ಮಳೆ ಅನಾಹುತ ತಡೆಯಲು ಮುನ್ನೆಚ್ಚರಿಕೆ ವಹಿಸಿ: ಅಧಿಕಾರಿಗಳಿಗೆ ಡಿಸಿಎಂ ಡಾ.ಜಿ.ಪರಮೇಶ್ವರ್ ಸೂಚನೆ

Update: 2019-05-27 15:20 GMT

ಬೆಂಗಳೂರು, ಮೇ 27: ಸಂಭಾವ್ಯ ಮಳೆ ಅನಾಹುತದ ಬಗ್ಗೆ ತೆಗೆದುಕೊಂಡ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮದ ಕುರಿತು ಹಿರಿಯ ಅಧಿಕಾರಿಗಳ ಜೊತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸೋಮವಾರ ವಿಕಾಸಸೌಧದಲ್ಲಿ ಸಭೆ ನಡೆಸಿದರು.

ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆಗಮನವಾಗುತ್ತಿದ್ದು, ಮಳೆ ಎದುರಿಸಲು ನಗರ ಸಜ್ಜಾಗಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಪಡೆದರು. ರಸ್ತೆ ಗುಂಡಿ ಮುಚ್ಚುವುದು, ಒಳಚರಂಡಿ, ರಾಜಕಾಲುವೆಗಳಲ್ಲಿ ಪ್ರವಾಹ ಆಗದ ರೀತಿ, ತಗ್ಗು ಪ್ರದೇಶದಲ್ಲಿ ಪ್ರವಾಹ ಆಗದಂತೆ ಏನೆಲ್ಲಾ ಮುನ್ನಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಪ್ರಶ್ನಿಸಿದರು.

ಮಳೆಗಾಲದಲ್ಲಿ ಉಂಟಾಗುವ ರಸ್ತೆ ಗುಂಡಿ ಮುಚ್ಚಲು ಪ್ರೀಮಿಕ್ಸ್ ಅನ್ನು ತಮಿಳುನಾಡಿನಿಂದ ತರಿಸಲಾಗಿದ್ದು, ಇದರಿಂದ ಮುಚ್ಚುವ ಗುಂಡಿ ಕನಿಷ್ಠ ಒಂದು ವರ್ಷಗಳ ಕಾಲ ಬಾಳಿಕೆ ಬರಲಿದೆ. ಮಳೆ ಸಂದರ್ಭದಲ್ಲಿಯೂ ಈ ಪ್ರೀ ಮಿಕ್ಸ್ ಹಾಕಲು ಯೋಗ್ಯವಾಗಿದೆ. ರಾಜಕಾಲುವೆಯಲ್ಲಿ ಹೂಳು ತೆಗೆಯುವ ಕೆಲಸ ಬಹುತೇಕ ಪೂರ್ಣವಾಗಿದೆ. ಜೊತೆಗೆ ಈ ಭಾಗದಲ್ಲಿ ಪ್ರವಾಹವಾಗದಂತೆ ತಡೆಯಲು ಸೆನ್ಸಾರ್ ಅಳವಡಿಸುವುದು, ತಡೆಗೋಡೆ ನಿರ್ಮಾಣ ಕೆಲಸ ಕೂಡ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರಾಜಕಾಲುವೆಗಳಿಗೆ ಕಸ ಹಾಕುವವರ ಮೇಲೆ ಎಫ್‌ಐಆರ್ ದಾಖಲಿಸಿರುವ ಬಗ್ಗೆಯೂ ಮಾಹಿತಿ ನೀಡಿದರು. ಇಂತಹ ಕ್ರಮ ಹೆಚ್ಚು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ ಪರಮೇಶ್ವರ್, ಕೆಲ ರಸ್ತೆಗಳಲ್ಲಿ ಕಸದಿಂದ ಬ್ಲಾಕೇಜ್ ಆಗಿ, ರಸ್ತೆಯಲ್ಲೇ ನೀರು ನಿಲ್ಲುವ ಸ್ಥಿತಿ ಇದ್ದು, ಈ ಬಗ್ಗೆ ಎಚ್ಚರ ವಹಿಸಿ, ಕಸವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸೂಚಿಸಿದರು. ಆಗಿಂದಾಗಿ ರಸ್ತೆಗಳ ನಿರ್ವಹಣೆ, ನೀರು ನಿಲ್ಲದಂತೆ ಸಂಬಂಧಪಟ್ಟ ಅಧಿಕಾರಿಗಳು ನಿರ್ವಹಣೆ ಮಾಡಬೇಕು. ಬಿಬಿಎಂಪಿ ಸಹಾಯವಾಣಿ ಹಾಗೂ ಸಾಮಾಜಿಕ ಜಾಲತಾಣ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.

