ಕಾರ್ಮಿಕರ ಪರ ಧ್ವನಿಯಾಗುವಂತಹ ಪತ್ರಿಕೆ ಅಗತ್ಯವಿದೆ: ಏಕ್ತಾ

Update: 2019-05-26 16:13 GMT

ಬೆಂಗಳೂರು, ಮೇ 26: ಗೃಹಕಾರ್ಮಿಕರು, ಪೌರಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರ ಪರವಾಗಿ ಧ್ವನಿಯಾಗುವಂತಹ ಪತ್ರಿಕೆಯ ಅಗತ್ಯವಿತ್ತು. ಹೀಗಾಗಿ ಬೆವರು ಪತ್ರಿಕೆಯನ್ನು ಪ್ರಕಟಿಸುತ್ತಿದ್ದೇವೆಂದು ‘ಮರ’ ಸಂಸ್ಥೆಯ ಏಕ್ತಾ ತಿಳಿಸಿದರು.

ರವಿವಾರ ಮರ, ಸಾಧನಾ ಹಾಗೂ ಗೃಹ ಕಾರ್ಮಿಕ ಮಹಿಳಾ ಸಂಘಟನೆಯ ಸಹಯೋಗದಲ್ಲಿ ನಗರದ ಸಂಸ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆವರು ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದುಡಿಯುವ ಕಾರ್ಮಿಕರ ಸಮಸ್ಯೆಗಳಾಗಲಿ, ನೋವು-ನಲಿವುಗಳು ಮುಖ್ಯವಾಹಿನಿ ಪತ್ರಿಕೆಯಲ್ಲಿ ಆದ್ಯತೆಯಿರುವಷ್ಟು ಪ್ರಕಟವಾಗುತ್ತಿಲ್ಲ. ಹೀಗಾಗಿ ಕಾರ್ಮಿಕರ ಬದುಕಿನ ಆಂತರಂಗದ ವೇದನೆಗಳು, ಖುಷಿಯ, ನೋವಿನ ಕ್ಷಣಗಳನ್ನು ಜಗತ್ತಿನ ಮುಂದೆ ತೆರೆದಿಡುವ ನಿಟ್ಟಿನಲ್ಲಿ ಬೆವರು ಪತ್ರಿಕೆ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.

ಸದ್ಯ ಬೆವರು ಪತ್ರಿಕೆಯ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಪ್ರತಿ ತಿಂಗಳು ಪ್ರಕಟವಾಗಲಿದೆ. ಮುಂದಿನ ದಿನಗಳಲ್ಲಿ ತಮಿಳು, ತೆಲುಗು ಸೇರಿದಂತೆ ಇತರೆ ಭಾಷೆಗಳಲ್ಲಿ ಪ್ರಕಟಿಸುವ ಚಿಂತನೆಯಿದೆ. ಈ ಪತ್ರಿಕೆಗೆ ಪೌರಕಾರ್ಮಿಕರು, ಗೃಹ ಕಾರ್ಮಿಕರು, ಲೈಂಗಿಕ ಅಲ್ಪಸಂಖ್ಯಾತರು ಬರೆಯುವಂತೆ ಆ ಸಮುದಾಯದೊಂದಿಗೆ ಕೆಲಸ ಮಾಡುತ್ತಿರುವ ಸಂಘಟನೆಗಳ ಕಾರ್ಯಕರ್ತರು ಪ್ರೇರಣೆ ನೀಡಬೇಕಿದೆ ಎಂದು ಅವರು ಹೇಳಿದರು.

ಗೃಹ ಕಾರ್ಮಿಕ ಮಹಿಳಾ ಸಂಘಟನೆಯ ಪುಷ್ಪಾ ಮಾತನಾಡಿ, ಕೆಲವು ವರ್ಷಗಳ ಹಿಂದೆ ಮನೆ ಕೆಲಸದ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಕನಿಷ್ಟ ಸೌಲಭ್ಯವು ಇರಲಿಲ್ಲ. ಆದರೆ, ಮನೆಕೆಲಸಗಾರರು ಸಂಘಟನೆ ಮಾಡಿಕೊಂಡು ಕಾರ್ಮಿಕರ ಹಕ್ಕುಗಳನ್ನು ತಿಳಿದು ಹೋರಾಟ ನಡೆಸಿದ ನಂತರ ವಾರದ ರಜೆ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯುವಂತಾಯಿತು ಎಂದು ತಿಳಿಸಿದರು.

ಮನೆ ಕೆಲಸ ಮಾಡಬೇಕದರೆ ಲೈಂಗಿಕ ದೌರ್ಜನ್ಯ ಹಾಗೂ ಅಸ್ಪಷ್ಯತೆ ಅನುಭವವಾಗುತ್ತದೆ. ಮನೆ ಕೆಲಸ ಮಾಡಬೇಕಾದರೆ ಕೆಲ ಮನೆಯ ಮಾಲಕ ಕಾಮದ ದೃಷ್ಟಿಯಿಂದ ನೋಡುತ್ತಾರೆ. ನಾವು ಮನೆ ಕೆಲಸ ಮಾಡುವ ಜಾಗದಲ್ಲಿ ಪುರುಷರು ಇರಬಾರದು ಎಂಬ ಕಟ್ಟುನಿಟ್ಟಿನಲ್ಲಿ ಸೂಚನೆಯನ್ನು ಮನೆಯವರಿಗೆ ನೀಡಿದ್ದೇವೆ. ಹಾಗೂ ಮನೆ ಕೆಲಸದವರನ್ನು ಎಲ್ಲರಂತೆ ಸಮಾನವಾಗಿ ಕಾಣುವಂತೆ ಮನೆ ಮಾಲಕರೊಂದಿಗೆ ಹಲವು ಬಾರಿ ಚರ್ಚಿಸಲಾಗಿದೆ. ಹೀಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರೆದಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News