ಲಂಕೆಯ ವಿಶ್ವ ವಿಜಯಕ್ಕೆ ನೆರವಾದ ಸನತ್ ಜಯಸೂರ್ಯ

Update: 2019-05-29 06:39 GMT

ಲಂಡನ್, ಮೇ 28: ಶ್ರೀಲಂಕಾ ತಂಡ 1996ರಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ವಿಶ್ವಕಪ್ ಎತ್ತಿದ್ದು ಈಗ ಇತಿಹಾಸ. ಸನತ್ ಜಯಸೂರ್ಯ ನಾಲ್ಕು ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಜಯಸೂರ್ಯ ಎರಡರಲ್ಲಿ ಬ್ಯಾಟಿಂಗ್‌ನಲ್ಲಿ, ಒಂದರಲ್ಲಿ ಬೌಲಿಂಗ್ ಮತ್ತು ಇನ್ನೊಂದರಲ್ಲಿ ಆಲ್‌ರೌಂಡ್ ಪ್ರದರ್ಶನದ ಮೂಲಕ ಶ್ರೀಲಂಕಾ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು.

ದಿಲ್ಲಿಯಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಜಯಸೂರ್ಯ 76 ಎಸೆತಗಳಲ್ಲಿ 79 ರನ್ ಸೇರಿಸಿ ಲಂಕೆಯ ಗೆಲುವಿಗೆ 272 ರನ್‌ಗಳ ಸವಾಲನ್ನು ಬೆನ್ನಟ್ಟುವಲ್ಲಿ ನೆರವಾಗಿದ್ದರು. ಇನಿಂಗ್ಸ್ ಆರಂಭಿಸಿದ ಜಯಸೂರ್ಯ ಮತ್ತು ರೊಮೇಶ್ ಕಲುವಿತರಣ ಮೊದಲ 3 ಓವರ್‌ಗಳಲ್ಲಿ 42 ರನ್ ಸಿಡಿಸಿದರು. ಜಯಸೂರ್ಯರ ವೈಯಕ್ತಿಕ ಸ್ಕೋರ್‌ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿತ್ತು. ಕ್ಯಾಂಡಿಯಲ್ಲಿ ಕೀನ್ಯ ವಿರುದ್ಧ 27 ಎಸೆತಗಳಲ್ಲಿ 44 ರನ್ ಗಳಿಸಿದ್ದರು. ಮೊದಲ ವಿಕೆಟ್‌ಗೆ ಕಲುವಿತರಣ ಜೊತೆ 83 ರನ್‌ಗಳ ಜೊತೆಯಾಟ ನೀಡಿದ್ದರು. ಶ್ರೀಲಂಕಾ 5 ವಿಕೆಟ್ ನಷ್ಟದಲ್ಲಿ 398 ರನ್ ಗಳಿಸಿತ್ತು. ಇದು ತಂಡದ ಗರಿಷ್ಠ ಸ್ಕೋರ್ ಆಗಿದೆ.

ಫೈಸಲಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಜಯಸೂರ್ಯ ಉತ್ತಮ ಪ್ರದರ್ಶನ ನೀಡಿದರು. 2 ವಿಕೆಟ್ ಉಡಾಯಿಸಿ ಇಂಗ್ಲೆಂಡ್ ತಂಡವನ್ನು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 235ಕ್ಕೆ ನಿಯಂತ್ರಿಸಲು ನೆರವಾಗಿದ್ದರು. ಬಳಿಕ ಅವರು 82 ರನ್‌ಗಳ ಕೊಡುಗೆ ನೀಡಿ ಇನ್ನೂ 56 ಎಸೆತಗಳು ಬಾಕಿ ಇರುವಾಗಲೇ ಲಂಕೆಗೆ 5 ವಿಕೆಟ್‌ಗಳ ಭರ್ಜರಿ ಗೆಲುವಿಗೆ ನೆರವಾಗಿದ್ದರು.

ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಭಾರತ 252 ರನ್‌ಗಳ ಸವಾಲು ಪಡೆದಿತ್ತು. ಆದರೆ 98ಕ್ಕೆ 1 ವಿಕೆಟ್ ಕಳೆದುಕೊಂಡ ಭಾರತ ಬಳಿಕ ಸ್ಕೋರ್ 120ಕ್ಕೆ ತಲುಪುವಾಗ 8 ವಿಕೆಟ್ ಕಳೆದುಕೊಂಡಿತು. ಭಾರತದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಾಟಲಿಗಳನ್ನು ತೂರಿದರು. ಪಂದ್ಯ ಸ್ಥಗಿತಗೊಂಡಿತು. ಈ ಕಾರಣದಿಂದಾಗಿ ಶ್ರೀಲಂಕಾವನ್ನು ವಿಜಯಿ ಎಂದು ಘೋಷಿಸಲಾಯಿತು. ಸಚಿನ್ ತೆಂಡುಲ್ಕರ್ (65) ಗರಿಷ್ಠ ಸ್ಕೋರ್ ದಾಖಲಿಸಿದ್ದರು. ಸಚಿನ್ ತೆಂಡುಲ್ಕರ್, ಸಂಜಯ್ ಮಾಂಜ್ರೇಕರ್ ಮತ್ತು ಅಜಯ್ ಜಡೇಜ ಅವರನ್ನು ಜಯಸೂರ್ಯ ಪೆವಿಲಿಯನ್‌ಗೆ ಅಟ್ಟಿದ್ದರು.7 ಓವರ್‌ಗಳಲ್ಲಿ 12ಕ್ಕೆ 3 ವಿಕೆಟ್ ಉಡಾಯಿಸಿದ್ದರು.

6 ಇನಿಂಗ್ಸ್ ಗಳಲ್ಲಿ ಜಯಸೂರ್ಯ 221 ರನ್ ಗಳಿಸಿದ್ದರು. ಇದು ಟೂರ್ನಮೆಂಟ್‌ನಲ್ಲಿ ಗರಿಷ್ಠ ಸ್ಕೋರ್ ಆಗಿದೆ. ಅವರು 7 ವಿಕೆಟ್ ಪಡೆದಿದ್ದರು. ಫೈನಲ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿ ಶ್ರೀಲಂಕಾ ಮೊದಲ ಬಾರಿ ಪ್ರಶಸ್ತಿ ಬಾಚಿಕೊಂಡಿತು. ಸನತ್ ಜಯಸೂರ್ಯ ಪ್ಲೇಯರ್ ಆಫ್ ಮ್ಯಾಚ್ ಮತ್ತು ಅರವಿಂದ್ ಡಿ ಸಿಲ್ವ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು,

1999ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯದ ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಆಸ್ಟ್ರೇಲಿಯ ಪ್ರಶಸ್ತಿ ಗೆದ್ದುಕೊಂಡಿತ್ತು. ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಟೈ ಆಗಿದ್ದರೂ, ಆಸ್ಟ್ರೇಲಿಯ ಅದೃಷ್ಟದ ಮೂಲಕ ಫೈನಲ್ ಪ್ರವೇಶಿಸಿತು. ದ.ಆಫ್ರಿಕ ಫೈನಲ್ ತಲುಪುವಲ್ಲಿ ಎಡವಿದ್ದರೂ, ತಂಡದ ಆಟಗಾರ ಲ್ಯಾನ್ಸ್ ಕೂಸ್ನ್ನರ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಶೇನ್ ವಾರ್ನ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು. ಕ್ಲೂಸ್ನರ್ 9 ಪಂದ್ಯಗಳಲ್ಲಿ 281 ರನ್ ಮತ್ತು 17 ವಿಕೆಟ್‌ಗಳನ್ನು ಪಡೆದಿದ್ದರು. ಟೂರ್ನಮೆಂಟ್‌ನಲ್ಲಿ ಕ್ಲೂಸ್ನ್ನರ್ ಗರಿಷ್ಠ ವಿಕೆಟ್‌ಗಳನ್ನು ಗಿಟ್ಟಿಸಿಕೊಂಡಿದ್ದರು.

