ಎಸ್.ಎಂ.ಕೃಷ್ಣ ನಿವಾಸ ರಾಜಕೀಯ ಚಟುವಟಿಕೆಯ ತಾಣವಲ್ಲ: ಆರ್.ಅಶೋಕ್

Update: 2019-05-26 15:09 GMT

ಬೆಂಗಳೂರು, ಮೇ 26: ಹಿರಿಯ ರಾಜಕೀಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗಿನಿಂದಲೂ ನಾನು ನಿರಂತರವಾಗಿ ಅವರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು.

ರವಿವಾರ ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕೆಲ ವಿಚಾರಗಳ ಬಗ್ಗೆ ಎಸ್.ಎಂ.ಕೃಷ್ಣ ಅವರ ಜೊತೆ ಪತ್ಯೇಕವಾಗಿ ಮಾತನಾಡಬೇಕಿತ್ತು. ಅದಕ್ಕಾಗಿ, ಇಲ್ಲಿಗೆ ಬಂದಿದ್ದೇನೆ ಎಂದರು.

ಕಾಂಗ್ರೆಸ್ ಶಾಸಕರಾದ ಡಾ.ಕೆ.ಸುಧಾಕರ್ ಹಾಗೂ ರಮೇಶ್ ಜಾರಕಿಹೊಳಿ, ಎಸ್.ಎಂ.ಕೃಷ್ಣ ಅವರ ಅಭಿಮಾನಿಗಳು. ಆದುದರಿಂದ, ಅವರನ್ನು ಭೇಟಿ ಮಾಡಲು ಬಂದಿದ್ದಾರೆ. ಅದೇ ರೀತಿ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ಅವರು ಬಂದಿದ್ದಾರೆ ಎಂದು ಅಶೋಕ್ ತಿಳಿಸಿದರು.

ಎಸ್.ಎಂ.ಕೃಷ್ಣ ಅವರ ನಿವಾಸ ರಾಜಕೀಯ ಚಟುವಟಿಕೆಗಳ ತಾಣವಲ್ಲ. ನಾವೆಲ್ಲರೂ ಇಲ್ಲಿ ಒಟ್ಟಿಗೆ ಸೇರಿರುವುದು ಕಾಕತಾಳೀಯವಷ್ಟೇ. ನಾವು 11.30ಕ್ಕೆ ಅವರ ಭೇಟಿಗೆ ಕಾಲಾವಕಾಶ ಕೋರಿದ್ದೆವು. ಆದರೆ, ಅವರು 12 ಗಂಟೆಗೆ ಬರುವಂತೆ ಸೂಚಿಸಿದ್ದರು. ಸುಮಲತಾ ಅವರಿಗೆ 11.30ಕ್ಕೆ ಅವಕಾಶ ನೀಡಿದ್ದರು. ಅವರು ಬರುವುದು ತಡವಾದ ಹಿನ್ನೆಲೆಯಲ್ಲಿ ನಾವೆಲ್ಲ ಇಲ್ಲಿ ಒಟ್ಟಿಗೆ ಸೇರುವಂತಾಯಿತು ಎಂದು ಅವರು ಹೇಳಿದರು.

ರಾಜ್ಯ ಸರಕಾರದ ಅಸ್ತಿತ್ವದ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ. ಸಚಿವ ಎಚ್.ಡಿ.ರೇವಣ್ಣ ಅವರ ನಿಂಬೇಕಾಯಿ ಬಳಿ ಅದನ್ನು ಕೇಳಬೇಕು. ನಾನು ಏನೇ ಕೇಳಬೇಕಾದರೂ ರೇವಣ್ಣ ಹಾಗೂ ಅವರ ನಿಂಬೇಕಾಯಿಯನ್ನು ಕೇಳಿ ಮುಂದುವರೆಯುತ್ತೇನೆ ಎಂದು ತಮ್ಮ ಕೈಯಲ್ಲಿದ್ದ ನಿಂಬೇಹಣ್ಣು ಪ್ರದರ್ಶಿಸಿ ಅಶೋಕ್ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News