ಬಿಬಿಎಂಪಿ ಉಪ ಚುನಾವಣೆ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮರಿ

Update: 2019-05-29 12:51 GMT

ಬೆಂಗಳೂರು, ಮೇ 29: ಬಿಬಿಎಂಪಿ ಎರಡು ವಾರ್ಡ್‌ಗಳಿಗೆ ಉಪ ಚುನಾವಣೆ ನಡೆದಿದ್ದು, ರಮೀಳಾ ಉಮಾಶಂಕರ್‌ರ ಅಕಾಲಿಕ ಮರಣದಿಂದ ತೆರವುಗೊಂಡಿದ್ದ ಕಾವೇರಿಪುರ ವಾರ್ಡ್ ಚುನಾವಣೆ ವೇಳೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

ಇಲ್ಲಿನ ಕಾವೇರಿಪುರ ವಾರ್ಡ್‌ನಲ್ಲಿ ಮತಗಟ್ಟೆಯೊಂದರ ಬಳಿ ಜೆಡಿಎಸ್‌ನ ಬೆಂಗಳೂರು ನಗರ ಅಧ್ಯಕ್ಷ ಆರ್.ಪ್ರಕಾಶ್ ಹಾಗೂ ಬಿಜೆಪಿ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯಿತು. ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಅಲ್ಲದೆ, ಗಲಾಟೆ ಚದುರಿಸಲು ಲಾಠಿ ಪ್ರಹಾರವನ್ನೂ ನಡೆಸಿದರು.

ನಡೆದದ್ದೇನು: ಮುನೇಶ್ವರ ಬ್ಲಾಕ್ ಬೂತ್ ಸಮೀಪ ಬಿಜೆಪಿಯವರು ಮತದಾರರಿಗೆ ದುಡ್ಡು ಹಂಚುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ನವರು ವ್ಯಕ್ತಿಯೊಬ್ಬರಿಗೆ ಥಳಿಸಿದ್ದರಿಂದ ಕಾವೇರಿಪುರ ವಾರ್ಡ್‌ನಲ್ಲಿ ಘರ್ಷಣೆ ಆರಂಭವಾಯಿತು.

ವಿಷಯ ತಿಳಿದ ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ ಹಾಗೂ ಮಾಜಿ ಸದಸ್ಯ ವಾಗೀಶ್ ಮತ್ತಿತರ ಬಿಜೆಪಿ ಕಾರ್ಯಕರ್ತರು ಸ್ಥಳ್ಕಕೆ ಆಗಮಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಲುಪಿತು. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಲು ಮುಂದಾದರು. ತಕ್ಷಣ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಗೊಂಡಿತು.

ಕಾವೇರಿಪುರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಲ್ಲವಿ ಹಾಗೂ ಮೈತ್ರಿ ಅಭ್ಯರ್ಥಿ ಸುಶೀಲಾ ನಡುವೆ ಬಿರುಸಿನ ಸ್ಪರ್ಧೆ ಕಂಡು ಬಂದಿದ್ದರೆ, ಸಗಾಯಿಪುರಂ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಜೈರಿಮ್, ಮೈತ್ರಿ ಅಭ್ಯರ್ಥಿ ಪಳನಿಯಮ್ಮ, ಪಕ್ಷೇತರ ಅಭ್ಯರ್ಥಿ ಮಾರಿಮುತ್ತು ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಭದ್ರಕೋಟೆ: ಕಾವೇರಿಪುರ ವಾರ್ಡ್ ಜೆಡಿಎಸ್‌ನ ಭದ್ರಕೋಟೆಯಾಗಿದೆ. ರಮೀಳಾ ಉಮಾಶಂಕರ್ ಮಾಡಿರುವ ಅಭಿವೃದ್ಧಿ ಕೆಲಸಗಳು ಹಾಗೂ ಅವರ ಸಾವಿನ ಅನುಕಂಪದ ಆಧಾರದಲ್ಲಿ ನಾವೇ ಗೆಲ್ಲಲಿದ್ದೇವೆ. ಅಲ್ಲದೆ, ಶಾಸಕ ಪ್ರಿಯಕೃಷ್ಣ ಅಕಾಡಕ್ಕಿಳಿದು ಕೆಲಸ ಮಾಡಿದ್ದು, ಅವರ ಪ್ರಚಾರದಿಂದ ಸುಶೀಲಾ ಸುರೇಶ್ ಭರ್ಜರಿ ಗೆಲುವು ಪಡೆಯಲಿದ್ದು, ಬಿಜೆಪಿ ಠೇವಣಿ ಉಳಿಸಿಕೊಳ್ಳುವುದು ಕಷ್ಟ ಎಂದು ಜೆಡಿಎಸ್‌ನ ಅಧ್ಯಕ್ಷ ಆರ್.ಪ್ರಕಾಶ್ ಹೇಳಿದರು.

ಗೆಲ್ಲುವುದು ನಾನೇ: ಇನ್ನು ಸಗಾಯಿಪುರಂ ವಾರ್ಡ್‌ನಲ್ಲಿ ನಾನೇ ಗೆಲ್ಲಲಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಮಾರಿಮುತ್ತು ಘೋಷಿಸಿಕೊಂಡಿದ್ದಾರೆ. ಸಗಾಯಿಪುರಂ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷದವರು ಕೆಲವು ರೌಡಿಗಳನ್ನು ಪಕ್ಷೇತರ ಅಭ್ಯರ್ಥಿಗಳನ್ನಾಗಿ ನಿಲ್ಲಿಸಿದ್ದಾರೆ. ಅವರು ಮತಗಟ್ಟೆಗಳ ಬಳಿ ಜನರನ್ನು ಎದುರಿಸಿ ಬೆದರಿಸಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಒತ್ತಡ ಹಾಕುತ್ತಿದ್ದಾರೆ. ಈ ವಿಷಯ ತಿಳಿದು ನಾನು ಸ್ಥಳ್ಕಕೆ ಬಂದಿದ್ದೇನೆ. ನಾನು ಯಾರ ಮೇಲೂ ಗಲಾಟೆ ಮಾಡೋಲ್ಲ. ನಾನು ಒಂಟಿ ಹೆಣ್ಣೇ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಆದರೆ ಇಲ್ಲಿನ ಮತದಾರರು ನನ್ನನ್ನು 10,000 ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂದು ಮಾರಿಮುತ್ತು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News