ಸಚಿನ್ ತೆಂಡುಲ್ಕರ್ ರನ್ ಪ್ರವಾಹ

2003ರಲ್ಲಿ ಆಫ್ರಿಕದಲ್ಲಿ ನಡೆದ ವಿಶ್ವಕಪ್‌ನಲ್ಲಿ ಸಚಿನ್ ತೆಂಡುಲ್ಕರ್ 11 ಇನಿಂಗ್ಸ್‌ಗಳಲ್ಲಿ 61.18 ಸರಾಸರಿಯಂತೆ 673 ರನ್ ಗಳಿಸಿದ್ದರು. ಇದು ವಿಶ್ವಕಪ್ ಒಂದರಲ್ಲಿ ಬ್ಯಾಟ್ಸ್‌ಮನ್ ದಾಖಲಿಸಿದ ಗರಿಷ್ಠ ಸ್ಕೋರ್ ಆಗಿದೆ. ಸಚಿನ್ 1 ಶತಕ ಮತ್ತು 6 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ತೆಂಡುಲ್ಕರ್ ಝಿಂಬಾಬ್ವೆಯ ವಿರುದ್ಧ 91 ಎಸೆತಗಳಲ್ಲಿ 81ರನ್ ಮತ್ತು ನಮೀಬಿಯಾ ವಿರುದ್ಧ 151 ಎಸೆತಗಳಲ್ಲಿ 152 ರನ್ ಗಳಿಸಿದ್ದರು.

ಪಾಕಿಸ್ತಾನ ವಿರುದ್ಧ ಮೂರನೇ ವಿಕೆಟ್‌ಗೆ ಸಚಿನ್ ಮತ್ತು ಮುಹಮ್ಮದ್ ಕೈಫ್ 102 ರನ್‌ಗಳ ಜೊತೆಯಾಟ ನೀಡಿದ್ದರು. ಸಚಿನ್ 77 ಎಸೆತಗಳಲ್ಲಿ 98 ರನ್ ಗಳಿಸಿದ್ದರು. ಜೋಹಾನ್ಸ್ ಬರ್ಗ್‌ನಲ್ಲಿ ಶ್ರೀಲಂಕಾ ವಿರುದ್ಧ 97 ರನ್ ಮತ್ತು ಡರ್ಬನ್‌ನಲ್ಲಿ ಕೀನ್ಯದ ವಿರುದ್ಧ ಸೆಮಿಫೈನಲ್‌ನಲ್ಲಿ ಸಚಿನ್ ತೆಂಡುಲ್ಕರ್ 83 ರನ್ ಸೇರಿಸಿದ್ದರು.

ಫೈನಲ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯ 125 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿತ್ತು. ಸಚಿನ್ ತೆಂಡುಲ್ಕರ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಮತ್ತು ರಿಕಿ ಪಾಂಟಿಂಗ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಸ್ತಿಯನ್ನು ಹಂಚಿಕೊಂಡಿದ್ದರು.

2007ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಆಸ್ಟ್ರೇಲಿಯದ ಗ್ಲೆನ್ ಮೆಕ್‌ಗ್ರಾತ್ 11 ಇನಿಂಗ್ಸ್‌ಗಳಲ್ಲಿ 26 ವಿಕೆಟ್ ಪಡೆದಿದ್ದರು. 6 ಬಾರಿ 3ಕ್ಕೂ ಅಧಿಕ ವಿಕೆಟ್ ಪಡೆದಿದ್ದರು. ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿ ಮೆಕ್‌ಗ್ರಾತ್ ಪಾಲಾಗಿತ್ತು. ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯ ಫೈನಲ್‌ನಲ್ಲಿ 53 ರನ್‌ಗಳ ಜಯ ಗಳಿಸಿ 4ನೇ ಬಾರಿ ವಿಶ್ವಕಪ್ ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News