಂಡಗಳಿವೆ. ಪ್ರತಿಯೊಂದು ತಂಡಗಳ ನಾಯಕರಿಗೆ ಚಿಕ್ಕಂದಿನಲ್ಲೇ ವಿಶ್ವಕಪ್‌ನಲ್ಲಿ ಆಡುವ ಕನಸಿರುತ್ತದೆ. ಕ್ರಿಕೆಟ್‌ನ ತವರಾಗಿರುವ ಇಂಗ್ಲೆಂಡ್ ಇದಕ್ಕೆ ಹೊರತಲ್ಲ. ನಾವು ವಿಶ್ವಕಪ್‌ಗೆ ಚೆನ್ನಾಗಿ ತಯಾರಿ ನಡೆಸಿರುವುದಾಗಿ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಹೇಳಿದ್ದಾರೆ.

ಇಂಗ್ಲೆಂಡ್ ತಂಡಕ್ಕೆ ವಿಶ್ವಕಪ್ ಗೆಲ್ಲಲು ವಾತಾವರಣ ಅನುಕೂಲವಾಗಿದೆ. ತವರಿನ ಬೆಂಬಲ ಇಂಗ್ಲೆಂಡ್‌ಗೆ ಇದೆ. ಅದು ಟೂರ್ನಮೆಂಟ್‌ನಲ್ಲಿ ಬಲಿಷ್ಠ ತಂಡವಾಗಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದರು.

ದಕ್ಷಿಣ ಆಫ್ರಿಕ ಈ ತನಕ ವಿಶ್ವಕಪ್ ಫೈನಲ್‌ಗೆ ಒಮ್ಮೆಯೂ ತಲುಪಿಲ್ಲ. 4 ಬಾರಿ ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿತ್ತು. ತಂಡದ ನಾಯಕ ಎಫ್ ಡು ಪ್ಲೆಸಿಸ್ ಮೊದಲ ಬಾರಿ ವಿಶ್ವಕಪ್ ಫೈನಲ್‌ಗೆ ತಂಡವನ್ನು ಮುನ್ನಡೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೌಲಿಂಗ್‌ನಲ್ಲಿ ಬಲಿಷ್ಠವಾಗಿರುವ ತಂಡಕ್ಕೆ ವಿಶ್ವಕಪ್ ಗೆಲ್ಲಲು ತೊಂದರೆಯಾಗದು ಎಂದು ಅವರು ಹೇಳಿದ್ದಾರೆ. ಕಠಿಣ ಪ್ರಯತ್ನದ ಮೂಲಕ ವೆಸ್ಟ್ ಇಂಡೀಸ್ ವಿಶ್ವಕಪ್‌ಗೆ ಪ್ರವೇಶ ಪಡೆದಿರುವುದಾಗಿ ಹೇಳಿರುವ ತಂಡದ ನಾಯಕ ಜೇಸನ್ ಹೋಲ್ಡರ್ ತಮ್ಮನ್ನು ಜಗತಿನ ಬಲಿಷ್ಠ 10 ತಂಡಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

‘‘ಇಂಗ್ಲೆಂಡ್‌ನ ವಾತಾವರಣದ ಬಗ್ಗೆ ಶ್ರೀಲಂಕಾ ತಂಡಕ್ಕೆ ಚೆನ್ನಾಗಿ ಗೊತ್ತಿದೆ. ನಾವು ವಾತಾವರಣಕ್ಕೆ ಹೊಂದಿಕೊಳ್ಳುವ ಉದ್ದೇಶಕ್ಕಾಗಿ ಬೇಗನೆ ಬಂದಿದ್ದೇವೆ ’’ ಎಂದು ಶ್ರೀಲಂಕಾದ ನಾಯಕ ಡಿಮತ್ ಕರುಣರತ್ನೆ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್‌ನಲ್ಲಿ ಆಡುವುದನ್ನು ನಾವು ಎದುರು ನೋಡುತ್ತಿದ್ದೇವೆ. ಅಫ್ಘಾನಿಸ್ತಾನ ತಂಡ ಚೆನ್ನಾಗಿ ಆಡಲಿದೆ ಎಂದು ತಂಡದ ನಾಯಕ ಗುಲ್ಬದ್ದೀನ್ ನೈಬ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾ ತಂಡ ಹಿರಿಯ ಮತ್ತು ಕಿರಿಯ ಆಟಗಾರರನ್ನು ಹೊಂದಿದೆ. ಕ್ರಿಕೆಟ್ ಎನ್ನುವುದು ದೊಡ್ಡ ಆಟವಾಗಿದೆ. ಒಂದಲ್ಲ ಒಂದು ದಿನ ಒಂದು ತಂಡ ಇನ್ನೊಂದನ್ನು ಮಣಿಸುವ ಶಕ್ತಿಯನ್ನು ಹೊಂದಿದೆ ಎನ್ನುವುದು ಬಾಂಗ್ಲಾ ತಂಡದ ನಾಯಕ ಮಶ್ರಾಫೆ ಮೊರ್ತಾಝಾ ಅಭಿಪ್ರಾಯ.

1992ರಲ್ಲಿ ವಿಶ್ವಕಪ್ ಜಯಿಸಿದ್ದ ಪಾಕಿಸ್ತಾನ ತಂಡ 1999ರಲ್ಲಿ ಫೈನಲ್ ಪ್ರವೇಶಿಸಿತ್ತು. 2017ರಲ್ಲಿ ಇಂಗ್ಲೆಂಡ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಈ ಕಾರಣದಿಂದಾಗಿ ಇಂಗ್ಲೆಂಡ್‌ನಲ್ಲಿ ಪಾಕಿಸ್ತಾನದ ಪ್ರದರ್ಶನ ಉತ್ತಮವಾಗಿದೆ. ವಿಶ್ವಕಪ್ ಗೆಲ್ಲಲು ಹೋರಾಟ ನಡೆಸಲಿದೆ ಎಂದು ಪಾಕ್ ನಾಯಕ ಸರ್ಫರಾಝ್ ಅಹ್ಮದ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News