ದೇವೇಗೌಡ-ದಿನೇಶ್ ಗುಂಡೂರಾವ್ ಸಮಾಲೋಚನೆ
ಬೆಂಗಳೂರು, ಮೇ 27: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಹತ್ವದ ಮಾತುಕತೆ ನಡೆಸಿದ್ದಾರೆ.
ಸೋಮವಾರ ಇಲ್ಲಿನ ಪದ್ಮನಾಭ ನಗರದ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿದ ದಿನೇಶ್ ಗುಂಡೂರಾವ್ ಚುನಾವಣೆಯಲ್ಲಿ ಸೋಲಿನ ಪರಾಮರ್ಶೆ, ಬಂಡಾಯ ಶಾಸಕರ ಮನವೊಲಿಕೆ ಹಾಗೂ ಆಪರೇಷನ್ ಕಮಲದ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಕಾಂಗ್ರೆಸ್-ಜೆಡಿಎಸ್‌ನ ಮುಖಂಡರು ಹಾಗೂ ಕಾರ್ಯಕರ್ತರು ಗೊಂದಲ ಮತ್ತು ಮೈತ್ರಿ ಸರಕಾರಕ್ಕೆ ಮುಜುಗರ ಸೃಷ್ಟಿಸುವಂತಹ ಯಾವುದೇ ಹೇಳಿಕೆ ನೀಡದಂತೆ ನಿರ್ದೇಶನ ನೀಡಬೇಕು. ಜತೆಗೆ ಮೈತ್ರಿ ಸರಕಾರ ಇನ್ನೂ ನಾಲ್ಕು ವರ್ಷಗಳ ಕಾಲ ಸುಭ್ರದವಾಗಿ ಆಡಳಿತ ನಡೆಸಲು ಅನುಕೂಲ ಆಗುವ ಸಂಬಂಧ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಪರೇಷನ್ ಭೀತಿ ಇಲ್ಲ: ನಮಗೆ ಯಾವುದೇ ಆಪರೇಷನ್ ಕಮಲದ ಭೀತಿ ಇಲ್ಲ. ರಮೇಶ್ ಜಾರಕಿಹೊಳಿ, ಡಾ.ಸುಧಾಕರ್ ಅವರು ಬಿಜೆಪಿ ನಾಯಕರ ನಿವಾಸಕ್ಕೆ ಭೇಟಿ ಕೊಟ್ಟ ವಿಚಾರದ ಕುರಿತು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಸಂಪುಟ ಪುನಾರಚನೆ ಸಂಬಂಧ ಚರ್ಚೆ ನಡೆದಿದೆ. ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಅವಕಾಶ ವಂಚಿತರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕಿದೆ ಎಂದ ಅವರು, ಮೈತ್ರಿ ಸರಕಾರ ಅಸ್ಥಿರಕ್ಕೆ ಬಿಜೆಪಿ ನಿರಂತರ ಪ್ರಯತ್ನ ನಡೆಸಿದ್ದು, ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಸರಕಾರ ಸುಭದ್ರವಾಗಿದೆ ಎಂದರು.
ಪಕ್ಷದ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಮೈತ್ರಿ ಸರಕಾರ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂಬುದು ನಮ್ಮ ಇಚ್ಛೆ. ರಾಜ್ಯದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಪರಿಹಾರಕ್ಕೆ ಗಮನಹರಿಸಬೇಕಿದೆ. ಹೀಗಾಗಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮೇ 29ಕ್ಕೆ ಸಿಎಲ್‌ಪಿ ನಡೆಯಲಿದೆ ಎಂದು ಅವರು ತಿಳಿಸಿದರು