×
Ad

ಆಪರೇಷನ್ ಕಮಲ, ಸಂಪುಟ ಪುನರ್ ರಚನೆ: ಮೈತ್ರಿ ನಾಯಕರ ಸಮಾಲೋಚನೆ

Update: 2019-05-29 17:46 IST

ಬೆಂಗಳೂರು, ಮೇ 29: ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೆ ರಾಜ್ಯದಲ್ಲಿ ಬಿರುಸುಗೊಂಡಿರುವ ‘ಆಪರೇಷನ್ ಕಮಲ’ ಪ್ರಯತ್ನ ವಿಫಲಗೊಳಿಸುವುದು ಹಾಗೂ ಸಚಿವ ಸಂಪುಟ ಪುನರ್ ರಚನೆ ಸೇರಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮೈತ್ರಿ ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿದ್ದಾರೆ.

ಬುಧವಾರ ನಗರದ ಕುಮಾರಕೃಪ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಸಿಎಂ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು.

ಮೈತ್ರಿ ಸರಕಾರದ ವಿರುದ್ಧ ಬಹಿರಂಗ ಸಮರ ಸಾರಿರುವ ಬಂಡಾಯ ಶಾಸಕರ ಮನವೊಲಿಕೆ, ಸಂಭಾವ್ಯ ಆಪರೇಷನ್ ಕಮಲದ ಪರಿಣಾಮಗಳು ಮತ್ತು ಅದನ್ನು ತಟಸ್ಥಗೊಳಿಸುವುದು ಹೇಗೆ ಮತ್ತು ಅತೃಪ್ತ ಶಾಸಕರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸುವ ಸಂಬಂಧ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳ ಪೈಕಿ 25 ಸ್ಥಾನಗಳನ್ನು ಗಳಿಸಿರುವ ಬಿಜೆಪಿ, ಸರಕಾರ ಅಸ್ಥಿರಕ್ಕೆ ಪ್ರಯತ್ನ ನಡೆಸಿದ್ದು, ಅದನ್ನು ವಿಫಲಗೊಳಿಸುವ ಸಂಬಂಧ ಉಭಯ ಪಕ್ಷಗಳ ಮುಖಂಡರು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಸೋಲಿನ ಪರಾಮರ್ಶೆ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಸೋಲಿಗೆ ಕಾರಣವೇನು ಎಂಬುದರ ಸಂಬಂಧ ಉಭಯ ಪಕ್ಷದ ನಾಯಕರೆಲ್ಲ ಸೇರಿ ಸಭೆ ನಡೆಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರರಮೇಶ್ವರ್ ಇಂದಿಲ್ಲಿ ತಿಳಿಸಿದರು.

ಮೈತ್ರಿ ಪಕ್ಷ ಸೇರಿ ಚುನಾವಣೆ ಎದುರಿಸಿದ್ದರೂ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಸಂಬಂಧ ಇಂದು ಎಲ್ಲ ನಾಯಕರು ಸಭೆ ನಡೆಸಿ, ಪರಾಮರ್ಶಿಸಿದೆವು. ಇದೇ ಸಂದರ್ಭದಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆಯೂ ಚರ್ಚೆ ನಡೆಸಿದೆವು. ಆದರೆ, ಸಚಿವ ಸಂಪುಟ ವಿಸ್ತರಣೆ ಸಂಬಂಧ ಈ ಸಭೆಯಲ್ಲಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ಪರಮೇಶ್ವರ್ ಸ್ಪಷ್ಟಣೆ ನೀಡಿದರು.

‘ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಇನ್ನಿತರ ಮುಖಂಡರು ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಹಾಗೂ ಉತ್ತಮ ಹಾಗೂ ಸಮರ್ಥ ಆಡಳಿತ ನೀಡುವ ಬಗ್ಗೆ ಚರ್ಚಿಸಲಾಗಿದೆ. ಬಿಜೆಪಿ ಬೆದರಿಕೆಗಳು ಮೈತ್ರಿ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’

-ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News