ಮುಂಗಾರು ಮಳೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಸ್ಕಾಂ ಬಹುತೇಕ ಹಳೇ ಲೈನ್‌ಗಳನ್ನು ಬದಲಿಸಬೇಕು. ಜೊತೆಗೆ ಪವರ್ ಎಕ್ಸ್‌ಟೆನ್ಷನ್ ಬಳಿ ಮನೆ ನಿರ್ಮಿಸದಂತೆಯೂ ಕ್ರಮ ಕೈಗೊಳ್ಳಬೇಕು. ಈಗಾಗಲೇ ಎಕ್ಸ್‌ಟೆನ್ಷನ್ ಬಳಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸಬೇಕಿದೆ. ಈ ಬಗ್ಗೆ ಜನರು ಎಚ್ಚೆತ್ತುಕೊಂಡು ಅನಧಿಕೃತವಾಗಿ ಮನೆ ನಿರ್ಮಿಸುವುದು ಕಡಿಮೆಯಾಗಲಿದೆ ಎಂದು ಅವರು ಹೇಳಿದರು.

ಕಳೆದೆರಡು ದಿನಗಳಿಂದ ಮಳೆಯಾಗುತ್ತಿರುವುದರಿಂದ 34 ಸಾವಿರ ಕರೆಗಳು ಬೆಸ್ಕಾಂ ಸಹಾಯವಾಣಿಗೆ ಬಂದಿದ್ದು, ಬಹುತೇಕ ದೂರುಗಳನ್ನು ಪರಿಹರಿಸಲಾಗಿದೆ. ಪ್ರಸ್ತುತ 45 ಸಹಾಯವಾಣಿ ಕೇಂದ್ರ ಕೆಲಸ ನಿರ್ವಹಿಸುತ್ತಿದ್ದು, 20 ಹೆಚ್ಚುವರಿ ಕೇಂದ್ರವನ್ನು ತೆರೆಯಲು ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ವಿದ್ಯುತ್ ತಂತಿಗಳನ್ನು ಮುಟ್ಟದ ರೀತಿಯಲ್ಲಿ ಜಾಗೃತಿ ಮೂಡಿಸುವ ಸಂಬಂಧ ಯೋಜನೆ ಹಾಕಿಕೊಂಡಿದ್ದು, ವಿದ್ಯುತ್ ಬಿಲ್ ಜೊತೆ ಭಿತ್ತಿ ಪತ್ರವನ್ನು ಹಂಚಲಾಗುತ್ತಿದೆ. ಮಕ್ಕಳಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಶಾಲೆಗಳಲ್ಲಿ ಪ್ರಬಂಧ, ಚಿತ್ರಕಲೆ ಮೂಲಕ ಸ್ಪರ್ಧೆ ಏರ್ಪಡಿಸಿ, ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು. ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ಸಾಕಷ್ಟು ಹಾನಿ ಉಂಟಾಗಿದ್ದು ಈ ಬಗ್ಗೆ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ನೆಲಕ್ಕುರುಳಿದ ಮರಗಳ ತೆರವು, ವಿದ್ಯುತ್ ತಂತಿ ಬದಲು ಕೆಲಸ ಶೀಘ್ರ ಆಗಬೇಕು. ಜೊತೆಗೆ ಸಾರ್ವಜನಿಕರ ದೂರಿಗೆ ಸಹಾಯವಾಣಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಪರಮೇಶ್ವರ್ ಸೂಚನೆ ನೀಡಿದರು.

