ಭಾರತದ ರಾಜಕೀಯದಲ್ಲಿ ಬದಲಾವಣೆಗೆ ಸ್ವಾಗತ: ಮೋದಿಯನ್ನು ಹೊಗಳಿ ರೋಷನ್ ಬೇಗ್ ಸರಣಿ ಟ್ವೀಟ್

Update: 2019-05-26 12:12 GMT

ಬೆಂಗಳೂರು, ಮೇ 26: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ಮುಖಂಡರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿ ಸುದ್ಧಿಯಲಿದ್ದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ರೋಷನ್ ಬೇಗ್ ಟ್ವಿಟ್ಟರ್‌ನಲ್ಲಿ ಮೋದಿಯವನ್ನು ಹೊಗಳಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ರೋಷನ್ ಬೇಗ್, ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದ ಮೋದಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೆ, ಸೋಲಿನಿಂದ ವಿಪಕ್ಷಗಳು ಪಾಠ ಕಲಿಯಬೇಕೆಂದಿದ್ದಾರೆ. ಇದರ ಜತೆಗೆ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ನೀಡಿದ್ದಕ್ಕಾಗಿ ಮತದಾರರಿಗೆ ಹಾಗೂ ಪುನರಾಯ್ಕೆಯಾಗಿರುವ ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಅವರನ್ನು ಅಭಿನಂದಿಸಿದ್ದಾರೆ. ‘ಇಷ್ಟು ದೊಡ್ಡ ಬಹುಮತ ಗಳಿಸಿದ ಮೋದಿ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಜನ ಮಾತನಾಡಿದ್ದಾರೆ, ಮೋದಿ ಅವರು ದೇಶವನ್ನು ಸಮಗ್ರವಾಗಿ ಕರೆದುಕೊಂಡು ಹೋಗುತ್ತಾರೆಂದು ನಾನು ನಂಬಿದ್ದೇನೆ. ವಿಪಕ್ಷಗಳು ಈ ದೊಡ್ಡ ನಷ್ಟದಿಂದ ಪಾಠ ಕಲಿಯಬೇಕು.

ಯಾವುದೇ ಕ್ಷಮೆ ಇಲ್ಲದೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 15 ಸಾವಿರ ಮತಗಳ ಮುನ್ನಡೆ ಸಿಕ್ಕಿದೆ. ಇದಕ್ಕಾಗಿ ನಾನು ಮತದಾರರಿಗೆ ಆಭಾರಿಯಾಗಿದ್ದೇನೆ. ಮೂವತ್ತು ವರ್ಷಗಳಿಂದಲೂ ಈ ಕ್ಷೇತ್ರದ ಜನತೆ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಮತ್ತೊಂದು ಬಾರಿಗೆ ಸಂಸದರಾಗಿ ಆಯ್ಕೆಯಾದ ಪಿ.ಸಿ ಮೋಹನ್‌ಗೆ ಶುಭಾಶಯಗಳು.ನಾವಿಬ್ಬರೂ ಒಟ್ಟುಗೂಡಿ ಕೇಂದ್ರದ ಅನುದಾನ ತಂದು ಶಿವಾಜಿನಗರ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ' ಎಂದಿದ್ದಾರೆ.

ದೇಶದ ಅಲ್ಪಸಂಖ್ಯಾತರ ಕುರಿತು ಮೋದಿ ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ಆಡಿದ ಮಾತುಗಳು ನನಗೆ ಸಂತೋಷ ತರಿಸಿವೆ. ಪ್ರಮಾಣವಚನ ಸ್ವೀಕರಿಸುವುದಕ್ಕೂ ಮೊದಲೆ ಏಕತೆ ಪ್ರತಿಪಾದಿಸಿದರು. ಇದು ಇಡೀ ಭಾರತವೆ ಒಂದು ಎಂಬುದರತ್ತ ಮೊದಲ ಉತ್ತಮ ಹೆಜ್ಜೆ. ಅಲ್ಲದೆ, ಹಲವು ವರ್ಷಗಳಿಂದ ಅಲ್ಪಸಂಖ್ಯಾತರಲ್ಲಿ ಮನೆ ಮಾಡಿದ್ದ ಭಯವನ್ನು ಅವರು ತಮ್ಮ ಮಾತುಗಳ ಮೂಲಕ ಹೋಗಲಾಡಿಸಿದರು.

ಸಮಗ್ರ ಭಾರತದಲ್ಲಿ ಅವರು ನುಡಿದಂತೆ ನಡೆಯಲಿದ್ದಾರೆಂದು ನಾನು ನಂಬಿದ್ದೇನೆ. ಅವರು ತಮ್ಮ ಭಾಷಣವನ್ನು ಯಾವುದೊ ರಾಜಕೀಯ ಉದ್ದೇಶಕ್ಕಾಗಿ, ಓಟ್ ಬ್ಯಾಂಕ್ ಭದ್ರಪಡಿಸಲಾಗಲಿ ಹೇಳಿಲ್ಲ, ಚುನಾವಣೆ ಗೆದ್ದ ನಂತರ ಅವರು ಹೇಳಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಾದ ಬದಲಾವಣೆಯನ್ನು ನಾನು ಸ್ವಾಗತಿಸುತ್ತೇನೆ’ ಎಂದು ರೋಷನ್‌ಬೇಗ್ ಸರಣಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News