ಬೆಂಗಳೂರು: ರಸ್ತೆ ಅಪಘಾತಕ್ಕೆ ಯುವಕ ಬಲಿ
ಬೆಂಗಳೂರು, ಜೂ.1: ಬೈಕ್‌ನಲ್ಲಿ ಪ್ರಯಾಣಿಸುವಾಗ ಆಯತಪ್ಪಿ ರಸ್ತೆಯಲ್ಲಿ ಬಿದ್ದ ಸ್ನೇಹಿತರ ಮೇಲೆ ಲಾರಿ ಹರಿದು ಓರ್ವ ಮೃತಪಟ್ಟರೆ, ಮತ್ತೊಬ್ಬ ಗಾಯಗೊಂಡಿರುವ ಘಟನೆ ಚಿಕ್ಕಜಾಲದ ಥಣಿಸಂದ್ರದ ಮುಖ್ಯರಸ್ತೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ನಗರದ ಹೆಚ್‌ಎಎಲ್ ನಿವಾಸಿ ದಿಗ್ವಿಜಯ್ (24) ಮೃತಪಟ್ಟರೆ, ಗಾಯಗೊಂಡಿರುವ ಅಟ್ಟೂರ್ ಲೇಔಟ್ ರನೀಲ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಚಿಕ್ಕಜಾಲದ ಬಳಿ ಕೆಲಸ ಮುಗಿಸಿಕೊಂಡು ಹೋಂಡಾ ಶೈನ್ ಬೈಕ್‌ನಲ್ಲಿ ಸ್ನೇಹಿತ ದಿಗ್ವಿಜಯ್‌ನನ್ನು ಹಿಂದೆ ಕೂರಿಸಿಕೊಂಡು ರನಿಲ್ ರಾತ್ರಿ 10ರ ವೇಳೆ ವೇಗವಾಗಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ಥಣಿಸಂದ್ರ ಮುಖ್ಯರಸ್ತೆಯ ಎ. ನಾರಾಯಣಪುರ ಜಂಕ್ಷನ್‌ನಲ್ಲಿ ಆಯತಪ್ಪಿಬೈಕ್ ಪಲ್ಟಿಯಾಗಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಈ ವೇಳೆ ಹಿಂದಿನಿಂದ ಬಂದ ಲಾರಿ ಬಲಗಡೆ ಬಿದ್ದ ದಿಗ್ವಿಜಯ್ ಮೇಲೆ ಹರಿದಿದ್ದು, ಆತ ಸ್ಥಳದಲ್ಲೇ ಮೃತಪಟ್ಟರೆ, ಎಡಗಡೆ ಬಿದ್ದ ರನೀಲ್ ಪಾರಾಗಿದ್ದಾನೆ ಪ್ರಕರಣ ದಾಖಲಿಸಿರುವ ಚಿಕ್ಕಜಾಲ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.