25 ವರ್ಷದ ನಂತರ ಒಟ್ಟಾದ ಗುರು-ಶಿಷ್ಯರು: ಹಳೆಯ ನೆನಪುಗಳಿಗೆ ಸಾಕ್ಷಿಯಾದ ಬೆಂ.ವಿ.ವಿ ಕನ್ನಡ ಅಧ್ಯಯನ ಕೇಂದ್ರ

Update: 2019-05-26 12:53 GMT

ಬೆಂಗಳೂರು, ಮೇ 26: ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ 1992-94ರ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು 25 ವರ್ಷದ ನಂತರ ತಾವು ಓದಿದ ತರಗತಿಯಲ್ಲಿಯೆ ಒಟ್ಟಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿ, ತಮಗೆ ಪಾಠ ಮಾಡಿದ ಗುರುಗಳನ್ನು ಸನ್ಮಾನಿಸಿದರು ಹಾಗೂ ತಮ್ಮ ಕಾಲೇಜಿನ ಅನುಭವಗಳನ್ನು ನೆನೆದು ಸಂತಸ ವ್ಯಕ್ತಪಡಿಸಿದರು.

ರವಿವಾರ ಬೆಂಗಳೂರು ವಿಶ್ವವಿದ್ಯಾಲದಯ ಕನ್ನಡ ಅಧ್ಯಯನ ಕೇಂದ್ರದ ನಿವೃತ್ತ ಪ್ರಾಧ್ಯಾಪಕರಾದ ಡಾ.ಹಂ.ಪ.ನಾಗರಾಜಯ್ಯ, ಡಾ.ಸಿ.ವೀರಣ್ಣ., ಪ್ರೊ.ಬರಗೂರು ರಾಮಚಂದ್ರಪ್ಪ, ಡಾ.ಕೆ.ಪಿ.ಭಟ್, ಡಾ.ಕಾರ್ಲೋಸ್, ಡಾ.ಬಸವರಾಜ ಕಲ್ಗುಡಿ ಹಾಗೂ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಬಿ.ಗಂಗಾಧರ ಅವರನ್ನು ಪ್ರೀತಿಯಿಂದ ಸನ್ಮಾನಿಸಿದ ಹಳೆಯ ವಿದ್ಯಾರ್ಥಿಗಳು, ಗುರುವಂಧನೆ ಸಲ್ಲಿಸಿದರು.

ಈ ವೇಳೆ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಹಾಗೂ ಕವಿ ಕಾ.ವೆಂ.ಶ್ರೀನಿವಾಸ ಮೂರ್ತಿ ಮಾತನಾಡಿ, 1992-94ನೆ ಸಾಲಿನಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸುಮಾರು 45 ವಿದ್ಯಾರ್ಥಿಗಳು ಒಟ್ಟಾಗಿ ವಿದ್ಯಾಭ್ಯಾಸ ಮಾಡಿದ್ದೆವು. ನಾವು ಕಲಿತ ಈ ವಿಶ್ವವಿದ್ಯಾಲಯ ಹಾಗೂ ನಮ್ಮ ಪ್ರಾಧ್ಯಾಪಕರು ನಮ್ಮ ಬದುಕಿನ ಭಾಗವಾಗಿದ್ದಾರೆ. ಹೀಗಾಗಿ ಗುರುಗಳನ್ನು ನೆನೆದು ಗೌರವಿಸುವ ಕಾರಣಕ್ಕಾಗಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ನಮ್ಮ ಗುರುಗಳ ಹಾಕಿಕೊಟ್ಟ ಮಾರ್ಗದರ್ಶನದಿಂದಾಗಿ ನಮ್ಮ ಬ್ಯಾಚ್‌ನಲ್ಲಿದ್ದ 45ವಿದ್ಯಾರ್ಥಿಗಳಲ್ಲಿ 33ಮಂದಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಹಾಗೂ 5ಮಂದಿ ಕೆಎಎಸ್ ಅಧಿಕಾರಿಗಳಾಗಿದ್ದಾರೆ. ನಮ್ಮ ಸಾಧನೆಯ ಹಿಂದೆ ಬೆಂವಿವಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರ ಪಾತ್ರ ದೊಡ್ಡದಿದೆ ಎಂದು ಅವರು ಸ್ಮರಿಸಿದರು.