ವಿಜಯನಗರ, ಮಲ್ಲೇಶ್ವರ ಸೇರಿದಂತೆ ಹಲವೆಡೆ ಮರಗಳು ನೆಲಕ್ಕುರುಳಿದ್ದು, ಅದರ ತೆರವಿನ ಕೆಲಸ ಶೀಘ್ರ ಆಗುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಪರಮೇಶ್ವರ್, 8 ವಲಯಗಳ ಜಂಟಿ ಆಯುಕ್ತರು ಮಳೆಗಾಲದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು. ಎಲ್ಲಿಯೂ ಮಳೆ ನೀರು ನಿಲ್ಲುವುದು, ರಸ್ತೆಗುಂಡಿ, ಪ್ರವಾಹ, ಕಸದ ಸಮಸ್ಯೆ ಎದುರಾದರೆ ಇದಕ್ಕೆ ನಿಮ್ಮನ್ನೆ ಹೊಣೆ ಮಾಡಲಾಗುವುದು. ಮಳೆಗಾಲವನ್ನು ಸಮರ್ಪಕವಾಗಿ ನಿಭಾಯಿಸಲು ನೇಮಿಸಿರುವ ತಂಡಗಳು ಸೂಕ್ತ ರೀತಿ ಕೆಲಸ ಮಾಡುವಂತೆಯೂ ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದರು.

ಸಭೆಯಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್, ಬೆಂಗಳೂರು ಜಲ ಮಂಡಳಿ ಮುಖ್ಯಸ್ಥ ತುಷಾರ್ ಗಿರಿನಾಥ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

5 ಸಾವಿರ ಕೋಟಿ ವೆಚ್ಚದಲ್ಲಿ ನೆಲದಡಿ ವಿದ್ಯುತ್ ಕೇಬಲ್

ದಿನನಿತ್ಯ ಸುರಿಯುತ್ತಿರುವ ಮಳೆ, ಗಾಳಿಯಿಂದಾಗಿ ನೂರಾರು ಮರಗಳು ನೆಲಕ್ಕುರಳಿವೆ. ಇದರ ಪರಿಣಾಮ, ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿ ಉಂಟಾಗಿದೆ. ವಿದ್ಯುತ್ ಕಂಬಗಳು ಮುರಿದ ಬಿದ್ದ ಪರಿಣಾಮ ಕೇಬಲ್ ತಂತಿ ತುಂಡಾಗಿ ರಸ್ತೆಗೆ ಬಿದ್ದು ಸಾವು-ನೋವು ಸಂಭವಿಸಿದ ಘಟನೆಗಳು ನಡೆದಿವೆ. ಹೀಗಾಗಿ, ಶಾಶ್ವತ ಪರಿಹಾರಕ್ಕೆ ಮುಂದಾಗಿರುವ ರಾಜ್ಯ ಸರಕಾರವು, 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ನೆಲದಡಿ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ಆರಂಭಿಸಲಾಗುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಬೆಸ್ಕಾಂನ 11 ವಿಭಾಗಗಳಲ್ಲಿ ಮೊದಲ ಹಂತದ ಕಾಮಗಾರಿ ಆರಂಭವಾಗಲಿದೆ.

-ಡಾ.ಜಿ.ಪರಮೇಶ್ವರ್, ಬೆಂಗಳೂರು ನಗರಾಭಿವೃದ್ಧಿ ಸಚಿವ

ಶನಿವಾರ-ಭಾನುವಾರ ಉರುಳಿದ ಮರಗಳ ವಿವರ

ವಲಯ-ಮರ-ಮರದ ಕೊಂಬೆ

ದಕ್ಷಿಣ-   28-   359

ಪೂರ್ವ-  27- 169

ಪಶ್ಚಿಮ  15 -135

ಆರ್.ಆರ್.ನಗರ -7-  9

ಬೊಮ್ಮನಹಳ್ಳಿ  7 10

ಯಲಹಂಕ  5 - 2

ದಾಸರಹಳ್ಳಿ 2- 4

ಮಹದೇವಪುರ  10- 10

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News