ಮೌಲ್ಯಾಧಾರಿತ ಶಿಕ್ಷಣ ನೀಡಿದಾಗ ಮಾತ್ರ ವಿದ್ಯಾರ್ಥಿಗಳ ಬದುಕು ಉತ್ತಮವಾಗಿರಲು ಸಾಧ್ಯ: ಜಿ.ಟಿ.ದೇವೆಗೌಡ

Update: 2019-05-29 15:12 GMT

ಬೆಳಗಾವಿ, ಮೇ 29: ಪ್ರಾಥಮಿಕ ಹಂತದಲ್ಲಿಯೆ ಉತ್ತಮ ಗುಣಮಟ್ಟದ ಮೌಲ್ಯಾಧಾರಿತ ಮತ್ತು ಉದ್ಯೋಗಾಧಾರಿತ ಶಿಕ್ಷಣವನ್ನು ನೀಡಿದಾಗ ಮಾತ್ರ ವಿದ್ಯಾರ್ಥಿಗಳ ಬದಕು ಉತ್ತಮವಾಗಿರಲು ಸಾಧ್ಯ ಎಂದು ವಿಶ್ವವಿದ್ಯಾಲಯಗಳ ಸಮಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಹೇಳಿದ್ದಾರೆ.

ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ರಾಣಿ ಚನ್ನಮ್ಮ ವಿವಿಗೆ ಸುಮಾರು 170 ಏಕರೆ ಜಾಗ ಅರಣ್ಯ ಇಲಾಖೆಯಿಂದ ಕೇವಲ 15 ದಿನಗಳಲ್ಲಿ ವಿಸ್ತಾರವಾಗಲಿದೆ. ವಿಶ್ವವಿದ್ಯಾಲಯದ ಖಾತೆಯಲ್ಲಿ ಈಗಾಗಲೇ 80 ಕೋಟಿ ರೂ.ಗಳಿದ್ದು, ಆಡಿಟೋರಿಯಂ ಹಾಲ್, ಗ್ರಂಥಾಲಯ, ವಸತಿ ನಿಲಯಗಳನ್ನು ಆದಷ್ಟು ಬೇಗನೆ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸ್ವಾರ್ಥ ತಾಂಡವಾಡುತ್ತಿದ್ದು, ಅದನ್ನು ಹೋಗಲಾಡಿಸಲು ಉತ್ತಮ ಶಿಕ್ಷಣದ ಅವಶ್ಯಕತೆ ಇದೆ. ಹಾಗಾಗಿ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆಯನ್ನು ನೀಡಬೇಕು. 16 ವಿಶ್ವವಿದ್ಯಾಲಯಗಳಲ್ಲಿ ಡಾಕ್ಟರೇಟ್ ಪಡೆದ ಹಾಗೂ ವಿಶ್ವದ ಐದು ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ.ಕೆ.ಕಸ್ತೂರಿರಂಗನ್ ಅವರು ಈ ವಿಶ್ವವಿದ್ಯಾಲಯಕ್ಕೆ ಬಂದಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ದೇವೇಗೌಡ ಅಭಿಪ್ರಾಯಪಟ್ಟರು.

ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಆಗುಸಿದ ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ.ಕಸ್ತೂರಿರಂಗನ್ ಮಾತನಾಡಿ, ಬೆಳಗಾವಿ ರಾಜ್ಯದ ಅತ್ಯಂತ ಪುರಾತನ ನಗರವಾಗಿದೆ, ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಬೆಳೆಯುತ್ತಿರುವುದರಿಂದ ವೇಣುಗ್ರಾಮ ಎಂದು ಕರೆಯುತ್ತಿದ್ದರು ಎಂದರು.

ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಮನೋಬಲವನ್ನು, ಸವಾಲುಗಳನ್ನು ಎದುರಿಸುವ ಆತ್ಮಬಲವನ್ನು, ಅವಕಾಶಗಳನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ವಿಶ್ವವಿದ್ಯಾಲಯದಲ್ಲಿ ನೀಡುವ ತರಬೇತಿ ಮತ್ತು ವೃತ್ತಿಪರತೆಯಿಂದ ಅವರನ್ನು ಭವಿಷ್ಯದ ಬದುಕಿಗೆ ಅಣಿಗೊಳಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ಆದರ್ಶ ನಾಗರಿಕರನ್ನಾಗಿ, ಶೈಕ್ಷಣಿಕ ನೇತಾರರನ್ನಾಗಿ, ಉದ್ಯಮಿಗಳನ್ನಾಗಿ ರೂಪಿಸುತ್ತಿದೆ ಎಂದು ಅವರು ಹೇಳಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣರಂತ ಅಪ್ರತಿಮ ಹೋರಾಟಗಾರರಿಗೆ ಜನ್ಮ ನೀಡಿದ ಸ್ಥಳ ಇದು ಎಂಬುದು ಸಂತೋಷದ ವಿಷಯ. ಅಷ್ಟೇ ಅಲ್ಲದೇ ಬೆಳಗಾವಿಗೆ ಬಾಲಗಂಗಾಧರ ತಿಲಕ, ಮಹಾತ್ಮಾ ಗಾಂಧೀಜಿ, ಸ್ವಾಮಿ ವಿವೇಕಾನಂದ ಸೇರಿದಂತೆ ದೇಶದ ಮಹಾನ್ ವ್ಯಕ್ತಿಗಳು ಭೇಟಿ ನೀಡಿದ್ದು ಸ್ಮರಣೀಯವಾಗಿದೆ ಎಂದು ಕಸ್ತೂರಿ ರಂಗನ್ ತಿಳಿಸಿದರು.

ಗೌರವ ಡಾಕ್ಟರೇಟ್: ಘಟಿಕೋತ್ಸವದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ವಲಯದಲ್ಲಿ ಸಾಧನೆ ಮಾಡಿದ ವಿಜಯಪುರ ಜಿಲ್ಲೆಯ ಸಿಂದಗಿಯ ಸಾರಂಗ ಮಠದ ಪೀಠಾಧಿಪತಿ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಮಾಜಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಭಾವೇಷ ಭಾಟಿಯಾ ಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ವಿವಿಧ ವಿಭಾಗಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ವಿಶ್ವ ವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ ಕಲಾ ವಿಭಾಗದಲ್ಲಿ ಆಶಾ ಶಿವಾನಂದ ಮಲಕಪ್ಪನವರ, ವಾಣಿಜ್ಯ ವಿಭಾಗದಲ್ಲಿ ವಿಮಲಕುಮಾರ ತಿಕಮಚಂದ ಬನಸಾಲಿ, ವಿಜ್ಞಾನ ವಿಭಾಗದಲ್ಲಿ ರೆಷ್ಮಾ ತಲಾ ಮೂರು ಬಂಗಾರದ ಪದಕ ಪಡೆದು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಘಟಿಕೋತ್ಸವದಲ್ಲಿ ಕುಲಪತಿ ಪ್ರೊ.ಡಾ.ಶಿವಾನಂದ ಹೊಸಮನಿ, ಕುಲಸಚಿವ ಪ್ರೊ.ಸಿದ್ದು ಅಲಗೂರ, ಮೌಲ್ಯಮಾಪನ ಕುಲಸಚಿವ ಪ್ರೊ.ರಂಗರಾಜ ವನದುರ್ಗ, ಹಣಕಾಸು ಅಧಿಕಾರಿಗಳಾದ ಶಂಕರಾನಂದ ಬನಶಂಕರಿ, ವಿಟಿಯುದ ಕುಲಪತಿ ಡಾ.ಕರಿಸಿದ್ದಪ್ಪಹಾಗೂ ಸಿಂಡಿಕೇಟ್ ಸದಸ್ಯರು, ಪಾಲಕರು, ವಿವಿಯ ಎಲ್ಲ ವಿದ್ಯಾರ್ಥಿಗಳು ಸೇರಿದಂತೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News