ಅಂಗಡಿವಾಡಿಗಳಲ್ಲೇ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು ಆಗ್ರಹಿಸಿ ಪ್ರತಿಭಟನೆ

Update: 2019-05-30 12:54 GMT

ಬೆಂಗಳೂರು, ಮೇ 30: ಪೂರ್ವ ಪ್ರಾಥಮಿಕ ಶಾಲೆಗಳನ್ನು(ಎಲ್‌ಕೆಜಿ, ಯುಕೆಜಿ) ಅಂಗನವಾಡಿಗಳಲ್ಲಿಯೆ ಪ್ರಾರಂಭಿಸಬೇಕು. ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯ ಹೆಚ್ಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿ ವತಿಯಿಂದ ನಗರದ ರೈಲ್ವೆ ನಿಲ್ದಾಣದಿಂದ ನಗರದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿತ್ತು.

ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಅಂಗನವಾಡಿ ಕಾರ್ಯಕರ್ತೆಯರು ನಗರದ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನದವರೆಗೆ ಜಾಥಾ ನಡೆಸಿ, ಎಲ್‌ಕೆಜಿ-ಯುಕೆಜಿ ಶಾಲೆಗಳನ್ನು ಪ್ರಾಥಮಿಕ ಶಾಲೆಗಳಲ್ಲಿ ತೆರೆಯುವುದರಿಂದ ಅಂಗನವಾಡಿಗಳು ಬಂದ್ ಆಗುವ ಅಪಾಯವಿದೆ. ಕಳೆದ 45ವರ್ಷಗಳಿಂದ ಮಕ್ಕಳ ಪಾಲನೆ ಮಾಡಿಕೊಂಡು ಬರುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ನಡುನೀರಿನಲ್ಲಿ ಕೈ ಬಿಡುವುದು ಸರಿಯಲ್ಲ. ಕೂಡಲೆ ಪೂರ್ವ ಪ್ರಾಥಾಮಿಕ ಶಾಲೆಗಳನ್ನು ಅಂಗನವಾಡಿಗಳಲ್ಲಿಯೆ ಮುಂದುವರೆಸಬೇಕೆಂದು ಒತ್ತಾಯಿಸಿದರು.

ಮಹಿಳಾ ಮತ್ತು ಮಕ್ಕಳ ಅಭವೃದ್ಧಿ ಇಲಾಖೆಯ ಅಧಿಕಾರಿಗಳು, ಮಕ್ಕಳು ಹಾಗೂ ಶಿಕ್ಷಣ ತಜ್ಞರೊಂದಿಗೆ ಆಲೋಚಿಸದೆ ಪೂರ್ವ ಪ್ರಾಥಮಿಕ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪ್ರಾರಂಭಿಸಿರುವುದು ಅವೈಜ್ಞಾನಿಕ ವಿಧಾನವಾಗಿದೆ. ಇದರ ಜೊತೆಗೆ ಈ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಇದು ಮಕ್ಕಳ ಯೋಗಕ್ಷೇಮ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲವೆಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷಿ ಆತಂಕ ವ್ಯಕ್ತಪಡಿಸಿದರು.

ಅಂಗನವಾಡಿ ಶಿಕ್ಷಕರಿಗೆ ಮಕ್ಕಳ ಪಾಲನೆಯ ಕುರಿತು ಸರಿಯಾದ ತರಬೇತಿ ನೀಡಲಾಗಿರುತ್ತದೆ. ಇವರಿಗೆ ಮತ್ತಷ್ಟು ತರಬೇತಿ ಹಾಗೂ ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯ ಹೆಚ್ಚಿಸಿ ಅಲ್ಲಿಯೆ ಎಲ್‌ಕೆಜಿ-ಯುಕೆಜಿ ಪ್ರಾರಂಭಿಸಿದರೆ ಎಲ್ಲ ಯಾವುದೆ ಸಮಸ್ಯೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಸರಕಾರ ಗಂಭೀರವಾಗಿ ಚಿಂತಿಸಲಿ ಎಂದು ಅವರು ಹೇಳಿದರು.

ಐಸಿಡಿಸಿ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಈಗಾಗಲೆ ಅಂಗನವಾಡಿ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಇರುವ ಈ ವ್ಯವಸ್ಥೆಯನ್ನೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸರಕಾರ ಚಿಂತಿಸಬೇಕೆ ವಿನಃ ಅಂಗನವಾಡಿಗಳನ್ನು ಬೇರ್ಪಡಿಸಿ ಪ್ರತ್ಯೇಕವಾಗಿ ಎಲ್‌ಕೆಜಿ, ಯುಕೆಜಿ ತೆರೆಯುವುದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಹಾಗೂ ಇದರಿಂದ ಪರಿಣಾಮಕಾರಿ ಪ್ರಯೋಜನವೂ ಆಗುವುದಿಲ್ಲವೆಂದು ಅವರು ಹೇಳಿದರು.

ಈ ವೇಳೆ ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ, ಎಐಟಿಯುಸಿ ಅಧ್ಯಕ್ಷ ರಾಮಚಂದ್ರಪ್ಪ, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಮ್.ಜಯಮ್ಮ, ಸ್ವತಂತ್ರ ಸಂಘಟನೆಯ ಅಧ್ಯಕ್ಷ ಜಯಲಕ್ಷ್ಮಿ, ಸ್ವತಂತ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಉಮಾಮಣಿ ಮತ್ತಿತರರಿದ್ದರು.

ಪರಿಶೀಲಿಸಿ ಸೂಕ್ತಕ್ರಮ: ಜಯಮಾಲಾ

ಈ ಶೈಕ್ಷಣಿಕ ವರ್ಷದಿಂದಲೆ ಪೂರ್ವಪ್ರಾಥಮಿಕ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪ್ರಾರಂಭಿಸಲು ಸರಕಾರ ಸುತ್ತೋಲೆ ಹೊರಡಿಸಿದೆ. ಇದು ಕೇವಲ ಪ್ರಯೋಗಿಕ ಕಾರ್ಯಕ್ರಮವಷ್ಟೆ. ಹೀಗಾಗಿ ಅಂಗನವಾಡಿ ಶಿಕ್ಷಕರ, ಸಹಾಯಕಿಯರ ಬೇಡಿಕೆಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವ ಜಯಮಾಲಾ ಭರವಸೆ ನೀಡಿದರು.

ಹಕ್ಕೊತ್ತಾಯಗಳು:

-ಅಂಗನವಾಡಿ ಮತ್ತು ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಮಾತ್ರ ಸರಕಾರಿ ಸೌಲಭ್ಯಗಳೆಂದು ಘೋಷಿಸಬೇಕು.

-ಖಾಸಗಿ ಕಾನ್ವೆಂಟ್ ಮತ್ತು ಶಾಲೆಗಳಿಗೆ ಕೊಡುವ ಅನುಮತಿಯನ್ನು ರದ್ದು ಪಡಿಸಬೇಕು.

-ಶಿಕ್ಷಣ ಇಲಾಖೆಯಲ್ಲಿ ಖರ್ಚು ಮಾಡುವ ಸ್ವಲ್ಪ ಹಣದಲ್ಲಿ ಅಂಗನವಾಡಿ ಮಕ್ಕಳಿಗೆ ಸಮ ವಸ್ತ್ರಗಳನ್ನು ಮತ್ತು ಪಠ್ಯ ಪುಸ್ತಕಗಳನ್ನು ಕೊಡಿಸುವ ವ್ಯವಸ್ಥೆ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News