ಹಿಂದಿ ಹೇರಿಕೆ ಸಹಿಸಲು ಸಾಧ್ಯವಿಲ್ಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2019-06-03 13:01 GMT

ಬೆಂಗಳೂರು, ಜೂ. 3: ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಸಹಿಸಲಾಗದು’ ಎಂದು ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

‘ಕನ್ನಡ ನಮ್ಮ ಅಸ್ಮಿತೆ. ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ರಾಜ್ಯದ ಜನಪ್ರತಿನಿಧಿಗಳೆಲ್ಲರೂ ಪಕ್ಷಾತೀತವಾಗಿ ಚಿಂತನೆ ಮಾಡಬೇಕೆಂದು ನನ್ನ ಮನವಿ’ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.

‘ಶಿಕ್ಷಣದಲ್ಲಿ ಮಾತೃಭಾಷೆಯಲ್ಲದ ಭಾಷೆ ಐಚ್ಛಿಕವಾಗಿರಬೇಕೆಯೇ ಹೊರತು ಕಡ್ಡಾಯವಾಗಬಾರದು. ಇದು ಇನ್ನೊಂದು ಭಾಷೆಯ ಒತ್ತಾಯಪೂರ್ವಕ ಹೇರಿಕೆಯಂತಾಗಿ ಮಗುವಿನ ಕಲಿಕೆಯ ಶಕ್ತಿಯನ್ನು ಕುಂಠಿತಗೊಳಿಸುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ಹಿಂದಿ ಭಾಷಿಗರಲ್ಲದವರ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂಬುದು ನನ್ನ ಭಾವನೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದು, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

‘ನಮ್ಮ ನಾಡು ವಿವಿಧತೆಯಲ್ಲಿ ಏಕತೆಯಿಂದ ಕೂಡಿದೆ. ಸಮಾಜಕ್ಕೆ ಶಾಂತಿಯುತ ಸಹಬಾಳ್ವೆ ಮತ್ತು ಸಾಮರಸ್ಯದ ಅಗತ್ಯವಿದೆ. ಕನ್ನಡ ನಮ್ಮ ಅಸ್ಮಿತೆ. ಇತರ ಯಾವುದೇ ಭಾಷೆಯನ್ನು ಕಲಿಯುವುದು ನಮ್ಮ ಆಯ್ಕೆಯಾಗಿರಬೇಕೇ ವಿನಃ ಹೇರಿಕೆಯಾಗಬಾರದು ಎಂದು ತಿಳಿಸಿದ್ದಾರೆ.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯು ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯನ್ನು ಹೇರುತ್ತದೆ. ಇದು ನಮ್ಮ ಭಾವನೆಗಳಿಗೆ ವಿರುದ್ಧವಾಗಿದೆ. ಪ್ರಾದೇಶಿಕ ಅಸ್ತಿತ್ವವನ್ನು ಗುರುತಿಸುವುದು ಕೆಲವರ ಪ್ರಕಾರ ಅಸಮಂಜಸ ಎಂದಾದಲ್ಲಿ ಹಿಂದಿ ಹೇರಿಕೆಯು ನಮ್ಮ ರಾಜ್ಯದ ಮೇಲಿನ ಕ್ರೂರ ಆಕ್ರಮಣವಲ್ಲದೆ ಬೇರೇನೂ ಅಲ್ಲ. ಹಿಂದಿ ಹೇರಿಕೆ ನಿಲ್ಲಿಸಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ‘ಹಿಂದಿ ಹೇರಿಕೆ ಮಾಡುವ ಬದಲು ಪ್ರಾದೇಶಿಕ ಅಸ್ತಿತ್ವವನ್ನು ಸರಕಾರ ಗುರುತಿಸಬೇಕು. ತಮ್ಮದೇ ಆದ ಭಾಷೆ, ಸಂಸ್ಕೃತಿಯ ಮೂಲಕ ಅಭಿವ್ಯಕ್ತಿಗೆ ರಾಜ್ಯಗಳಿಗೆ ಹೆಚ್ಚು ಅವಕಾಶ ನೀಡಬೇಕು. ನಾವೆಲ್ಲ ಭಾರತದಲ್ಲಿರುವ ಕನ್ನಡಿಗರು’ ಎಂದು ಟ್ವಿಟ್ಟರ್‌ನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News