ಕಲಬುರ್ಗಿಯವರಿಗೆ ಗುಂಡಿಕ್ಕಿದ್ದು ಗೌರಿ ಲಂಕೇಶ್ ಹತ್ಯೆ, ‘ಪದ್ಮಾವತ್’ ದಾಳಿ ಪ್ರಕರಣದ ಆರೋಪಿಗಳು

Update: 2019-06-02 07:21 GMT

ಬೆಂಗಳೂರು, ಜೂ. 2: 2018ರ ಜನವರಿಯಲ್ಲಿ ಪದ್ಮಾವತ್ ಚಿತ್ರ ಪ್ರದರ್ಶಿಸುತ್ತಿದ್ದ ಬೆಳಗಾವಿಯ ಪ್ರಕಾಶ್ ಥಿಯೇಟರ್ ಮೇಲೆ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿ ಈ ವರ್ಷಾರಂಭದಲ್ಲಿ ಬಂಧಿಸಲ್ಪಟ್ಟ 27ರ ಹರೆಯದ ಯುವಕ, 2017ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪದಲ್ಲಿ ಹುಬ್ಬಳ್ಳಿಯಲ್ಲಿ ಬಂಧಿಸಲ್ಪಟ್ಟಿರುವ 27ರ ಹರೆಯದ ಮತ್ತೊಬ್ಬ ಯುವಕ 2015ರ ಆಗಸ್ಟ್‌ ನಲ್ಲಿ ವಿಚಾರವಾದಿ, ಹಿರಿಯ ಸಂಶೋಧಕ ಎಂಎಂ ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆಗೈದ ಇಬ್ಬರು ಆರೋಪಿಗಳು ಎಂದು ವಿಶೇಷ ತನಿಖಾ ತಂಡ(ಸಿಟ್)ಗುರುತಿಸಿದೆ.

 ಪ್ರಕಾಶ್ ಥಿಯೇಟರ್ ಮೇಲೆ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿ ಬೆಳಗಾವಿ ಪೊಲೀಸರು ಎಪ್ರಿಲ್ ‌ನಲ್ಲಿ ಸನಾತನ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವ ಪ್ರವೀಣ್ ಪ್ರಕಾಶ್ ಚತುರ್ ಅಲಿಯಾಸ್ ಮಸಾಲವಾಲ(27 ವರ್ಷ)ನನ್ನು ಬಂಧಿಸಿದ್ದರು. ಕಲಬುರ್ಗಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಟ್ ಶುಕ್ರವಾರ ಪ್ರವೀಣ್‌ನನ್ನು ತನ್ನ ಕಸ್ಟಡಿಗೆ ಪಡೆದುಕೊಂಡಿದೆ ಎಂದು indianexpress.com ವರದಿ ಮಾಡಿದೆ.

 ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಎರಡನೇ ಆರೋಪಿಯನ್ನು ಸಿಟ್ ಗುರುತಿಸಿದ್ದು, ಆತನೇ ಗಣೇಶ್ ಮಿಸ್ಕಿನ್. ಈತ ಕಲಬುರ್ಗಿಯವರನ್ನು ಮನೆ ಬಾಗಿಲಲ್ಲಿ ಗುಂಡಿಟ್ಟು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. 2018ರ ನವೆಂಬರ್ ‌ನಲ್ಲಿ ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಿರುವ ಚಾರ್ಜ್‌ ಶೀಟ್‌ ನಲ್ಲಿ ಗೌರಿ ಕೊಲೆ ಪ್ರಕರಣದಲ್ಲಿ ಮಿಸ್ಕಿನ್ ಭಾಗಿಯಾಗಿದ್ದಾನೆಂದು ಕರ್ನಾಟಕದ ಸಿಟ್ ಹೇಳಿತ್ತು. ಗೌರಿಯವರನ್ನು ಅವರ ಮನೆಯಲ್ಲಿ ಗುಂಡಿಕ್ಕಿ ಕೊಂದಿರುವ ಪರಶುರಾಮ್ ವಾಘ್ಮೋರೆಯನ್ನು ಬೈಕ್‌ ನಲ್ಲಿ ಮಿಸ್ಕಿನ್ ಕರೆದೊಯ್ದಿದ್ದ ಎಂದು ಸಿಟ್ ಹೇಳಿದೆ. ಮಿಸ್ಕಿನ್‌ ಗೆ ಕಲಬುರ್ಗಿ ಪ್ರಕರಣದಲ್ಲೂ ಸಂಬಂಧವಿದೆ ಎಂಬ ವಿಚಾರ ಕಳೆದ ವರ್ಷ ಗೊತ್ತಾದ ತಕ್ಷಣ ಕರ್ನಾಟಕದ ಸಿಐಡಿ ಆತನನ್ನು ಬಂಧಿಸಿತ್ತು.