ಹಳೆಯ ವಿದ್ಯಾರ್ಥಿನಿ ಪುಷ್ಪಾ ಭಾರತಿ ಮಾತನಾಡಿ, ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರು ನಮಗೆ ಕೇವಲ ಪಠ್ಯಗಳನ್ನು ಮಾತ್ರ ಬೋಧಿಸಲಿಲ್ಲ. ತಮ್ಮ ಚಿಂತನೆಗಳ ಮೂಲಕ ವಿದ್ಯಾರ್ಥಿಗಳ ಬದುಕನ್ನು ರೂಪಿಸಿದವರು. ಜೀವನದಲ್ಲಿ ಎದುರಾಗಬಹುದಾದ ಕಷ್ಟ-ಸುಖಗಳನ್ನು ಹೇಗೆ ಎದುರಿಸಬೇಕೆಂಬುದನ್ನು ತಿಳಿಸಿಕೊಟ್ಟವರು. ಅವರು ಹಾಕಿಕೊಟ್ಟ ಮಾರ್ಗದರ್ಶದಲ್ಲಿ ನಾವು ಈಗಲೂ ಸಾಗುತ್ತಿದ್ದೇವೆಂದು ಸಂತಸ ವ್ಯಕ್ತಪಡಿಸಿದರು.

ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಹಂ.ಪಾ.ನಾಗರಾಜಯ್ಯ ಮಾತನಾಡಿ, ನಮ್ಮ ವಿದ್ಯಾರ್ಥಿಗಳು 25 ವರ್ಷಗಳ ನಂತರ ಸ್ನೇಹ ಸಮ್ಮಿಲನ ಹಾಗೂ ಗುರುವಂಧನಾ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬ ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳಿಂದ ನಮ್ಮಿಳಗೆ ಪ್ರೀತಿ, ಸ್ನೇಹವನ್ನು ಸದಾ ಹಸಿರಾಗಿರುವಂತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಎಂಎ, ಪಿಎಚ್‌ಡಿ ಮಾಡುವುದು ಮುಖ್ಯವಲ್ಲ. ವಿವೇಕ, ವಿವೇಚನೆ ಇದ್ದರೆ ಮಾತ್ರ ಎಲ್ಲ ಪದವಿಗಳಿಗೆ ಒಂದು ಗೌರವ ಬರುತ್ತದೆ. ಇವತ್ತು 25ವರ್ಷಗಳ ನಂತರ ಇಲ್ಲಿ ಸೇರಿರುವ ಹಳೆಯ ವಿದ್ಯಾರ್ಥಿಗಳು ಅಂತಹ ವಿವೇಕಯುಳ್ಳವರು ಎಂಬ ಅಭಿಮಾನವು ನನ್ನೊಳಗೆ ಸಂತಸ ತಂದಿದೆ ಎಂದು ಅವರು ಹೇಳಿದರು.

ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರವು ಎಲ್ಲ ರೀತಿಯ ವಿಚಾರಗಳ ಧಾರೆಗಳ ಒಕ್ಕೂಟವಾಗಿತ್ತು. ವೈಚಾರಿಕಾ ವಾಗ್ವದಗಳು ಸದಾ ಜೀವಂತವಾಗಿತ್ತು. ಆ ಕಾರಣಕ್ಕಾಗಿಯೆ ಶೈಕ್ಷಣಿಕ ವಲಯದಲ್ಲಿ ಬೆಂವಿವಿ ಕನ್ನಡ ಅಧ್ಯಯನ ಕೇಂದ್ರಕ್ಕೆ ವಿಶೇಷವಾದ ಮಾನ್ಯತೆ ಇತ್ತು ಎಂದು ತಿಳಿಸಿದರು.

ಮಾನವೀಯ ಸಂಬಂಧ ಕುಸಿಯುತ್ತಿರುವ ಈ ಸಂದರ್ಭದಲ್ಲಿ, ಹಸಿವಿನ ರಾಜಕಾರಣದ ಬದಲಿಗೆ ಹಸುವಿನ ರಾಜಕಾಣರ ಮಾಡುತ್ತಿರುವ ಈ ಕಾಲದಲ್ಲಿ 25ವರ್ಷದ ಹಿಂದೆ ಒಟ್ಟಾಗಿ ಓದಿದ ವಿದ್ಯಾರ್ಥಿಗಳು ತಾವು ಓದಿದ ತರಗತಿಯಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸಿರುವುದು ಮಾನವೀಯ ಸಂಬಂಧಗಳ ದ್ಯೋತಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News