ಸಿದ್ದರಾಮಯ್ಯ-ಸಿಎಂ ಕುಮಾರಸ್ವಾಮಿ ಸಮಾಲೋಚನೆ
ಬೆಂಗಳೂರು, ಜೂ. 1: ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಶನಿವಾರ ಇಲ್ಲಿನ ಸಿದ್ದರಾಮಯ್ಯನವರ ಕಾವೇರಿಯಲ್ಲಿ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ನಾಗೇಶ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಉಭಯ ನಾಯಕರು ಚರ್ಚಿಸಿದ್ದಾರೆಂದು ಗೊತ್ತಾಗಿದೆ.
ಆಪರೇಷನ್ ಕಮಲ ಭೀತಿ ಹಿನ್ನಲೆಯಲ್ಲಿ ಪಕ್ಷೇತರ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಸರಕಾರಕ್ಕೆ ಅವರ ಬೆಂಬಲ ಪಡೆದುಕೊಳ್ಳುವ ಸಂಬಂಧ ಮಾತುಕತೆ ನಡೆಸಿದ್ದಾರೆ. ಆಪರೇಷನ್ ಕಮಲಕ್ಕೆ ಬಲಿಯಾಗಿದ್ದ ಪಕ್ಷೇತರ ಶಾಸಕರಿಗೆ ಸ್ಥಾನ ನೀಡುವ ಮೂಲಕ ಮನವೊಲಿಸಲು ಮೈತ್ರಿ ಮುಖಂಡರು ಮುಂದಾಗಿದ್ದಾರೆ.
ಸಂಪುಟ ಪುನಾರಚನೆಗೆ ‘ಕೈ’ ಸಚಿವರು ಹಾಗೂ ಹಿರಿಯ ಮುಖಂಡರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿಗೆ ತೀರ್ಮಾನಿಸಿದ್ದಾರೆ. ಪಕ್ಷೇತರ ಶಾಸಕರಿಬ್ಬರಿಗೆ ಸಚಿವ ಸ್ಥಾನ ನೀಡಲು ಉಭಯ ಮುಖಂಡರು ಒಪ್ಪಿಗೆ ನೀಡಿದ್ದು ಶೀಘ್ರವೇ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.