ಕೆಎಎಸ್ ಅಧಿಕಾರಿಗಳ ಸೇವಾ ಭದ್ರತೆಗಾಗಿ ವಿಶೇಷ ವಿಧೇಯಕ: ಸಚಿವ ಕೃಷ್ಣಭೈರೇಗೌಡ

Update: 2019-05-27 14:38 GMT

ಬೆಂಗಳೂರು, ಮೇ 27: 1998ನೆ ಸಾಲಿನಲ್ಲಿ ಕೆಪಿಎಸ್ಸಿ ಮೂಲಕ ನೇಮಕಗೊಂಡ ಕೆಎಎಸ್ ಅಧಿಕಾರಿಗಳ ಪರಿಷ್ಕೃತ ಆಯ್ಕೆ ಪಟ್ಟಿಯಿಂದ ಹಲವು ಅಧಿಕಾರಿಗಳಿಗೆ ಸೇವಾ ಭದ್ರತೆ ಸಿಗದೇ ಇರುವ ಕಾರಣ, ಅವರಿಗೆ ಸೇವಾ ಭದ್ರತೆ ಒದಗಿಸಲು ಸರಕಾರ ವಿಶೇಷ ವಿಧೇಯಕ ಜಾರಿಗೆ ತರಲು ತೀರ್ಮಾನಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, Karnataka Civil Services (Protection of Service of Persons appionted in pursuance to final selection list Published by Selection authority) Ordinance 2019 ಅನ್ನು ಜಾರಿಗೆ ತರಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದರು.

ಹೈಕೋರ್ಟ್ ಆದೇಶದನ್ವಯ ನಡೆದುಕೊಂಡರೆ 28 ಅಧಿಕಾರಿಗಳನ್ನು ಹುದ್ದೆಯಿಂದ ತೆಗೆದು ಹಾಕಬೇಕಾಗುತ್ತದೆ. ಅಲ್ಲದೆ, 115 ಅಧಿಕಾರಿಗಳು ಸೇವಾ ಬದಲಾವಣೆಗೆ ಒಳಗಾಗಬೇಕಾಗುತ್ತದೆ. ಇವರಿಗೆ ಸೇವಾ ಭದ್ರತೆ ಒದಗಿಸಲು ಈ ವಿಧೇಯಕವನ್ನು ತರಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ಸಂಪುಟ ಸಭೆಯಲ್ಲಿ ಆಪರೇಷನ್ ಕಮಲ ಸದ್ದು: ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ, ರಾಜ್ಯದಲ್ಲಿ ಸರಕಾರ ರಚನೆ ಮಾಡುವ ಆಸೆಯನ್ನು ಇನ್ನು ಕೈ ಬಿಟ್ಟಿಲ್ಲ ಎಂಬ ವಿಷಯವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ.

ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿಯವರು ಪದೇ ಪದೇ ಪ್ರಯತ್ನಪಟ್ಟು, ವಿಫಲವಾಗಿದ್ದಾರೆ. ಆದರೆ, ಈ ಬಾರಿ ಮಾತ್ರ ಅತ್ಯಂತ ವ್ಯವಸ್ಥಿತವಾಗಿ ಶಾಸಕರನ್ನು ಯೋಜನೆ ಸಿದ್ಧಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ನಾವು ನಿರ್ಲಕ್ಷಿಸಬಾರದು ಎಂದು ಸಚಿವರಿಗೆ ಅವರು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಸರಕಾರವನ್ನು ಉಳಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ನಮ್ಮ ಶಾಸಕರನ್ನು ರಕ್ಷಣೆ ಮಾಡಿಕೊಳ್ಳಲೇಬೇಕಿದೆ. ನಮ್ಮ ಕೆಲವು ಶಾಸಕರು ಅವರ ಸಂಪರ್ಕದಲ್ಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ನಾನು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಜೊತೆ ಮಾತನಾಡಿದ್ದೇನೆ. ಅವರು ಪಕ್ಷದಲ್ಲೇ ಇರುವುದಾಗಿ ಹೇಳಿದ್ದಾರೆ. ಉಳಿದವರನ್ನು ಸಂಪರ್ಕಿಸುತ್ತಿದ್ದೇನೆ. ಅವರನ್ನ ಮನವೊಲಿಸುವ ಕೆಲಸ ಮಾಡುತ್ತಿದ್ದೇನೆ ಕುಮಾರಸ್ವಾಮಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News