ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಮನವೊಲಿಕೆಗೆ ‘ಕುಮಟಳ್ಳಿ ರಾಯಭಾರ’

Update: 2019-05-27 15:32 GMT

ಬೆಂಗಳೂರು, ಮೇ 27: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಬಂಡಾಯ ಸಾರಿರುವ ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ ಮನವೊಲಿಕೆಗೆ ಅವರ ಆಪ್ತ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮೂಲಕ ಸಿಎಂ ಕುಮಾರಸ್ವಾಮಿ ಕಸರತ್ತು ನಡೆಸಿದ್ದಾರೆ.

ಸೋಮವಾರ ವಿಧಾನಸೌಧದ ಆವರಣದಲ್ಲಿನ ಉದ್ಯಾನವನದಲ್ಲಿ ಮಹೇಶ್ ಕುಮಟಳ್ಳಿ ಅವರನ್ನು ಕರೆಸಿಕೊಂಡ ಸಿಎಂ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಮಾಲೋಚನೆ ನಡೆಸಿದ್ದು, ರಮೇಶ್ ಜಾರಕಿಹೊಳಿ ಅವರ ಮನವೊಲಿಸಿ ಎಂದು ಕೋರಿದ್ದಾರೆಂದು ಗೊತ್ತಾಗಿದೆ.

ಮೊದಲಿಗೆ ರಮೇಶ್ ಜಾರಕಿಹೊಳಿ ಅವರೊಂದಿಗೆ ಸಮಾಲೋಚನೆ ನಡೆಸಿದ ಮಹೇಶ್ ಕುಮಟಳ್ಳಿ, ಆ ಬಳಿಕ ಮುಖ್ಯಮಂತ್ರಿ, ಡಿಸಿಎಂ ಜತೆ ಚರ್ಚಿಸಿದರು. ಅನಂತರ ರಮೇಶ್ ಜಾರಕಿಹೊಳಿಗೆ ನಿವಾಸಕ್ಕೆ ಹೋಗಿ ಅವರೊಂದಿಗೆ ಚರ್ಚಿಸಿದರು. ಅನಂತರ ಆ ಎಲ್ಲ ವಿಚಾರಗಳನ್ನು ಸಿಎಂಗೆ ತಿಳಿಸಿದರು ಎಂದು ತಿಳಿದು ಬಂದಿದೆ.

ನಾನು ಆಕಾಂಕ್ಷಿಯಲ್ಲ: ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ. ಯಾವುದೇ ಆಮಿಷಗಳಿಗೂ ನಾನು ಒಳಗಾಗಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಯೂ ನಾನಲ್ಲ ಎಂದು ಶಾಸಕ ಮಹೇಶ್ ಕುಮಟಳ್ಳಿ ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಆಪರೇಷನ್ ಕಮಲದ ಬಗ್ಗೆ ನನಗೇನೂ ಗೊತ್ತಿಲ್ಲ. ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ. ಇದ್ದರೆ ಎಲ್ಲವನ್ನೂ ಪಕ್ಷದ ವೇದಿಕೆಯಲ್ಲಿ ಸರಿಪಡಿಸಿಕೊಳ್ಳುತ್ತೇವೆ. ರಮೇಶ್ ಜಾರಕಿಹೊಳಿ ಅವರು ಪಕ್ಷ ಬಿಡುವುದಿಲ್ಲ ಎಂದರು. ನಾನು, ರಮೇಶ್ ಜಾರಕಿಹೊಳಿ ಜತೆ ನಂಟು ಹೊಂದಿದ್ದೇನೆ. ಹಾಗೆಂದು ನಾನು ಬಂಡಾಯದ ಕಹಳೆ ಊದಿಲ್ಲ. ಎಲ್ಲ ಶಾಸಕರ ಜತೆಗೂ ಸ್ನೇಹದಿಂದ ಇರುತ್ತೇನೆ ಎಂದ ಅವರು, ನಿಗಮ ಮಂಡಳಿ ಅಧ್ಯಕ್ಷ ಅಥವಾ ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದು ಪ್ರತಿಕ್ರಿಯೆ ನೀಡಿದರು.

‘ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪದಲ್ಲಿದೆ. ಹೀಗಾಗಿ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಶೀಘ್ರದಲ್ಲೆ ನೀರು ಬಿಡುಗಡೆ ಸಂಬಂಧ ಸರಕಾರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’

-ಮಹೇಶ್ ಕುಮಟಳ್ಳಿ, ಅಥಣಿ ಕ್ಷೇತ್ರದ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News