ನೀರು ಕೇಳಿದ ಮಹಿಳೆಗೆ ಒದ್ದ ಬಿಜೆಪಿ ಶಾಸಕ: ವೀಡಿಯೊ ವೈರಲ್

Update: 2019-06-03 08:00 GMT

ಅಹ್ಮದಾಬಾದ್ : ನರೋಡಾದ ಬಿಜೆಪಿ ಶಾಸಕ ಬಲರಾಂ ಥವಾನಿ ಅವರ ಕಚೇರಿಯೆದುರು ಪ್ರತಿಭಟನೆ ನಡೆಸುವುದಾಗಿ ಬೆದರಿಸಿದ ಮಹಿಳೆಯನ್ನು ಶಾಸಕ ತುಳಿಯುತ್ತಿರುವ ವೀಡಿಯೊ ವೈರಲ್ ಆಗಿದೆ.

ನೀರಿನ ಸಂಪರ್ಕವನ್ನು ಕಡಿದು ಹಾಕುವುದಕ್ಕಿಂತ ಮುನ್ನ ಕೆಲ ಕಚೇರಿಗಳು ಹಾಗೂ ಮನೆಗಳಿಗೆ ಎರಡು ದಿನಗಳ ಕಾಲಾವಕಾಶ ನೀಡದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿ ನೀತು ಎಂಬ ಮಹಿಳೆ ಹೇಳಿದ್ದರೆನ್ನಲಾಗಿದೆ.

ಮಹಿಳೆಯ ಜತೆ ವ್ಯಾಗ್ಯುದ್ಧದ ನಂತರ ಥವಾನಿ ಮತ್ತವರ ಸಹವರ್ತಿಗಳು ಮಹಿಳೆಗೆ ಹಲ್ಲೆ ನಡೆಸಿದ್ದರೆಂದು ದೂರಲಾಗಿದೆ. ಶಾಸಕ ಆಕೆಯನ್ನು ತುಳಿದರೆ ಅವರ ಇನ್ನೊಬ್ಬ ಸಹವರ್ತಿ ಆಕೆಗೆ ಕಪಾಳಮೋಕ್ಷಗೈಯ್ಯುತ್ತಿರುವುದು ಕಾಣಿಸುತ್ತದೆ. ನೀತುವಿನ ಪತಿ ರಾಜೇಶ್ ತೇಜ್ವಾನಿ ಎಂಬಾತನನ್ನೂ ಶಾಸಕನ  ಸಹವರ್ತಿಗಳು ಅವಮಾನಿಸಿದ್ದಾರೆನ್ನಲಾಗಿದೆ.

ಮಾಯಾ ಸಿನೆಮಾ ಸಮೀಪ ಅಕ್ರಮ ನೀರಿನ ಸಂಪರ್ಕವನ್ನು ಕಡಿತಗೊಳಿಸುವ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲು ಥವಾನಿಯ ಸೋದರ ಕಿಶೋರ್ ಕಳೆದ ವಾರ ಆಗಮಿಸಿದ ನಂತರ ವಿವಾದ ಏರ್ಪಟ್ಟಿತ್ತು. ಈ ಸಂದರ್ಭ ಕಿಶೋರ್ ಸ್ಥಳೀಯರೊಬ್ಬರನ್ನು ನಿಂದಿಸಿದ್ದಾನೆನ್ನಲಾಗಿದೆ. ರವಿವಾರ, ಎನ್‍ಸಿಪಿಯ ವಾರ್ಡ್ ಉಸ್ತುವಾರಿಯಾಗಿರುವ ನೀತು,  ಥವಾನಿಯನ್ನು ಭೇಟಿಯಾಗಿ ಧರಣಿ ನಡೆಸಲು ನಿರ್ಧರಿಸಿದ್ದರು.

''ನೀರಿನ ಸಂಪರ್ಕ ಕಡಿತಗೊಳಿಸುವ ಮುನ್ನ ಎರಡು ದಿನಗಳ ಕಾಲಾವಕಾಶ ನೀಡುವಂತೆ ಕೋರಲು ಹೋಗಿದ್ದೆ, ಆದರೆ ಥವಾನಿ ಮತ್ತವರ  ಸಹವರ್ತಿಗಳು ಬಲವಂತದಿಂದ ಕಾರ್ಯ ಸಾಧಿಸಲು ಯತ್ನಿಸಿದರು. ಕೆಲವರ ಬಳಿ ಹಾಕಿ ಸ್ಟಿಕ್ ಕೂಡ ಇತ್ತು,'' ಎಂದು ನೀತು ದೂರಿದ್ದಾರೆ.

ಆದರೆ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡ ಶಾಸಕ ತಾನು ಆತ್ಮರಕ್ಷಣೆಗಾಗಿ ಹಾಗೆ ಮಾಡಿದ್ದು ಎಂದಿದ್ದಾರೆ. ಸಮಸ್ಯೆಯನ್ನು ಸೋಮವಾರದೊಳಗೆ ಪರಿಹರಿಸುವುದಾಗಿ ಹೇಳಿದರೂ ಜನರು ಘೋಷಣೆ ಕೂಗಲಾರಂಭಿಸಿದ್ದರು. ಆಗ ಒಬ್ಬ  ವ್ಯಕ್ತಿ ಹಿಂದಿನಿಂದ ನನಗೆ ಹಲ್ಲೆ ಮಾಡಿದ. ಕಚೇರಿ ಹೊರಗಡೆ ಬಂದಾಗ ನನ್ನನ್ನು ದೂಡಲಾಯಿತು, ಈ ಸಂದರ್ಭ ನಾನು ಮಹಿಳೆಗೆ ಪ್ರಮಾದವಶಾತ್ ಹೊಡೆದಿರಬಹುದು. ಈ ಘಟನೆ ನಡೆಯಬಾರದಾಗಿತ್ತು,'' ಎಂದು ಶಾಸಕ ಹೇಳಿಕೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News