ವೆಲೆನ್ಸಿಯಾ ತಂಡಕ್ಕೆ ಕೊಪಾ ಟ್ರೋಫಿ

Update: 2019-05-26 18:48 GMT

ಸೆವಿಲ್ಲೆ, ಮೇ 26: ಚಾಂಪಿಯನ್ಸ್ ಲೀಗ್ ಕಳಪೆ ನಿರ್ವಹಣೆಯಿಂದ ಹೊರ ಬಂದು ಕೊಪಾ ಡೆಲ್ ರೇ ಟ್ರೋಫಿಯನ್ನು ಜಯಿಸಲು ಬಯಸಿದ್ದ ಬಾರ್ಸಿಲೋನಕ್ಕೆ ವೆಲೆನ್ಸಿಯಾ ತಂಡ ಆಘಾತ ನೀಡಿದೆ.

ಶನಿವಾರ ನಡೆದ ಫೈನಲ್‌ನಲ್ಲಿ ಬಾರ್ಸಿಲೋನವನ್ನು 2-1 ಅಂತರದಿಂದ ಮಣಿಸಿದ ವಲೆನ್ಸಿಯಾ ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿತು. ಸತತ ಐದನೇ ಪ್ರಶಸ್ತಿ ಜಯಿಸುವ ಬಾರ್ಸಿಲೋನದ ಕನಸು ಭಗ್ನಗೊಂಡಿತು. ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ 73ನೇ ನಿಮಿಷದಲ್ಲಿ ಗೋಲು ಗಳಿಸಿದರೂ ಇದರಿಂದ ತಂಡಕ್ಕೆ ಲಾಭವಾಗಲಿಲ್ಲ. ವೆಲೆನ್ಸಿಯಾ ಮೊದಲಾರ್ಧದ ಅಂತ್ಯಕ್ಕೆ 2-0 ಮುನ್ನಡೆ ಪಡೆದು ಉತ್ತಮ ಆರಂಭ ಪಡೆದಿತ್ತು. ಕೆವಿನ್ ಗಾಮೆರೊ 21ನೇ ನಿಮಿಷದಲ್ಲಿ ಗೋಲು ಗಳಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. ರೊಡ್ರಿಗೊ 33ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಮುನ್ನಡೆಯನ್ನು ಇಮ್ಮಡಿಗೊಳಿಸಿದರು.

30 ಬಾರಿ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿರುವ ಬಾರ್ಸಿಲೋನ ತಂಡದಲ್ಲಿ ಫಾರ್ವರ್ಡ್ ಆಟಗಾರ ಲೂಯಿಸ್ ಸುಯರೆಝ್ ಅನುಪಸ್ಥಿತಿ ಎದ್ದು ಕಂಡಿತು. ಸುಯರೆಝ್ ಪ್ರಸ್ತುತ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.

ವೆಲೆನ್ಸಿಯಾ 2008ರ ಬಳಿಕ ಮೊದಲ ಬಾರಿ ಟ್ರೋಫಿ ಜಯಿಸಿ ಇತಿಹಾಸ ನಿರ್ಮಿಸಿತು.

‘‘ನಾವು ಇತಿಹಾಸ ನಿರ್ಮಿಸಿದ್ದೇವೆ. ಕಠಿಣ ಪರಿಸ್ಥಿತಿಯಲ್ಲಿ ನಿಕಟ ಪೈಪೋಟಿ ನೀಡಿದ್ದೇವೆ. ನಮ್ಮ ಗೆಲುವನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ’’ ಎಂದು ವೆಲೆನ್ಸಿಯಾ ನಾಯಕ ಡ್ಯಾನಿ ಪರೆಜೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News