ಕಬಾಬ್ ವ್ಯಾಪಾರಿ ಕೊಲೆ ಪ್ರಕರಣ: ಗುಂಡಿಕ್ಕಿ ಆರೋಪಿಯ ಬಂಧನ

Update: 2019-05-26 14:27 GMT

ಬೆಂಗಳೂರು, ಮೇ 26: ಕಬಾಬ್ ಅಂಗಡಿ ಮಾಲಕ ಹತ್ಯೆ ಪ್ರಕರಣ ಸಂಬಂಧ ಇಲ್ಲಿನ ಉತ್ತರ ವಿಭಾಗದ ರಾಜಗೋಪಾಲನಗರ ಠಾಣಾ ಪೊಲೀಸರು ಪ್ರಮುಖ ಆರೋಪಿಯೊರ್ವನ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ನಿವಾಸಿ ಕಿಶೋರ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಪೊಲೀಸರು ಗುಂಡೇಟಿನಿಂದ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.

ರವಿವಾರ ಕಾರ್ಯಾಚರಣೆ ನಡೆಸಿ ಖಚಿತ ಮಾಹಿತಿ ಮೇರೆಗೆ ರಾಜಗೋಪಾಲ್ ನಗರ ಠಾಣೆ ಇನ್ಸೆಪೆಕ್ಟರ್ ದಿನೇಶ್ ಪಾಟೀಲ್ ತಂಡ ಆರೋಪಿಯನ್ನು ಬಂಧಿಸಲು ತೆರಳಿದೆ. ಈ ಸಂದರ್ಭದಲ್ಲಿ ಮುಖ್ಯ ಪೊಲೀಸ್ ಪೇದೆ ಶಿವಸ್ವಾಮಿ ಎಂಬುವರ ಮೇಲೆ ಆರೋಪಿ ಕಿಶೋರ್ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ದಿನೇಶ್ ಪಾಟೀಲ್ ಅವರು, ಆತ್ಮರಕ್ಷಣೆಗೋಸ್ಕರ ಆರೋಪಿ ಕಿಶೋರ್ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೇ 22ರಂದು ಹಾಸನ ಜಿಲ್ಲೆಯ ಜಾವಗಾಲ್ ನಿವಾಸಿ ರವೀಶ್, ಹೊಳೆನರಸೀಪುರ ನಿವಾಸಿ ಜಿತೇಂದ್ರ, ಸುಮಂತರಾಜ್ ಹಾಗೂ ಪ್ರದೀಪ್ ಕುಮಾರ್ ಎಂಬುವರನ್ನು ಬಂಧಿಸಲಾಗಿತ್ತು.

ಏನಿದು ಪ್ರಕರಣ?: ಮಂಡ್ಯ ಮೂಲದ ಉಮೇಶ್ ಎಂಬಾತ ಇಲ್ಲಿನ ಶ್ರೀಗಂಧ ನಗರದ ಹೆಗ್ಗನಹಳ್ಳಿ 2ನೇ ಮುಖ್ಯರಸ್ತೆಯಲ್ಲಿ ಕಬಾಬ್ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ರೂಪಾ ಎಂಬಾಕೆಯನ್ನು ಉಮೇಶ್ ವಿವಾಹವಾಗಿದ್ದರು ಎನ್ನಲಾಗಿದೆ.

ಆರೋಪಿ ಕಿಶೋರ್ ಎಂಬಾತ, ಉಮೇಶ್ ಪತ್ನಿ ರೂಪಾಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಈ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿತ್ತು. ಇತ್ತೀಚಿಗೆ ಕಿಶೋರ್, ರೂಪಾ ಜೊತೆಗಿದ್ದ ವಿಡಿಯೋಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಇದರ ವಿರುದ್ಧ ದಂಪತಿ ಇಲ್ಲಿನ ರಾಜಗೋಪಾಲ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.

ದೂರಿನ್ವಯ ಪೊಲೀಸರು, ಕಿಶೋರ್‌ನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ತದನಂತರ ಜಾಮೀನಿನ ಮೇಲೆ ಹೊರ ಬಂದ ಕಿಶೋರ್, ಹಳೇ ದ್ವೇಷವಿಟ್ಟುಕೊಂಡು ಮೇ 12ರ ರಾತ್ರಿ ಉಮೇಶ್ ಮೇಲೆ ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ ನಡೆಸಿ ಕೊಲೆಗೈದಿದು ಪರಾರಿಯಾಗಿದ್ದ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡ ರಾಜಗೋಪಾಲ ನಗರ ಠಾಣಾ ಪೊಲೀಸರು, ಐವರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News