ಭ್ರಷ್ಟಾಚಾರ ಮುಕ್ತವಾಗಲು ಕಾಯ್ದೆಗಳ ಪರಿಣಾಮಕಾರಿ ಜಾರಿ ಅಗತ್ಯ: ಪ್ರೊ.ರವಿವರ್ಮ ಕುಮಾರ್
ಬೆಂಗಳೂರು, ಜೂ.1: ದೇಶದಲ್ಲಿ ಭ್ರಷ್ಟಾಚಾರದ ನಿರ್ಮೂಲನೆ ಕಾನೂನುಗಳನ್ನು ಮಾಡುವುದರಿಂದ ಆಗುವುದಿಲ್ಲ, ಅವುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎಂದು ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್ ಹೇಳಿದ್ದಾರೆ.
ಶನಿವಾರ ನಗರದ ಸರಕಾರಿ ನೌಕರರ ಭವನದಲ್ಲಿ ಮಾಜಿ ಸರಕಾರಿ ನೌಕರರ ಸಂಘ, ಸಿವಿಕ್, ಮುನ್ನಡೆ, ಗಾರ್ಮೆಂಟ್ಸ್ ಲೇಬರ್ ಯೂನಿಯನ್ ಸೇರಿದಂತೆ ಮತ್ತಿತರೆ ಸಂಘ-ಸಂಸ್ಥೆಗಳ ಜಂಟಿಯಾಗಿ ಆಯೋಜಿಸಿದ್ದ ‘ವಿಷಲ್ ಬ್ಲೋವರ್ಸ್ ಪ್ರೊಟೆಕ್ಷನ್ ಆಕ್ಟ್-2014’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭ್ರಷ್ಟಾಚಾರ ಮುಕ್ತವಾಗಬೇಕು ಎಂದು ಎಲ್ಲರೂ ಮಾತನಾಡುತ್ತಾರೆ. ಅದಕ್ಕೆ ಕಾನೂನು ತಂದರೆ ಸರಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ, ಕಾನೂನು ಇರಬೇಕು. ಹಾಗಂತ ಕಾನೂನಿನಿಂದಲೇ ಭ್ರಷ್ಟಾಚಾರ ನಿರ್ಮೂಲನೆಯಾಗುತ್ತದೆ ಎಂಬುದು ಭ್ರಮೆ. ಭ್ರಷ್ಟಾಚಾರ ನಿರ್ಮೂಲನೆಗೆ ನಮ್ಮ ಪಾತ್ರ ಏನಿದೆ ಎಂಬುದನ್ನು ನಾವು ಅರಿಯಬೇಕು ಎಂದು ತಿಳಿಸಿದರು.
ಅಧಿಕಾರಕ್ಕೆ ಬರುವ ಸರಕಾರಗಳಿಗೆ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು ಎಂಬ ಕನಿಷ್ಠ ಕಾಳಜಿಯೂ ಇಲ್ಲ, ಇಚ್ಛಾಶಕ್ತಿಯಂತೂ ಮೊದಲೇ ಇಲ್ಲವಾಗಿದೆ. ನ್ಯಾಯಾಲಯಗಳು ತಪ್ಪಿತಸ್ಥರು ಎಂದು ಹೇಳಿದರೂ, ಸರಕಾರಗಳು ಅವರಿಗೆ ಪ್ರಮುಖ ಹುದ್ದೆಗಳಿಗೆ ಭಡ್ತಿ ನೀಡಿದ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಇಚ್ಛಾಶಕ್ತಿಯಿಲ್ಲದ ಸರಕಾರ ಭ್ರಷ್ಟಾಚಾರ ಹಾಗೂ ಕರ್ತವ್ಯಲೋಪ ಎಸಗುವ ಅಧಿಕಾರಿಗಳನ್ನು ಸೃಷ್ಟಿಸುತ್ತಿದೆ ಎಂದು ದೂರಿದರು.
ವಿಷಲ್ ಬ್ಲೋವರ್‌ಗಳ ರಕ್ಷಣಾ ಕಾಯ್ದೆಯನ್ನು ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ವಿರುದ್ಧ ರಾಜ್ಯ ಸರಕಾರ, ರಾಜ್ಯ ಸರಕಾರದ ವಿರುದ್ಧ ಕೇಂದ್ರ ವೃಥಾ ಆರೋಪ ಮಾಡುತ್ತಿವೆ. ಕಾಯ್ದೆ ಜಾರಿಗೆ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಎಲ್ಲರೂ ಕಾಯ್ದೆ ಜಾರಿಗೆ ಸರಕಾರವನ್ನು ಒತ್ತಾಯಿಸಬೇಕು ಹಾಗೂ ಈ ಸಂಬಂಧ ನ್ಯಾಯಾಲಯದಲ್ಲಿ ದಾವೆ ಹೂಡಬೇಕು ಎಂದು ತಿಳಿಸಿದರು.
