‘ಐರಾವತ’ ಯೋಜನೆಯ ಲಾಭ ಪಡೆದು ಅಭಿವೃದ್ಧಿ ಹೊಂದಿ: ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು, ಮೇ 30: ಸಮಾಜ ಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷಿ ‘ಐರಾವತ’ ಯೋಜನೆ ಮೂಲಕ ಎಸ್ಸಿ-ಎಸ್ಟಿ ಯುವಕ-ಯುವತಿಯರು ಜೀವನವನ್ನು ಸವಾಲಾಗಿ ಸ್ವೀಕರಿಸಿ ಈ ಯೋಜನೆ ಲಾಭ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಪೇಕ್ಷೆಪಟ್ಟಿದ್ದಾರೆ.
ಗುರುವಾರ ವಿಧಾನಸೌಧದ ಪೂರ್ವದ್ವಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ‘ಐರಾವತ’ ಯೋಜನೆ ಫಲಾನುಭವಿಗಳಿಗೆ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ವರ್ಗದ 209 ವಾಹನಗಳನ್ನು ವಿತರಿಸಿದ್ದು, ರಾಜ್ಯದ 4,500 ಕುಟುಂಬಗಳ ಜೀವನೋಪಾಯಕ್ಕೆ ಅಡಿಪಾಯ ಹಾಕುವಂತಹ ಮಹತ್ತರ ಯೋಜನೆ ಇದು ಎಂದರು.
225 ಕೋಟಿ ರೂ.ವೆಚ್ಚದ ಉದ್ದೇಶಿತ ಯೋಜನೆಯಡಿ ಓಲಾ, ಊಬರ್ ಸಂಸ್ಥೆಗಳ ಸಹಯೋಗದೊಂದಿಗೆ ಫಲಾನುಭವಿಗಳಿಗೆ ತರಬೇತಿ ಹಾಗೂ ಮಾರುಕಟ್ಟೆ ದೊರಕಿಸಲು ನೆರವು ನೀಡಲಾಗುತ್ತಿದೆ. ಸರಕಾರದ ನೆರವು ಪಡೆದ ಫಲಾನುಭವಿಗಳು ತಮ್ಮ ಕುಟುಂಬವನ್ನು ನೆಮ್ಮದಿಯಿಂದ ಇಡುವ ಜೊತೆಗೆ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ಅವರು ಸಲಹೆ ಮಾಡಿದರು.
ಫಲಾನುಭವಿಗಳು ಶಿಸ್ತುಬದ್ಧ ಜೀವನ ಅಳವಡಿಸಿಕೊಂಡು ಪ್ರಾಮಾಣಿಕರಾಗಿ ನಡೆದುಕೊಳ್ಳಬೇಕು. ವಾಹನಗಳ ಮೂಲಕ ದುಡಿಮೆಯ ಜೊತೆಗೆ ಲಾಭಗಳಿಸುವಂತೆ ಆಗಬೇಕೆಂದು ಸರಕಾರ ನೇರ ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಎಂದ ಅವರು, ಶೋಷಿತ ವರ್ಗದವರನ್ನು ಉದ್ಯೋಗಶೀಲರನ್ನಾಗಿಸುವ ಉದ್ದೇಶ ನಮ್ಮ ಸರಕಾರದ್ದು ಎಂದರು.
ಸಾಮಾಜಿಕ ಉದ್ಯಮಶೀಲ ಅಭಿವೃದ್ಧಿ ಯೋಜನೆಯಡಿ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮಗಳ ಮೂಲಕ ಐರಾವತ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಹೇಳಿದರು.
ಫಲಾನುಭವಿಗಳಿಗೆ 5 ಲಕ್ಷ ರೂ.ಆರ್ಥಿಕ ನೆರವು ನೀಡಲಾಗುತ್ತಿದ್ದು, ಚಾಲಕರೇ ಮಾಲಕರಾಗುವ ಅವಕಾಶ ಒದಗಿಸಲಾಗಿದೆ. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 209 ಫಲಾನುಭವಿಗಳಿಗೆ ಐರಾವತ ಕಾರು ನೀಡಲಾಗಿದ್ದು, ಮೈಸೂರು, ಬೆಳಗಾವಿ, ಕಲಬುರಗಿ, ದಕ್ಷಿಣ ಕನ್ನಡ, ಬಳ್ಳಾರಿ ಮತ್ತು ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿ ಶೀಘ್ರವೇ ವಾಹನ ವಿತರಣೆ ಮಾಡಲಾಗುವುದು ಎಂದರು.
ಆರ್ಥಿಕ ಚೈತನ್ಯ: ಐರಾವತ ಯೋಜನೆಯಡಿ ಚಾಲಕರೇ ಮಾಲಕರಾಗಿ ಬದಲಾವಣೆಯಾಗುತ್ತಿದ್ದಾರಲ್ಲದೆ, ಅವರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಲಿದೆ. ಅವರ ಮಕ್ಕಳ ವಿದ್ಯಾಭ್ಯಾಸ ಹಾಗೂ ಜೀವನಮಟ್ಟದಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು
ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿದ ಯುವಕ-ಯುವತಿಯರನ್ನು ಉದ್ಯಮಶೀಲರನ್ನಾಗಿ ಮಾಡುವ ಉದ್ದೇಶದಿಂದ ಸಾಮಾಜಿಕ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯನ್ನು ವಿವಿಧ ನಿಗಮಗಳ ಮೂಲಕ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸೇರಿದಂತೆ ಸಮುದಾಯದ ಶಾಸಕರು, ವಿವಿಧ ನಿಗಮಗಳ ಅಧ್ಯಕ್ಷರು, ಇಲಾಖೆ ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಬ್ಯಾಂಕುಗಳಿಂದ ಸಾಲ ಪಡೆದು, ಪ್ರತಿ ತಿಂಗಳು ಕಂತು ಪಾವತಿಸುವಂತಹ ಸ್ಥಿತಿಯಿಂದ ದೂರಾಗಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ‘ಐರಾವತ’ ನೆರವಾಗಿದೆ. ಸಮಾಜದ ದುರ್ಬಲ ವರ್ಗದವರ ಆರ್ಥಿಕ ಸದೃಢತೆಗೆ ಪೂರಕವಾಗಿ ಈ ಯೋಜನೆಯನ್ನು ರೂಪಿಸಲಾಗಿದ್ದು, ಈ ಯೋಜನೆಯಿಂದ ಉದ್ಯೋಗಿಗಳೇ ಮಾಲಕರಾಗಲಿದ್ದಾರೆ. ಈಗಾಗಲೆ ಐರಾವತ ಯೋಜನೆ ಸೌಲಭ್ಯ ಪಡೆದಿರುವ ಹಲವು ಫಲಾನುಭವಿಗಳು ಬದ್ಧತಾಪೂರ್ಣವಾಗಿ ದುಡಿದು, ಮಾಸಿಕ 90 ಸಾವಿರ ರೂ. ಆದಾಯ ಗಳಿಸಿರುವ ಬಗ್ಗೆ ಓಲಾ ಕಂಪೆನಿ ಮಾಹಿತಿ ನೀಡಿದೆ.
-ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