‘‘ಚತುರ್ ‌ನನ್ನು ಧಾರವಾಡದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗಾಗಿ ಜೂ.7ರ ತನಕ ಕಸ್ಟಡಿಗೆ ಪಡೆಯಲಾಗಿದೆ’’ ಎಂದು ಶನಿವಾರ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.

ಲಂಕೇಶ್ ಹತ್ಯೆಯ ತನಿಖೆ ನಡೆಸುತ್ತಿರುವ ಸಿಟ್‌ ಗೆ ಕಲಬುರ್ಗಿ ಪ್ರಕರಣವನ್ನು ಹಸ್ತಾಂತರಿಸಲಾಗಿದೆ. ಲಂಕೇಶ್ ಹಾಗೂ ಕಲಬುರ್ಗಿ ಹತ್ಯೆಯಲ್ಲಿ ಸಾಮ್ಯತೆಯಿದ್ದು, ಇಬ್ಬರ ಹತ್ಯೆಯಲ್ಲಿ ಸ್ವದೇಶಿ ನಿರ್ಮಿತ ಗನ್‌ನ್ನು ಬಳಸಲಾಗಿತ್ತು. ಕಲಬುರ್ಗಿ ಅವರ ಪತ್ನಿ ಅವರ ಮನವಿ ಮೇರೆಗೆ 2019ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಟ್‌ ಗೆ ಒಪ್ಪಿಸಿತ್ತು.

ಲಂಕೇಶ್ ಹತ್ಯೆಕೋರರಿಗೆ ಕದ್ದ ಮೋಟಾರ್‌ ಬೈಕನ್ನು ನೀಡಿದ್ದ ಮೋಟಾರ್‌ ಸೈಕಲ್ ಮೆಕ್ಯಾನಿಕ್ ವಾಸುದೇವ ಸೂರ್ಯವಂಶಿ, ಕಲಬುರ್ಗಿ ಹತ್ಯೆಯಲ್ಲಿ ಬಳಕೆಯಾಗಿದ್ದ ಬೈಕ್‌ ನ್ನು ತಾನು ನೀಡಿದ್ದಾಗಿ ತನಿಖೆಯಲ್ಲಿ ಹೇಳಿದ್ದಾನೆ.

ಚತುರ್ ಹಾಗೂ ಮಿಸ್ಕಿನ್ 2015ರ ಎ.30ರಂದು ಬೆಳಗ್ಗೆ ಧಾರವಾಡದಲ್ಲಿರುವ ಕಲಬುರ್ಗಿ ಮನೆಗೆ ಬೈಕ್ ‌ನಲ್ಲಿ ತೆರಳಿದ್ದರು. ಚತುರ್ ಬೈಕನ್ನು ಚಲಾಯಿಸಿದ್ದ ಹಾಗೂ ಮಿಸ್ಕಿನ್ ಗುಂಡು ಹಾರಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಾಕ್ಷಿಗಳು ಕಲಬುರ್ಗಿ ಹತ್ಯೆಯ ದಿನ ಇಬ್ಬರನ್ನೂ ನೋಡಿದ್ದಾಗಿ ಸಾಕ್ಷ್ಯ ನುಡಿದಿದ್ದಾರೆ.

‘‘ಧಾರವಾಡದಲ್ಲಿ ನಡೆದಿರುವ ಹತ್ಯೆಯನ್ನು ಸಣ್ಣ ಗುಂಪೊಂದು ಸಣ್ಣ ಕಾರ್ಯಾಚರಣೆಯೊಂದರಲ್ಲಿ ನಡೆಸಿದೆ. ಧಾರವಾಡ ಪ್ರಕರಣದಲ್ಲಿ ಗೌರಿ ಲಂಕೇಶ್ ಪ್ರಕರಣಕ್ಕಿಂತ ಭಿನ್ನವಾಗಿ ಯೋಜಿಸಲಾಗಿತ್ತು. ಹಲವು ತಪ್ಪುಗಳು ಶಂಕಿತರನ್ನು ಗುರುತಿಸಲು ನೆರವಾಯಿತು’’ ಎಂದು ಮೂಲಗಳು ತಿಳಿಸಿವೆ.

 ಲಂಕೇಶ್ ಪ್ರಕರಣದ ತನಿಖೆಯ ವೇಳೆ ತನಿಖಾಧಿಕಾರಿಗಳು ಚತುರ್ 2014-15ರಲ್ಲಿ ಸನಾತನ ಸಂಸ್ಥೆ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಆಯೋಜಿಸಿದ್ದ ಮೂರು ಶಸ್ತ್ರಾಸ್ತ್ರ ಹಾಗೂ ಸ್ಪೋಟಕ ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದ ಗೊತ್ತಾಗಿದೆ ಎಂದು indianexpress.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News