ಕೋಚ್‌ರಿಂದ ಒಡೆದು ಆಳುವ ನೀತಿ: ಭಾರತದ ಮಹಿಳಾ ಫುಟ್ಬಾಲ್ ತಂಡದಿಂದ ದೂರ ಸರಿದ 7 ಆಟಗಾರ್ತಿಯರು

Update: 2019-05-26 18:50 GMT

ಹೊಸದಿಲ್ಲಿ, ಮೇ 26: ಮಣಿಪುರದ ಏಳು ಮಂದಿ ಆಟಗಾರ್ತಿಯರು ಕಳೆದ 5 ತಿಂಗಳುಗಳಿಂದ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ತಂಡದಲ್ಲಿ ಆಡದೇ ದೂರ ಉಳಿದಿದ್ದಾರೆ. ಮುಖ್ಯ ಕೋಚ್ ಹಾಗೂ ಸಹಾಯಕ ಕೋಚ್ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿರುವ ಬಾಲಾದೇವಿ, ಯಮ್‌ನಮ್ ಕಮಲಾದೇವಿ, ಮಾರ್ಗರೆಟ್ ದೇವಿ, ಕಾಶ್ಮಿನಾ ಎಂ.ಎಸ್, ಉಮಾಪತಿ ದೇವಿ, ಪಂಥೊಯ್ ಚಾನು ಹಾಗೂ ರಂಜಿಬಾಲಾದೇವಿ ರಾಷ್ಟ್ರೀಯ ತಂಡವನ್ನು ಬಹಿಷ್ಕರಿಸಿದ್ದಾರೆ.

ಅಖಿಲ ಭಾರತ ಫುಟ್ಬಾಲ್ ಒಕ್ಕೂಟಕ್ಕೆ (ಎಐಎಫ್‌ಎಫ್)ಪತ್ರ ಬರೆದಿರುವ ಆಟಗಾರ್ತಿಯರು ಮುಖ್ಯ ಕೋಚ್ ಮೇಮೊಲ್ ರಾಕಿ ಹಾಗೂ ಸಹಾಯಕ ಕೋಚ್ ಚಯೊಬಾ ದೇವಿ ವಿರುದ್ಧ ದೂರು ಸಲ್ಲಿಸಿದ್ದಾರೆ. ತಮ್ಮ ಬಂಡಾಯಕ್ಕೆ ಕಾರಣ ಹಾಗೂ ರಾಷ್ಟ್ರೀಯ ಶಿಬಿರದಲ್ಲಿ ತಾವು ಎದುರಿಸಿದ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ. ಎಐಎಫ್‌ಎಫ್ ಆಟಗಾರ್ತಿಯರ ಪತ್ರಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

 ‘‘ರಾಷ್ಟ್ರೀಯ ತಂಡದ ಹೆಡ್ ಕೋಚ್ ಹಾಗೂ ಅಸಿಸ್ಟೆಂಟ್ ಕೋ, ತಂಡವನ್ನು ಒಟ್ಟುಗೂಡಿಸಲು ಅಸಮರ್ಥರಾಗಿದ್ದಾರೆ. ಅದರ ಬದಲಿಗೆ ಒಡೆದು ಆಳುವ ನೀತಿ ಅನುಸರಿಸುವ ಮೂಲಕ ಶಿಬಿರ ಹಾಗೂ ತಂಡದಲ್ಲಿ ಪ್ರತಿಕೂಲ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ’’ ಎಂದು ಆಟಗಾರ್ತಿಯರು ಪತ್ರದಲ್ಲಿ ಬರೆದಿದ್ದಾರೆ.

 ಆಟಗಾರ್ತಿಯರಿಗೆ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸುವಂತೆ ಕೋಚ್ ತಿಳಿಸಿದ್ದರು. ಶಿಬಿರವನ್ನು ಬಹಿಷ್ಕರಿಸಿದ ಆಟಗಾರ್ತಿಯರ ಸಮಸ್ಯೆಗೆ ನಾವು ಹೊಣೆಯಲ್ಲ ಎಂದು ಎಐಎಫ್‌ಎಫ್ ತಿಳಿಸಿದೆ.

 ‘‘ಎಐಎಫ್‌ಎಫ್ ನಮಗಾಗಿ ಸಮಸ್ಯೆ ತಂದುಕೊಳ್ಳಲು ಸಿದ್ಧವಿಲ್ಲ. ನಾವು ದೂರು ನೀಡಿದಾಗ, ನಮ್ಮ ಪ್ರದರ್ಶನ ಕಳಪೆಯಾಗಿದೆ. ಹೀಗಾಗಿ ದೂರು ನೀಡಿದ್ದಾರೆಂದು ಎಐಎಫ್‌ಎಫ್ ಭಾವಿಸಿದೆ. ನಾವೆಲ್ಲರೂ ಸೌಹಾರ್ದಯುತ ತಂಡವನ್ನು ನಿರೀಕ್ಷಿಸುತ್ತಿದ್ದೇವೆ. ಮಹಿಳಾ ಫುಟ್ಬಾಲ್ ಬೆಳವಣಿಗೆಗೆ ವಿದೇಶಿ ಹಾಗೂ ಭಾರತೀಯ ಕೋಚ್‌ಗಳ ಅಗತ್ಯವಿದೆ. ಪುರುಷರಿಗೆ ಶೇ.50ರಷ್ಟು ಸೌಲಭ್ಯ ನೀಡಲಾಗುತ್ತಿದೆ. ಮಹಿಳಾ ತಂಡಕ್ಕೆ ಕನಿಷ್ಠ ಶೇ.15ರಷ್ಟು ವ್ಯವಸ್ಥೆ ನೀಡಬೇಕೆಂದು ಆಟಗಾರ್ತಿಯೊಬ್ಬರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News