ಹೊಟ್ಟೆಯಲ್ಲಿ 246 ಕೊಕೇನ್ ಪೊಟ್ಟಣ ಸಾಗಾಟ: ವಿಮಾನದಲ್ಲೇ ಪ್ರಯಾಣಿಕ ಮೃತ್ಯು

Update: 2019-05-29 00:47 GMT

ಮೆಕ್ಸಿಕೊ ಸಿಟಿ (ಮೆಕ್ಸಿಕೊ), ಮೇ 28: ತನ್ನ ಹೊಟ್ಟೆ ಮತ್ತು ಕರುಳಿನಲ್ಲಿ 246 ಕೊಕೇನ್ ಪೊಟ್ಟಣಗಳನ್ನು ಸಾಗಿಸುತ್ತಿದ್ದ ಜಪಾನ್ ವ್ಯಕ್ತಿಯೊಬ್ಬ, ಕೊಲಂಬಿಯ ದೇಶದ ರಾಜಧಾನಿ ಬೊಗೊಟದಿಂದ ಟೋಕಿಯೊಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮೃತಪಟ್ಟ ಘಟನೆಯೊಂದು ವರದಿಯಾಗಿದೆ.

42 ವರ್ಷದ ವ್ಯಕ್ತಿ ವಿಮಾನದಲ್ಲೇ ಕೊನೆಯುಸಿರೆಳೆದ ಹಿನ್ನೆಲೆಯಲ್ಲಿ ವಿಮಾನವು ಉತ್ತರ ಮೆಕ್ಸಿಕೊದಲ್ಲಿ ತುರ್ತು ಭೂಸ್ಪರ್ಶ ನಡೆಸಿತು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.

ಆ ವ್ಯಕ್ತಿಯು ಬೊಗೊಟದಿಂದ ಮೆಕ್ಸಿಕೊ ಸಿಟಿಗೆ ಪ್ರಯಾಣಿಸುತ್ತಿದ್ದನು. ಅಲ್ಲಿಂದ ಟೋಕಿಯೊಗೆ ಇನ್ನೊಂದು ವಿಮಾನವನ್ನು ಹಿಡಿಯಬೇಕಾಗಿತ್ತು.

‘‘ಪ್ರಯಾಣಿಕನೊಬ್ಬ ತೀವ್ರ ಅಸ್ವಸ್ಥಗೊಂಡಿರುವುದನ್ನು ವಿಮಾನ ಪರಿಚಾರಕರು ಗಮನಿಸಿದರು ಹಾಗೂ ಮೆಕ್ಸಿಕೊ ದೇಶದ ಸೊನೊರ ರಾಜ್ಯದ ಹೆರ್ಮೊಸಿಲೊ ಎಂಬ ನಗರದಲ್ಲಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ಕೋರಿದರು’’ ಎಂದು ಸೊನೊರ ರಾಜ್ಯದ ಪ್ರಾಸಿಕ್ಯೂಟರ್ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವಿಮಾನ ಭೂಸ್ಪರ್ಶ ಮಾಡುವ ಹೊತ್ತಿಗೆ ಆ ವ್ಯಕ್ತಿಯು ಮರಣ ಹೊಂದಿದ್ದನು. ಮರಣೋತ್ತರ ಪರೀಕ್ಷೆಯಲ್ಲಿ, ಆತ ಮಾದಕ ದ್ರವ್ಯ ಕೊಕೇನ್‌ನ 246 ಪೊಟ್ಟಣಗಳನ್ನು ನುಂಗಿರುವುದು ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News