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನಾನು ಇದುವರೆಗೆ 450ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದೇನೆ. ಆದರೆ, ಪ್ರಕರಣ ದಾಖಲಿಸಿ ಹಲವು ವರ್ಷಗಳು ಕಳೆದರೂ ಇತ್ಯರ್ಥಗೊಂಡಿಲ್ಲ. ಅಧಿಕಾರಿಗಳು, ಅಧಿಕಾರ ಮತ್ತು ಸರಕಾರದ ಎಲ್ಲ ಸೌಲಭ್ಯಗಳನ್ನು ಪಡೆದು ರಾಜರಂತೆ ಮೆರೆದು ನಿವೃತ್ತಿಯಾಗುತ್ತಿದ್ದಾರೆ. ಹೀಗಾಗಿ, ಕಾಯ್ದೆಗೆ ಜಾರಿಗೆ ಸರಕಾರಕ್ಕೆ ಇಚ್ಛಾಶಕ್ತಿ ಬೇಕು ಎಂದು ಪ್ರತಿಪಾದಿಸಿದರು.
ಹಸಿರು ನ್ಯಾಯಾಧೀಕರಣ ಪೀಠ-ಕರ್ನಾಟಕ ವಿಭಾಗದ ಮುಖ್ಯಸ್ಥ ನ್ಯಾ.ಸುಭಾಷ್ ಬಿ.ಆಡಿ ಮಾತನಾಡಿ, ಸೂಕ್ತ ನಿಯಮಾವಳಿಗಳನ್ನು ರೂಪಿಸಿ 2014ರ ವಿಷಲ್ ಬ್ಲೋವರ್‌ಗಳ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು. ವಿಷಲ್ ಬ್ಲೋವರ್‌ಗಳನ್ನು ರಕ್ಷಣೆ ಮಾಡದಿದ್ದರೆ, ಭ್ರಷ್ಟಾಚಾರ ಹೆಚ್ಚಾಗಿ ಸಮಾಜದಲ್ಲಿ ಅರಾಜಕತೆ ಉಂಟಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಜಾರಿಗೆ ತಂದ ನಂತರ ಸರಕಾರದ ಎಲ್ಲಾ ಕಾರ್ಯಗಳು ಪಾರದರ್ಶಕವಾಗಿ ನಡೆಯಬೇಕು. ಸರಕಾರದ ಕಾರ್ಯಗಳ ಬಗ್ಗೆ ಮಾಹಿತಿ ಕೇಳುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಆದರೆ, ಮಾಹಿತಿ ಕೇಳುವ ವಿಷಲ್ ಬ್ಲೋವರ್‌ಗಳನ್ನು ಹತ್ಯೆ ಮಾಡುವುದು, ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುವಂತಹ ಘಟನೆಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟಿ, ಸೂಕ್ತ ರಕ್ಷಣೆ ನೀಡಲು 2014ರಲ್ಲಿ ವಿಷಲ್ ಬ್ಲೋವರ್‌ಗಳ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್.ವಿಜಯಕುಮಾರ್, ಕರ್ನಾಟಕ ರಾಜ್ಯ ಸರಕಾರಿ ನೌಕರರ (ಮಾಜಿ ಸೈನಿಕರು) ಸಂಘದ ಅಧ್ಯಕ್ಷ ಕೆ.ಮಥಾಯಿ, ಸಾಮಾಜಿಕ ಹೋರಾಟಗಾರರಾದ ಯಶೋಧ, ಕ್ಯಾತ್ಯಾಯಿನಿ ಚಾಮರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವವರಿಗೆ ರಕ್ಷಣೆ ಇಲ್ಲದಂತಾಗಿದೆ. ಭ್ರಷ್ಟಾಚಾರವನ್ನು ಹೊರಗೆಳೆಯುವ ವಿಷಲ್ ಬ್ಲೋವರ್‌ಗಳ ಪರಿಸ್ಥಿತಿ ಶೋಚನೀಯವಾಗಿದೆ. ಆದುದರಿಂದ ಸರಕಾರ ಸೂಕ್ತ ನಿಯಮಾವಳಿಗಳನ್ನು ರೂಪಿಸಿ, ವಿಷಲ್ ಬ್ಲೋವರ್‌ಗಳು ಹಾಗೂ ಸಂಘ ಸಂಸ್ಥೆಗಳನ್ನು ಸಹ ರಕ್ಷಿಸುವ ಕೆಲಸ ಮಾಡಬೇಕು.
-ನ್ಯಾ. ಸುಭಾಷ್ ಬಿ.ಆಡಿ, ಹಸಿರು ನ್ಯಾಯಾಧೀಕರಣ ಪೀಠ-ಕರ್ನಾಟಕ ವಿಭಾಗದ ಮುಖ್ಯಸ್ಥ