ರೈಲ್ವೆ ನಿಲ್ದಾಣದಲ್ಲಿ ತುರ್ತು ಸಂದರ್ಭದಲ್ಲಿ ನೆರವಾಗಲು ಚಿಕಿತ್ಸಾ ಕೇಂದ್ರ ಆರಂಭ: ಎ.ಕೆ.ಸಿಂಗ್
ಬೆಂಗಳೂರು, ಮೇ 29: ರೈಲ್ವೆ ನಿಲ್ದಾಣದಲ್ಲಿ ತುರ್ತು ಸಂದರ್ಭದಲ್ಲಿ ಜನತೆಗೆ ನೆರವಾಗುವ ಉದ್ದೇಶದಿಂದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ತುರ್ತು ಚಿಕಿತ್ಸಾ ಕೇಂದ್ರ ಆರಂಭ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್ ಹೇಳಿದ್ದಾರೆ.
ಬುಧವಾರ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನೈರುತ್ಯ ರೈಲ್ವೆ ವಿಭಾಗ ವತಿಯಿಂದ ಮಣಿಪಾಲ್ ಆಸ್ಪತ್ರೆ ಸಹಯೋಗದಲ್ಲಿ ನಿರ್ಮಿಸಲಾದ ತುರ್ತು ಚಿಕಿತ್ಸಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ರೈಲ್ವೆ ಪ್ರಯಾಣಿಕರಿಗೆ ಆರೋಗ್ಯ ಸೇವೆ ನೀಡುವ ಸಲುವಾಗಿ ತುರ್ತು ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ ಎಂದರು.
ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾನ್ಯ ಜನರು ಪ್ರಯಾಣ ಮಾಡುತ್ತಾರೆ. ಹೀಗಾಗಿ, ಯಾವುದೇ ಅವಘಡಗಳು ಸಂಭವಿಸಿದಾಗ ಅಗತ್ಯ ಸೇವೆ ಸಲ್ಲಿಸಲು ಈ ಕೇಂದ್ರ ಸಹಕಾರಿಯಾಗಲಿದೆ. ರೈಲು ನಿಲ್ದಾಣದಲ್ಲಿ ಪ್ರಾಥಮಿಕ ಚಿಕಿತ್ಸೆ ಕೇಂದ್ರ ಅವಶ್ಯವಿದ್ದು, ಚಿಕಿತ್ಸಾ ಕೇಂದ್ರದ ಉಚಿತವಾಗಿ ರೈಲ್ವೆ ಪ್ರಯಾಣಿಕರಿಗೆ ಆರೋಗ್ಯ ಸೇವೆ ನೀಡಲಾಗುವುದು ಎಂದು ನುಡಿದರು.
ಪ್ರತಿದಿನ ಸಾವಿರಾರು ಜನರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮೂಲಕ ಪ್ರಯಾಣ ಮಾಡುತ್ತಾರೆ. ಆದರೆ, ಆರೋಗ್ಯದಲ್ಲಿ ಏರುಪೇರಾದರೆ ಸೂಕ್ತ ಚಿಕಿತ್ಸೆ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರವೇ ಇರಲಿಲ್ಲ, ದೂರದ ಪ್ರದೇಶಕ್ಕೆ ಹೋಗಬೇಕಿತ್ತು. ಆದರೆ, ಇದೀಗ ಇಲ್ಲಿ ಕೇಂದ್ರ ಸ್ಥಾಪಿಸಿರುವುದು ಸೂಕ್ತವಾದುದಾಗಿದೆ ಎಂದು ತಿಳಿಸಿದರು.
ನಗರದ ಕೇಂದ್ರವಾದ ಮೆಜೆಸ್ಟಿಕ್‌ನಿಂದ ದಿಲ್ಲಿ, ಮುಂಬೈ, ಬಾಂಬೆ, ತಿರುವನಂತಪುರ ಸೇರಿದಂತೆ ದೇಶದ ಮೂಲೆ ಮೂಲೆಗಳಿಗೆ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಅಲ್ಲದೆ, ದೂರದ ಊರುಗಳಿಂದಲೂ ಇಲ್ಲಿಗೆ ಬರುತ್ತಾರೆ. ಮಕ್ಕಳು, ವಯಸ್ಕರು, ವಯೋವೃದ್ಧರು ಎಂಬ ಭೇದವಿಲ್ಲದೆ ಎಲ್ಲರೂ ಸಂಚಾರ ಮಾಡುತ್ತಾರೆ. ಇವರಿಗೆ ಏನಾದರೂ ಆರೋಗ್ಯ ಸಮಸ್ಯೆ ಕಂಡುಬಂದರೆ ಕೂಡಲೇ ಒಂದನೇ ಪ್ಲಾಟ್‌ಫಾರಂನಲ್ಲಿರುವ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಬಹುದಾಗಿದೆ ಎಂದು ಅವರು ಹೇಳಿದರು.
ಏನೇನಿದೆ ಕೇಂದ್ರದಲ್ಲಿ: ಪ್ರಾಥಮಿಕ ಚಿಕಿತ್ಸೆಗೆ ಬೇಕಾದ ಅಗತ್ಯ ಉಪಕರಣಗಳು ಚಿಕಿತ್ಸಾ ಕೇಂದ್ರದಲ್ಲಿದ್ದು, 2 ಬೆಡ್ ಹಾಕಲಾಗಿದೆ. 3 ಪಾಳಿಯಲ್ಲಿ 3 ಡಾಕ್ಟರ್, ಸಿಬ್ಬಂದಿಗಳು ಚಿಕಿತ್ಸೆ ನೀಡಲಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ 108 ಆ್ಯಂಬುಲೆನ್ಸ್‌ಗಾಗಿ ಕಾಯುವುದನ್ನು ತಪ್ಪಿಸಲು ರೈಲ್ವೆ ನಿಲ್ದಾಣದ ಆವರಣದಲ್ಲಿ 1 ಆ್ಯಂಬುಲೆನ್ ಮೀಸಲಿಡಲಾಗಿದೆ. ಕಾರ್ಯಕ್ರಮದಲ್ಲಿ ನೈರುತ್ಯ ರೈಲ್ವೆ ವಿಭಾಗದ ಡಿವಿಜಿನಲ್ ರೈಲ್ವೆ ಮ್ಯಾನೇಜರ್ ಅಶೋಕ ಕುಮಾರ್ ವರ್ಮಾ, ಮಣಿಪಾಲ್ ಗ್ರೂಪ್‌ನ ನಿರ್ದೇಶಕ ಡಾ.ಮನೀಶ್ ರೈ, ದೀಪಕ್ ವೇಣುಗೋಪಾಲ್ ಉಪಸ್ಥಿತರಿದ್ದರು.